ಜಮಖಂಡಿ: ನಿಂದನೆ ಮಾಡುವುದು, ಚಾಡಿ ಹೇಳುವುದನ್ನು ಹೆಣ್ಣು ಮಕ್ಕಳು ಬಿಡಬೇಕು. ಇನ್ನೊಬ್ಬರ ಮನೆಗೆ ಬೆಂಕಿ ಹಚ್ಚಿದರೆ ನಮ್ಮ ಮನೆಗೆ ಬೆಂಕಿ ಹಚ್ಚುವವರು ಇರುತ್ತಾರೆ. ಆದ್ದರಿಂದ ದ್ವೇಷ ಬಿಡಿ, ಪ್ರೀತಿ ಮಾಡಿ ಎಂದು ಓಲೆಮಠದ ಆನಂದ ದೇವರು ಹೇಳಿದರು.
ನಗರದ ಓಲೆಮಠದ ಆಶ್ರಯದಲ್ಲಿ ತಾಲ್ಲೂಕಿನ ಆಲಬಾಳ ಗ್ರಾಮದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ವ್ಯಸನಮುಕ್ತ ಗ್ರಾಮಗಳ ಸಂಕಲ್ಪದ ಜನಜಾಗೃತಿ ಯಾತ್ರೆಯ ಐದು ದಿನಗಳ ಪ್ರವಚನದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಇಂದಿನ ಯುವಕರು ದುಶ್ಚಟಗಳಿಂದ ದೂರವಿದ್ದು ತಂದೆ-ತಾಯಿಗಳನ್ನು ಖುಷಿ ಪಡಿಸಬೇಕು. ಗಂಡನನ್ನೆ ನಂಬಿ ಬಂದ ಹೆಂಡತಿ ಸುಖವಾಗಿರಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣ ಆಗಬೇಕು ಎಂಬ ಸದುದ್ದೇಶದಿಂದ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ದೇಶದ ಗಡಿ ಕಾಯುವ ಯೋಧರು ಹಾಗೂ ಹೊಟ್ಟೆಗೆ ಅನ್ನ ನೀಡುವ ರೈತರು ಇರುವುದರಿಂದಲೆ ದೇಶವಾಸಿಗಳೆಲ್ಲರೂ ಸುಖವಾಗಿ ಇರುತ್ತಾರೆ. ಹಾಗಾಗಿ ರೈತರು ಮತ್ತು ಯೋಧರು ದೇಶದ ಎರಡು ಆಸ್ತಿ. ಚಳಿ, ಮಳೆ, ಬಿಸಿಲು ಏನಿದ್ದರೂ ದೇಶವನ್ನು ಕಾಯುವ ಶಕ್ತಿ ಯೋಧರಿಗಿದೆ ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮುಖ್ಯ ಅತಿಥಿಯಾಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ದುಶ್ಚಟಗಳನ್ನು ದೂರ ಮಾಡಲು, ಯುವಕರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು ಓಲೆಮಠದ ಆನಂದ ದೇವರು ಶ್ರೀಗಳು ಹಮ್ಮಿಕೊಂಡಿರುವ ಒಳ್ಳೆಯ ಚಿಂತನ ನೀಡುವ ಕಾರ್ಯಕ್ರಮವಾಗಿದೆ ಎಂದರು.
ಝುಂಜರವಾಡದ ಬಸವರಾಜೇಂದ್ರ ಶರಣರು ಪ್ರವಚನ ನೀಡಿದರು. ತಾಲ್ಲೂಕು ಗಾಣಿಗ ಸಮಾಜದ ಅಧ್ಯಕ್ಷ ಕೆ.ಕೆ. ತುಪ್ಪದ ಮಾತನಾಡಿದರು. ಸುಮಾರು ೨೫ ಜನ ಮಾಜಿ ಯೋಧರು ಮತ್ತು ಪತಿಯನ್ನು ಕಳೆದುಕೊಂಡ ೧೫ ಜನ ಯೋಧರ ಪತ್ನಿಯರನ್ನು ಸನ್ಮಾನಿಸಿ ‘ಸಮಾಜಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುತ್ತೂರಿನ ರಾಚೋಟೇಶ್ವರ ಮಠದ ಗುರುಸಿದ್ಧ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಹುಲ್ಯಾಳದ ದುಂಡಯ್ಯ ಸ್ವಾಮಿಗಳು, ಬಸಲಿಂಗಯ್ಯ ಹಿರೇಮಠ, ಸಿದ್ರಾಮಯ್ಯಾ ಹಿರೇಮಠ, ಪ್ರದೀಪ ಮೆಟಗುಡ್ಡ ಇತರರು ಇದ್ದರು.
ಸಾನಿಯಾ ಹುನಗುಂದ ಭರತನಾಟ್ಯ ಪ್ರದರ್ಶಿಸಿದರು. ಬಾಲಕಿ ಸಮೃದ್ಧಿ ಮಠಪತಿ ಸಂಸ್ಕೃತ ಶ್ಲೋಕ ಪಠಿಸಿದಳು. ಸೋಮನಗೌಡ ಪಾಟೀಲ ನಿರೂಪಿಸಿದರು.

