ಹುನಗುಂದ: ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ದಾನಿಗಳು ಊಟದ ತಟ್ಟೆಗಳನ್ನು ವಿತರಿಸಿದರು.
ಬೆಂಗಳೂರಿನ ಬಿಹೆಚ್ಇಎಲ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಮೂಲತಃ ಹುನಗುಂದ ತಾಲೂಕಿನ ತುಂಬ ಗ್ರಾಮದವರಾದ ಆದಪ್ಪ ನಾಗೂರ 150 ಊಟದ ತಟ್ಟೆಗಳನ್ನು ಕಾಣಿಕೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಮಾಜದ ಪಾತ್ರ ಬಹಳ ದೊಡ್ಡದು. ಆ ನಿಟ್ಟಿನಲ್ಲಿ ಸಮಾಜದ ಒಂದು ಭಾಗವಾಗಿ ನಮ್ಮ ಕುಟುಂಬ ಸರಕಾರಿ ಶಾಲಾ ಮಕ್ಕಳಿಗೆ ಕಳೆದ 15 ವರ್ಷದಿಂದ ಸೇವೆ ಸಲ್ಲಿಸುತ್ತಾ ಬಂದಿದೆ. ಬಾಲ್ಯದಲ್ಲಿ ಸರಕಾರಿ ಶಾಲೆಯಲ್ಲಿ ಓದಿ ವಿದ್ಯಾವಂತರಾಗಿ ಬದುಕು ಕಟ್ಟಿಕೊಂಡಿರುವ ನಾವು ನಮ್ಮ ದುಡಿಮೆಯ ಒಂದು ಪಾಲನ್ನು ಶಾಲಾ ಮಕ್ಕಳಿಗೆ ಉಪಯುಕ್ತವಾಗುವ ಕಾರ್ಯಕ್ಕೆ ಬಳಸುತ್ತಾ ಬಂದಿದ್ದೇವೆ. ನಮ್ಮ ಪರಿಚಯದವರ ಮೂಲಕ ಅರ್ಹ ಶಾಲೆಯನ್ನು ಗುರುತಿಸಿ ಪ್ರತಿವರ್ಷ ಒಂದು ಅಥವಾ ಎರಡು ಶಾಲೆಗಳ ಮಕ್ಕಳಿಗೆ ಊಟದ ತಟ್ಟೆಗಳನ್ನು ಕೊಡಿಸುತ್ತಿದ್ದೇವೆ. ಹೀಗೆ ಸರಕಾರ ಹಾಗೂ ಸಮಾಜದ ಸೇವಾ ಸೌಲಭ್ಯ ಪಡೆದ ಮಕ್ಕಳು ಓದಿ ಉನ್ನತ ಶಿಕ್ಷಣ ಪಡೆದು ಸಮಾಜದ ಆಸ್ತಿಯಾಗಬೇಕು ಸುಸಂಸ್ಕೃತ ನಾಗರಿಕರಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಶಿಕ್ಷಕ ಪ್ರಭು ಮಾಲಗಿತ್ತಿ ಮಾತನಾಡುತ್ತಾ, ಕೊಟ್ಟಿದ್ದನ್ನು ಮರೆಯಬೇಕು; ಪಡೆದದ್ದನ್ನು ಸ್ಮರಿಸಬೇಕು ಎಂಬ ಮಾತಿನಂತೆ ಬೆಂಗಳೂರಿನಿಂದ ನಮ್ಮ ಶಾಲೆಯನ್ನು ಹುಡುಕಿಕೊಂಡು ಬಂದು ಶಾಲೆಯ ಎಲ್ಲ ಮಕ್ಕಳಿಗೂ ಊಟದ ತಟ್ಟೆಯನ್ನು ಕಾಣಿಕೆಯಾಗಿ ನೀಡಿದ ಆದಪ್ಪ ನಾಗೂರ ಕುಟುಂಬದ ಸೇವೆ ಸ್ಮರಣೀಯವಾದದು. ಇನ್ನಷ್ಟು ಮತ್ತಷ್ಟು ಆಸ್ತಿ ಗಳಿಸಬೇಕು ಎಂದು ಹಪಹಪಿಸುವ ಇಂದಿನ ಬಹುತೇಕ ಜನರಲ್ಲಿ ಉದಾರತೆ ಮತ್ತು ದಾನಗುಣ ಸಂಪನ್ನರು ವಿರಳ. ಇಂತಹವರ ಸಂಖ್ಯೆ ಹೆಚ್ಚಾಗಲಿ. ಆ ಮೂಲಕ ಸಮಾಜಕ್ಕೆ ಅಗತ್ಯ ಸೇವೆ ದಕ್ಕುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ದಾನಿಗಳಿಗೆ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಮುಖ್ಯಗುರು ಪಿ.ಬಿ. ನೆರ್ತಿ ಎಲ್ಲ ಮಕ್ಕಳಿಗೂ ನೀರು ಕುಡಿಯಲು ಸಹಾಯಕವಾಗುವ ಅಂದಾಜು 5000 ವೆಚ್ಚದಲ್ಲಿ 150 ಸ್ಟೀಲ್ ಲೋಟಗಳನ್ನು ಕೊಡಿಸುವುದಾಗಿ ವಾಗ್ದಾನ ಮಾಡಿದರು. ಉಮಾ ನಾಗೂರ, ಮಹಾಂತೇಶ ನಾಗೂರ, ನೀಲಾ, ಎಸ್ ಡಿ ಎಂ ಸಿ ಸದಸ್ಯ ಸಂಗಪ್ಪ ಈರಣ್ಣವರ, ಹಿರಿಯರಾದ ಬಸವಂತಪ್ಪ ಕೊಣ್ಣೂರ, ಶಿಕ್ಷಕರಾದ ಎಸ್ ಎಸ್ ಲಾಯಲಗುಂದಿ, ಸುಭಾಷ್ ಕಣಗಿ, ಮಹಾಂತೇಶ ವಂದಾಲಿ, ಅಶೋಕ ಬಳ್ಳಾ ಅಕ್ಷರ ದಾಸೋಹ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.