ಮನೆಗೆ ಬಂದತಿಥಿಗಳ ದೇವರೆನುವುದು ಸೂಕ್ತಿ
ಬರಿದೆ ಬಾಯುಪಚಾರ ಮಾಡಬೇಡ
ನಿನ್ನ ಮನೆಯೊಳಗಿರುವ ಗಂಜಿಯಾದರು ಕೊಟ್ಟು
ಅತಿಥಿಗಳ ಸತ್ಕರಿಸು – ಎಮ್ಮೆತಮ್ಮ||೧೫೮||
ಶಬ್ಧಾರ್ಥ
ಸೂಕ್ತಿ = ಸುಭಾಷಿತ, ವೇದದಲ್ಲಿಯ ಸ್ತೋತ್ರ. ಬಾಯುಪಚಾರ = ಕೇವಲ ಬಾಯಿಮಾತಿನ ಮನ್ನಣೆ. ಸತ್ಕರಿಸು = ಉಪಚರಿಸು
ತಾತ್ಪರ್ಯ
ಅತಿಥಿ ದೇವೋ ಭವ ಎಂದರೆ ಅತಿಥಿಗಳು ದೇವರಿಗೆ ಸಮಾನ. ಇದು ತೈತ್ತಿರೀಯ ಉಪನಿಷತ್ತಿನಲ್ಲಿಯ ಉಕ್ತಿ. ಅತಿಥಿ ಎಂದರೆ ಯಾವ ತಿಥಿ ವಾರ ಹೇಳದೆ ಕೇಳದೆ ಅನಪೇಕ್ಷಿತವಾಗಿ ಬರುವವನು. ಅತಿಥಿಗಳು ಮನೆಗೆ ಬಂದಾಗ ಪ್ರೀತಿಯಿಂದ ಅವರ ಯೋಗಕ್ಷೇಮ ವಿಚಾರಿಸಿ ಮನೆಯೊಳಗೆ ಕರೆದು ಕೂಡಿಸಬೇಕು. ಯಾವುದೆ ಉಪಚಾರ ಮಾಡದೆ ಬರಿ ಒಂದೆರಡು ಮಾತನಾಡಿ ಕಳಿಸಬಾರದು ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಅವರಿಗೆ ಮನೆಯಲ್ಲಿ ಇರುವ ಹಣ್ಣು, ಹಂಪಲು ಹಾಲು ಕೊಟ್ಟು ಸತ್ಕರಿಸಬೇಕು. ಅದಿಲ್ಲದಿದ್ದರೆ ಮನೆಯಲ್ಲಿ ಇರುವ ಗಂಜಿಯಾಗಲಿ ಚಹ ಕಾಫಿಯಾಗಲಿ ಕೊಟ್ಟು ಕುಡಿಸಬೇಕು. ಏಕೆಂದರೆ ಅತಿಥಿಗಳು ದೇವರು ಇದ್ದ ಹಾಗೆ. ಅವರನ್ನು ಸತ್ಕರಿಸುವುದರಿಂದ ದೇವರ ಆಶೀರ್ವಾದ ನಮಗೆ ದೊರಕುತ್ತದೆ. ರಾಮಾಯಣ ಮಹಾಭಾರತದಲ್ಲಿ ಅತಿಥಿ ಸತ್ಕಾರದ ಕತೆಗಳು ಬರುತ್ತವೆ. ಶ್ರೀರಾಮಲಕ್ಷ್ಮಣ ಪಂಪಾಸರೋವರಕ್ಕೆ ಬಂದಾಗ ಶಬರಿ ಹಣ್ಣುಹಂಪಲು ನೀಡಿ ಸತ್ಕರಿಸಿದಳು. ಹಾಗೆ ಶ್ರೀಕೃಷ್ಣನ ಅರಮನೆಗೆ
ಸುಧಾಮ ಬಂದಾಗ ಆತನ ಪಾದಪೂಜಿಸಿ ಪ್ರೀತಿಯಿಂದ ಗೆಳೆಯನನ್ನು ಸತ್ಕರಿಸಿದನು. ಅತಿಥಿ ಸತ್ಕಾರ ಭಾರತೀಯರಲ್ಲಿ ಹೀಗೆ ಸಂಸ್ಕೃತಿಯ ಸಂಕೇತವಾಗಿ ಆಚರಿಸಲ್ಪಡುತ್ತದೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990