ಸಿದ್ಧಾಂತಗಳ ಕುರಿತು ರಾದ್ಧಾಂತವೇತಕ್ಕೆ ?
ಇರುವುದೊಂದೂರಿಗಿವೆ ದಾರಿನೂರು
ಇಲ್ಲಿಂದ ಅಲ್ಲಿಂದ ಎಲ್ಲಿಂದ ನೋಡಿದರು
ಕಾಣುವನು ರವಿಯೊಬ್ಬ – ಎಮ್ಮೆತಮ್ಮ
ತಾತ್ಪರ್ಯ
ಸಿದ್ಧಾಂತ = ನಿರ್ಣಯಾತ್ಮಕ ತತ್ತ್ವ.
ರಾದ್ಧಾಂತ = ವಾದ, ವಿವಾದ ನಿರ್ಣಯ, ರಂಪ
ತಾತ್ಪರ್ಯ
ಶಾಸ್ತ್ರಗ್ರಂಥಗಳನ್ನು ಅಧ್ಯಯನ ಮಾಡಿ ಒಂದು ತತ್ತ್ವವನ್ನು
ನಿರ್ಣಯಿಸಿ ವಾದ ವಿವಾದವನ್ನು ಹುಟ್ಟುಹಾಕಬಾರದು.
ನಮ್ಮ ತತ್ತ್ವವೇ ಶ್ರೇಷ್ಠ ಎಂದು ವಾದಿಸಬಾರದು.ಅವರವರ
ಭಾವಕ್ಕೆ ಅವರವರ ಭಕ್ತಿಗೆ ತಿಳಿದದ್ದನ್ನು ಅವರು ಆಚರಿಸುವರು. ಅವರ ಆಚಾರ ವಿಚಾರವನ್ನು ಅಲ್ಲಗಳೆಯಬಾರದು.ಇದರಿಂದ ಘರ್ಷಣೆ ಉಂಟಾಗುತ್ತದೆ. ಒಂದು ಊರಿಗೆ ಬರಲು ಸುತ್ತುಕಡೆ ನೂರಾರು ದಾರಿಗಳಿರುತ್ತವೆ. ಅವರವರ ದಾರಿಯಲ್ಲಿ ನಡೆದು
ಬರುತ್ತಾರೆ ಮತ್ತು ಊರು ತಲುಪುತ್ತಾರೆ. ಹಾಗೆ ಇರುವೊಬ್ಬ ಸೂರ್ಯನನ್ನು ಅಲ್ಲಿಂದಾಗಲಿ ಇಲ್ಲಿಂದಾಗಲಿ ಮತ್ತೆಲ್ಲಿಂದಾಗಲಿ ನೋಡಿದರೆ ಕಾಣಿಸುತ್ತಾನೆ. ಹಾಗೆ ಯಾವ ಸಿದ್ಧಾಂತವನ್ನು ಅನುಸರಿಸಿದರು ಕೊನೆಗೆ ಗುರಿ ತಲುಪುವುದು ಮಾತ್ರ ಒಂದೆ. ಆದಕಾರಣ ಅಲ್ಲಮ ಪ್ರಭುಗಳು ಒಂದು ವಚನದಲ್ಲಿ ತರ್ಕವೆಂಬುದು ಟಗರ ಹೋರಟೆ ಎಂದು ವಿಡಂಬಿಸುತ್ತಾರೆ.
ಎರಡು ಟಗರುಗಳು ಹೇಗೆ ಒಂದೊಕ್ಕೊಂದು ಎದುರಾಗಿ
ಡಿಕ್ಕಿ ಹೊಡೆದು ಹೋರಾಡಿ ತಲೆಗೆ ಪೆಟ್ಟು ಮಾಡಿಕೊಳ್ಳುತ್ತವೆ.
ಹಾಗೆ ತರ್ಕದಿಂದ ಯಾವ ಲಾಭವಿಲ್ಲ ಬರಿ ಒಣ ಹೋರಾಟ
ಹಾರಾಟ.ಆದಕಾರಣ ನಿನ್ನ ದಾರಿಯನ್ನು ಹಿಡಿದು ಗುರಿ
ತಲುಪು ಸಾಕು. ಬೇರೆಯವರ ಉಸಾಬರಿಗೆ ಹೋಗಬೇಡ.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ
9449030990