ದೇಶ ಸುತ್ತಿದರಿಲ್ಲ ಕೋಶ ಓದಿದರಿಲ್ಲ
ಪುಣ್ಯಕ್ಷೇತ್ರದಿ ಮುಳುಗಿ ಬಂದರಿಲ್ಲ
ಸುಳಿದು ಸೂಸುವ ಮನವ ಶ್ವಾಸದಲಿ ನಿಲಿಸಿದರೆ
ನಿಚ್ಚ ನಿರ್ಮಲ ಬೆಳಕು – ಎಮ್ಮೆತಮ್ಮ
ಶಬ್ಧಾರ್ಥ
ಕೋಶ = ಪುಸ್ತಕ
ತಾತ್ಪರ್ಯ
ದೇಶವೆಲ್ಲ ತಿರುಗಾಡಿ ಕಾಶಿ, ಕೇದಾರ, ಶ್ರೀಶೈಲ, ಹೃಷಿಕೇಶ, ಮೆಕ್ಕಾ, ಮದೀನಾ, ಜೆರುಸಲೇಮ, ಬುದ್ಧಗಯಾ, ಅಯೋಧ್ಯ, ಮಥುರಾ , ಅಮೃತಸರ , ಕೂಡಲಸಂಗಮ ಮುಂತಾದ ಕ್ಷೇತ್ರಗಳ ಸುತ್ತಾಡಿ ದರ್ಶನಮಾಡಿ ಬಂದರೂ ಯಾವ ಲಾಭವಿಲ್ಲ. ವೇದ , ವಚನ ಉಪನಿಷತ್ತು, ಭಗವದ್ಗೀತೆ , ಬೈಬಲ್ಲು, ಕುರಾನು, ಗುರುಗ್ರಂಥ ಸಾಹೇಬ, ತ್ರಿಪಿಟಿಕಾ, ಇತ್ಯಾದಿ ಆಧ್ಯಾತ್ಮಿಕ ಗ್ರಂಥಗಳನ್ನು ಬರಿದೆ ಓದಿದರೆ ಉಪಯೋಗವಿಲ್ಲ. ಮತ್ತೆ ಪುಣ್ಯಕ್ಷೇತ್ರಗಳಲ್ಲಿರುವ ಗಂಗೆ,ಯಮುನೆ, ಸರಸ್ವತಿ,ಕೃಷ್ಣ,ತುಂಗಾ ಮುಂತಾದ ನದಿ ತೀರ್ಥದಲ್ಲಿ ಮುಳುಗಿ ಜಳಕಮಾಡಿ ಬಂದರೂ ಕೂಡ ಪುಣ್ಯವು ಬರುವುದಿಲ್ಲ. ಆದಕಾರಣ ನಿನ್ನ ಮನಸ್ಸನ್ನು ಉಸಿರಾಟದ ಮೇಲೆ ಧ್ಯಾಸವಿರಿಸಿ ಧ್ಯಾನಮಾಡಿದರೆ
ಆಗ ಮನ ವಿಚಾರಹಿತವಾದಾಗ ವಿಶ್ವಶಕ್ತಿ ಬ್ರಹ್ಮರಂಧ್ರದ
ಮೂಲಕ ದೇಹವನ್ನು ಸೇರುತ್ತದೆ. ಆ ಶಕ್ತಿ ಭ್ರೂಮಧ್ಯವನ್ನು
ಜಾಗ್ರತಗೊಳಿಸಿ ಅಲ್ಲಿ ಕಣ್ಣುಕೋರೈಸುವ ಮಹಾಬೆಳಗು
ಉಂಟಾಗಿ ಸಾಕ್ಷಾತ್ಕಾರವಾಗುತ್ತದೆ. ಆ ಬೆಳಕೆ ಮಹಾಜ್ಞಾನ.
ಅದರಿಂದ ಶಾಂತಿನೆಮ್ಮದಿ ಆನಂದ ದೊರಕುತ್ತದೆ. ದೇಶ
ತಿರುಗಾಡುವುದಕ್ಕಿಂತ ಕೋಶ ಓದುವುದಕ್ಕಿಂತ ಮತ್ತು
ಪುಣ್ಯಕ್ರೇತ್ರದಲ್ಲಿ ಸ್ನಾನ ಮಾಡುವುದಕ್ಕಿಂತ ನಿನ್ಮೊಳಗೆ
ನೀನಿಳಿದು ಸಾಧನೆ ಮಾಡುವುದು ಮೇಲು.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990