ಮುಂಜಾನೆ ಹೂವರಳಿ ಸಂಜೆ ನೆಲಕುರುಳಿದರು
ಹಗಲೆಲ್ಲ ನಸುನಗುತ ಜೀವಿಸುವುದು
ನಗುವ ಹೂವಿನ ಹಾಗೆ ದುಃಖವನು ದೂರಿಟ್ಟು
ತುಟಿಬಿಚ್ಚಿ ನಗೆಸೂಸು – ಎಮ್ಮೆತಮ್ಮ
ಶಬ್ಧಾರ್ಥ
ಸೂಸು = ಚಿಮ್ಮು
ತಾತ್ಪರ್ಯ
ಸೂರ್ಯನ ಕಿರಣ ಬಿದ್ದ ಕೂಡಲೆ ಮುಂಜಾವದಲ್ಲಿ ಹೂವು
ಅರಳುತ್ತದೆ ಮತ್ತು ಸಂಜೆ ಸೂರ್ಯ ಮುಳುಗಿದೊಡನೆ ನೆಲಕ್ಕೆ ಉದುರಿ ಬೀಳುತ್ತದೆ. ಆದರೆ ಆ ಹೂವು ಇಡೀ ದಿನ ಗಿಡದಲ್ಲಿ ನಗುನಗುತ ಕಾಲ ಕಳೆಯುತ್ತದೆ. ಸೌಂದರ್ಯ ಸೌರಭಗಳನ್ನು
ಎಲ್ಲಾ ಕಡೆಗೆ ಹರಡುತ್ತದೆ. ಒಂದು ದಿನ ಜೀವಿಸುವ ಹೂವು
ನಗುನಗುತ ಲವಲವಿಕೆಯಿಂದ ಇದ್ದು ಚೆಲುವನ್ನು ತೋರಿ ಮತ್ತು ಪರಿಮಳ ಹರಡಿ ಜನರ ಮನವನ್ನು ಸಂತೋಷಪಡಿಸಿ ತನ್ನ ಬದುಕು ಸಾರ್ಥಕಮಾಡಿಕೊಳ್ಳುತ್ತದೆ. ಹಾಗೆ ನಾವು ಹುಟ್ಟುವುದು ಒಂದು ದಿನ ಬದುಕುವುದು ಮೂರು ದಿನ
ಮತ್ತು ಸಾಯುವುದು ಒಂದು ದಿನವಾದರು ಎಲ್ಲರ ಜೊತೆಗೆ
ನಗುನಗುತ ಬಾಳಬೇಕು. ನಾಲ್ಕು ಜನರಿಗೆ ಉಪಕಾರ ಮಾಡಿ
ಸಾಯಬೇಕು. ದುಃಖಗಳನ್ನು ಮರೆತು ನಗಬೇಕು. ಜನರ ಸೇವೆ ಮಾಡುವುದಕ್ಕೆ ನಮ್ಮ ದುಃಖಗಳು ದೂರಿಡಬೇಕು. ಸದಾ ತುಟಿಯಮೇಲೆ ಮಂದಸ್ಮಿತವಿರಬೇಕು. ನಕ್ಕರೆ ನಿನ್ನ ಜೊತೆಗೆ ಎಲ್ಲರು ನಗುತ್ತಾರೆ. ಆದರೆ ನೀನು ದುಃಖಿಸಿದರೆ ನಿನ್ನ ಜೊತೆಗೆ ಯಾರು ನಗುವುದಿಲ್ಲ. ಮೂರು ದಿನದ ಜೀವನವನ್ನು ನಾವು ಹೂವಿನಂತೆ ಎಲ್ಲರಿಗೆ ಬೇಕಾಗಿ ಸಾರ್ಥಕಪಡಿಸಿಕೊಳ್ಳಬೇಕು.
ಮಂದಿಮಕ್ಕಳೊಳಗ ಚಂದಾಗಿ ಇರಬೇಕು |ನಂದಿಯ ಶಿವನ ದಯದಿಂದ ಹೋಗಾಗ| ಮಂದಿ ಬಾಯಾಗ ಇರಬೇಕು
ಎಂಬ ಜನಪದರ ನುಡಿಯಂತೆ ನಗುನಗುತ ಹೋಗಬೇಕು.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990