ವದನದಲಿ ನಗೆಯಿರಲಿ ಮಾತಿನಲಿ ಸೊಗವಿರಲಿ
ಹೃದಯದಲಿ ತುಂಬಿರಲಿ ಪ್ರೀತಿಕರುಣೆ
ಸಕಲರಿಗೆ ಲೇಸಾಗಲೆಂದೆಂಬ ಮನವಿರಲಿ
ಇದುವೆ ಜೀವನಯೋಗ – ಎಮ್ಮೆತಮ್ಮ
ಶಬ್ಧಾರ್ಥ
ವದನ = ಮುಖ.ಸೊಗ = ಸುಖ. ಕ್ಷೇಮ. ಲೇಸು = ಒಳಿತು
ತಾತ್ಪರ್ಯ
ನಾವು ಸುಖಕರವಾಗಿ ಬದುಕಬೇಕಾದರೆ ನಾಲ್ಕು ಗುಣಗಳನ್ನು
ಅಳವಡಿಸಿಕೊಳ್ಳಬೇಕೆಂದು ಈ ಕಗ್ಗ ಹೇಳುತ್ತಿದೆ. ಮೊದಲನೆಯದು ಮುಖದಲ್ಲಿ ಸದಾ ನಗೆಯಿರಬೇಕು. ನಾವು
ನಗುತ್ತಿದ್ದರೆ ನಗಿಸುತ್ತಿದ್ದರೆ ಎಲ್ಲರು ನಗುತ್ತ ನಮ್ಮ ಕಡೆಗೆ ಆಕರ್ಷಿತರಾಗುವರು.ಆದರೆ ಅಳುತ್ತಿದ್ದರೆ ಯಾರು ಅಳುವುದಿಲ್ಲ ಮತ್ತು ದೂರಸರಿಯುವರು. ಮುಖದಲ್ಲಿಯ
ನಗು ಒಳಗಿನ ಸಂತೋಷದ ಸೂಚಕ. ಎರಡನೆಯದು
ಮಧುರವಾಗಿ ಮಾತನಾಡಬೇಕು.ಹಿತವಾಗಿ ಮಿತವಾಗಿ
ಹಾಸ್ಯವಾಗಿ ಮಾತನಾಡಿದರೆ ಜನ ನಮ್ಮ ಸ್ನೇಹಿತರಾಗಿ ಬರುತ್ತಾರೆ. ಅದೆ ಸಿಡಿಕಿನಿಂದ ಕೋಪದಿಂದ ನಿಷ್ಠುರ
ನುಡಿಗಳಾಡಿದರೆ ದೂರ ಸರಿಯುತ್ತಾರೆ. ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು. ಮೂರನೆಯದು
ಎಲ್ಲರನ್ನು ನಾವು ಪ್ರೀತಿ ಕರುಣೆಯಿಂದ ನೋಡಬೇಕು.
ಆಗ ಎಲ್ಲರು ನಮ್ಮವರಾಗುತ್ತಾರೆ. ಅದೆ ದ್ವೇಷ ಮಾಡಿದರೆ
ಬರುವುದಿಲ್ಲ. ನಾಲ್ಕನೆಯದು ಎಲ್ಲರಿಗೆ ಒಳ್ಳೆಯದಾಗಲಿ
ಎಂಬ ಶುದ್ಧ ಮನಸಿರಬೇಕು. ಜನರಿಗೆ ಕೆಟ್ಟದ್ದು ಬಯಸಿದರೆ
ನಿನಗೆ ಕೆಟ್ಟದಾಗುತ್ತದೆ. ಈ ರೀತಿ ಬದುಕಿದರೆ ನಿಜವಾಗಿ
ಜೀವನವೆ ಯೋಗವಾಗಿ ಪರಿಣಮಿಸುತ್ತದೆ. ಜನರ ಮಧ್ಯದಲ್ಲಿ
ಇದ್ದು ಯೋಗಿಯಂತೆ ಪರಮಾನಂದ ಅನುಭವಿಸಬಹುದು.
ಆಗ ಜೀವನ ಆನಂದಮಯವಾಗಿ ಪರಿಣಮಿಸುತ್ತದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990