ಇದ್ದಷ್ಟುದಿನ ನೀನು ಹಾಯಾಗಿಯಿದ್ದುಬಿಡು
ಜಾಗಬಿಡು ಮತ್ತಿಲ್ಲಿ ಬರುವವರಿಗೆ
ಕರೆಬಂದ ತಕ್ಷಣವೆ ಹೊರಟುಬಿಡು ಗೊಣಗದೆಯೆ
ಛತ್ರವಿದು ಭೂಲೋಕ – ಎಮ್ಮೆತಮ್ಮ
ಶಬ್ಧಾರ್ಥ
ಗೊಣಗು = ತನ್ನಲ್ಲೆ ಮಾತಾಡಿಕೊಳ್ಳು.
ಛತ್ರ = ಊಟ ವಸತಿ ಒದಗಿಸುವ ಸ್ಥಳ
ತಾತ್ಪರ್ಯ
ಈ ಜಗತ್ತು ಒಂದು ಅನ್ನ ನೀರು ವಸತಿ ಒದಗಿಸುವ ಒಂದು
ಭೋಜನಶಾಲೆ. ನಾವೆಲ್ಲ ಅದರಲ್ಲಿ ತಂಗಿರುವ ಪ್ರಯಾಣಿಕರು.
ಎರಡುಮೂರು ದಿವಸ ಛತ್ರದಲ್ಲಿ ಬಂದು ಸೇರಿ ವಿಶ್ರಾಂತಿ ಪಡೆದುಕೊಂಡು ಹಾಯಾಗಿ ಇರಬೇಕು.ಮತ್ತೆ ಆ ದೇವನ
ಕರೆ ಬಂದ ಕೂಡಲೆ ಪಿಸುಗುಡದೆ ಹೊರಟುಬಿಡಬೇಕು. ಯಾರು ಇಲ್ಲಿ ಖಾಯಂ ಇರುವಂತಿಲ್ಲ. ಮುಂದೆ ಬರುವವರಿಗೆ ಜಾಗ ಖಾಲಿ ಮಾಡಿ ಅವರಿಗೆ ಅನುವು ಮಾಡಿಕೊಡಬೇಕು. ಇದು ಜಗದೀಶ ಮಾಡಿರುವಂಥ ನಿಯಮ. ಈ ನಿಯಮವನ್ನು ಎಲ್ಲರು ಅನುಸರಿಸಬೇಕಾಗುತ್ತದೆ.ಆದರೆ ಛತ್ರದಲ್ಲಿರುವಾಗ ಎಲ್ಲರೊಂದಿಗೆ ಪ್ರೀತಿವಿಶ್ವಾಸದಿಂದ ವರ್ತಿಸಬೇಕು. ಯಾವುದೆ ತರಹದ ಕೇಡು ಮಾಡುವುದಾಗಲಿ ಅಥವಾ ಕೇಡು ಬಯಸುವುದಾಗಲಿ ಮಾಡಬಾರದು. ಎಲ್ಲರ ಜೊತೆಗೆ ಸೌಹಾರ್ದದಿಂದ ವಾಸಿಸಬೇಕು. ಹೀಗೆ ಇರವಷ್ಟು ದಿನ ಸಂತೋಷ ನೆಮ್ಮದಿಯಿಂದ ಇದ್ದು ಎಲ್ಲರ ಪ್ರೀತಿಗೆ ಪಾತ್ರನಾಗಿ ನಗುನಗುತ ಕರೆಬಂದ ಕೂಡಲೆ ಹೊರಡಬೇಕು. ಛತ್ರ ಬಿಟ್ಟುಹೋಗಲು ದುಃಖಪಡಬಾರದು. ಮತ್ತೆ ಇಲ್ಲಿಗೆ ಬರುವವರಿಗೆ ಸ್ಥಳವಾಕಾಶಮಾಡಿಕೊಟ್ಟು ಇರಲು ಅನುಕೂಲ ಮಾಡಿ ಹೊರಟುಹೋಗಬೇಕು. ಹಾಗಾದರೆ ಅದು ಸಾರ್ಥಕ್ಯ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990