ಧ್ಯಾನಕ್ಕೆ ಕುಳಿತಾಗ ನೂರಾರು ಭಾವಗಳು
ಸುಳಿಸುಳಿದು ಸುತ್ತುವವು ಮನಸಿನಲ್ಲಿ
ಹಿಂದಕ್ಕೆ ಕಳಿಸದಿರು ಮುಂದಕ್ಕೆ ಬೆಳೆಸದಿರು
ನಿಜವಾದ ಧ್ಯಾನವದೆ – ಎಮ್ಮೆತಮ್ಮ
ಶಬ್ಧಾರ್ಥ
ಭಾವಗಳು = ಭಾವನೆಗಳು, ಆಲೋಚನೆಗಳು
ತಾತ್ಪರ್ಯ
ನಮ್ಮ ಮನಸ್ಸು ಎದ್ದಾಗಿನಿಂದ ಮಲಗುವವರೆಗೆ ಆಲೋಚನೆ
ಮಾಡುತ್ತಲೆ ಇರುತ್ತದೆ. ಗಾಢನಿದ್ದೆಯಲ್ಲಿ ಮಾತ್ರ ಮನಸ್ಸು
ಶೂನ್ಯವಾಗಿರುತ್ತದೆ.ಮತ್ತೆ ಕನಸಿನಲ್ಲಿ ಕೂಡ ಮನಸ್ಸು
ಯೋಚಿಸುತ್ತಲೆ ಇರುತ್ತದೆ. ಮನಸ್ಸಿನ ಆಲೋಚನೆಯಿಂದ
ನಮ್ಮ ಶಕ್ತಿ ವ್ಯಯವಾಗಿ ಹೋಗುತ್ತದೆ. ಮತ್ತೆ ಶಕ್ತಿಯನ್ನು
ಗಳಿಸಲು ಧ್ಯಾನ ಮಾಡಬೇಕಾಗುತ್ತದೆ.ಧ್ಯಾನ ಮಾಡುವಾಗ
ಕೂಡ ಮನಸ್ಸು ಅನೇಕ ಆಲೋಚನೆಗಳನ್ನು ಮಾಡುತ್ತದೆ.
ಆಗ ನಾವು ಧ್ಯಾನದಲ್ಲಿ ಸಾಕ್ಷಿಭೂತವಾಗಿ ಯೋಚನೆಗಳನ್ನು
ನೋಡುತ್ತಿರಬೇಕು. ಒಂದು ವೇಳೆ ಆಲೋಚನೆಗಳನ್ನು
ತಡೆಯಲು ಪ್ರಯತ್ನಿಸಿದಷ್ಟು ಜಾಸ್ತಿಯಾಗುತ್ತವೆ. ಮತ್ತೆ ಆಲೋಚನೆಗಳನ್ನು ಬೆಳೆಸಿದಷ್ಟು ಹೆಚ್ಚಾಗುತ್ತವೆ.
ಮನಸ್ಸು ಒಂದು ಸ್ಪ್ರಿಂಗ್ ಇದ್ದ ಹಾಗೆ ಒತ್ತಿದರೆ ಅಥವಾ
ಜಗ್ಗಿದರೆ ಅದರ ಶಕ್ತಿ ಹೆಚ್ಚುತ್ತದೆ. ಅದನ್ನು ಅದರ ಪಾಡಿಗೆ
ಬಿಟ್ಟರೆ ಅದರ ಬಲ ನಿಷ್ಕ್ರಿಯವಾಗುತ್ತದೆ. ಆಲೋಚನೆಗಳನ್ನು
ಸಹಜವಾಗಿ ಗಮನಿಸದೆ ಬಿಟ್ಟರೆ ತನ್ನಷ್ಟಕ್ಕೆ ತಾನು ನಿಲ್ಲುತ್ತವೆ.
ಧ್ಯಾನವೆಂದರೆ ಮನಸ್ಸು ಶೂನ್ಯಮಾಡುವುದು. ಮನಸ್ಸು
ನಿಂತರೆ ವಿಶ್ವಪ್ರಾಣಶಕ್ತಿ ಶರೀರವನ್ನು ಪ್ರವೇಸಿಸುತ್ತದೆ. ಅದರಿಂದ ಮನಸ್ಸು ಬುದ್ಧಿಯಾಗಿ ಬದಲಾಗಿ ಜ್ಞಾನ ಲಭಿಸುತ್ತದೆ. ಇದನ್ನೆ ಶರಣರು ಶೂನ್ಯ ಸಂಪಾದನೆ ಎಂದರು. ಆಲೋಚನಾರಹಿತ ಸ್ಥಿತಿಯೇ ನಿಜವಾದ ಧ್ಯಾನ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990