ನೆಲದೊಳಗೆ ಬೇರಿಳಿದು ಸುಳಿದೆಗೆದು ಬೆಳೆದ ಮರ
ಬಿಡುವುದು ಸುವಾಸನೆಯ ಹೂಗಳನ್ನು
ಕಾಮ ವೃಕ್ಷದ ಬೇರು ಪ್ರೇಮವರಳಿದ ಹೂವು
ಒಂದುಬಿಟ್ಟೊಂದಿಲ್ಲ – ಎಮ್ಮೆತಮ್ಮ
ಶಬ್ಧಾರ್ಥ
ವೃಕ್ಷ = ಮರ, ಗಿಡ
ತಾತ್ಪರ್ಯ
ನೆಲದಾಳಕೆ ಇಳಿದ ಬೇರು ನೀರು ಗೊಬ್ಬರವನ್ನು ಮತ್ತು
ಖನಿಜಾಂಶಗಳನ್ನು ಹೀರಿಕೊಂಡು ಗಿಡ ಬೆಳೆಯಲು
ಕಾರಣವಾಗುತ್ತದೆ. ಹುಲುಸಾಗಿ ಬೆಳೆದ ಮರ ಪರಿಮಳಯುಕ್ತ
ಮತ್ತು ಸುಂದರವಾದ ಹೂವುಗಳನ್ನು ಬಿಡುತ್ತದೆ. ಹಾಗೆ
ಮನುಜನಲ್ಲಿಯ ಕಾಮ ಗಿಡದ ಬೇರಿನಂತೆ ಕೆಲಸಮಾಡುತ್ತದೆ.
ಕಾಮದಿಂದ ಸುಂದರವಾದ ಪ್ರೇಮದ ಭಾವನೆಯೆಂಬ
ಹೂವುಗಳು ಅರಳುತ್ತವೆ. ಬೇರು ಮತ್ತು ಹೂವು ಹೇಗೋ
ಹಾಗೆ ಕಾಮ ಮತ್ತು ಪ್ರೇಮ ಒಂದೆ ನಾಣ್ಯದ ಎರಡು ಮುಖಗಳು. ಕಾಮದ ಬಯಕೆಗೋಸ್ಕರ ಮೊದಲು ಮಾನವ ಮದುವೆಯಾಗಿ ಮಡದಿಯ ಮೇಲೆ ಪ್ರೇಮವುಂಟಾಗುತ್ತದೆ.
ಆಮೇಲೆ ಮಕ್ಕಳ ಮೇಲೆ ಮತ್ತೆ ಮೊಮ್ಮಕ್ಕಳ ಮೇಲೆ ಪ್ರೇಮ
ಉಂಟಾಗುತ್ತದೆ. ಬರುಬರುತ್ತ ಬಂಧುಮಿತ್ರಾದಿಗಳ ಮೇಲೆ
ಹಾಗೆ ಜಗತ್ತಿನ ಜನರ ಮೇಲೆ ಪ್ರೀತಿ ಉಂಟಾಗಿ ಇಡೀ
ಜಗತ್ತಿಗೆ ವಿಸ್ತರಿಸುತ್ತ ಹೋಗುತ್ತದೆ. ಕಾಮದಿಂದ ಶುರುವಾದ
ಪ್ರೇಮ ವಿಶ್ವಪ್ರೇಮವಾಗಿ ಪರಿಣಮಿಸುತ್ತದೆ. ಆದಕಾರಣ
ಕಾಮನೆಯ ಭಾವನೆಯಿಂದ ನಿಷ್ಕಾಮದ ಭಾವನೆಯಾಗಿ
ವಿಶ್ವವನ್ನೆ ಪ್ರೀತಿಸುವ ನಿಷ್ಕಲ್ಮಷ ಪ್ರೀತಿ ಉಂಟಾಗುತ್ತದೆ. ಕಾಮ ಮತ್ತು ಪ್ರೇಮ ಒಂದು ನಾಣ್ಯದ ಮುಖಗಳಂತೆ ಒಂದು ಬಿಟ್ಟು ಮತ್ತೊಂದಿರುವುದಿಲ್ಲ. ಪ್ರೇಮವೆ ಪ್ರೀತಿಯಾಗಿ, ಮಮತೆಯಾಗಿ,ವಾತ್ಸಲ್ಯವಾಗಿ,ಭಕ್ತಿಯಾಗಿ ಬದಲಾಗುತ್ತದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990