ಸಾಗರದ ಮೇಲೆ ಮಳೆ ಸುರಿದರೇನುಪಯೋಗ ?
ಬಯಲುಸೀಮೆಯಲಿ ಮಳೆಸುರಿದರೊಳಿತು
ಹೊಟ್ಟೆ ತುಂಬಿದ್ದವಗೆ ನೀಡಿದರೆ ಫಲವಿಲ್ಲ
ಹಸಿದವನಿಗನ್ನವಿಡು – ಎಮ್ಮೆತಮ್ಮ
ಶಬ್ಧಾರ್ಥ
ಸಾಗರ = ಸಮುದ್ರ. ಒಳಿತು = ಒಳ್ಳೆಯದು
ಬಯಲುಸೀಮೆ = ಮೈದಾನದಿಂದ ಕೂಡಿದ ಪ್ರದೇಶ
ತಾತ್ಪರ್ಯ
ಮಳೆ ಕಡಲಿನ ಮೇಲೆ ಬಿದ್ದರೆ ಯಾವ ಉಪಯೋಗವಿಲ್ಲ.
ಏಕೆಂದರೆ ಕಡಲಿನಲ್ಲಿ ಈಗಾಗಲೆ ಸಾಕಷ್ಟು ನೀರಿರುತ್ತದೆ.
ಮಳೆ ಬಯಲು ಪ್ರದೇಶದಲ್ಲಿ ಬಿದ್ದರೆ ರೈತರು ಹದಮಾಡಿಟ್ಟ
ಹೊಲದಲ್ಲಿ ಬೀಜಬಿತ್ತಿ ಬೆಳೆಯಬಹುದು.ಸಸ್ಯ ಸಂಕುಲ
ಹುಲುಸಾಗಿ ಬೆಳೆಯುತ್ತವೆ. ಹಾಗೆ ಸಿರಿವಂತನಿಗೆ ದಾನ
ಮಾಡಬಾರದು.ಬಡವನಿಗೆ ದಾನ ಮಾಡಿದರೆ ಸಾರ್ಥಕ.
ಹೊಟ್ಟೆತಂಬ ಉಂಡು ಮೈಬೆಳೆಸಿಕೊಂಡ ಸಿರಿವಂತನಿಗೆ
ಊಟಕ್ಕೆ ಕರೆದರೆ ಬರುವುದಿಲ್ಲ.ಹಸಿದುಕೊಂಡ ಬಡವನಿಗೆ
ಅನ್ನ ನೀಡಿದರೆ ಸಂತೃಪ್ತಿಯಿಂದ ಉಂಡು ಹರಸುತ್ತಾನೆ. ಹಾಗೆ
ಅಧ್ಯಾತ್ಮದ ಹಸಿವಿಲ್ಲದವನಿಗೆ ಗುರುಬೋಧೆ ಮಾಡಿದರೆ
ಫಲಿಸುವುದಿಲ್ಲ. ಅಧ್ಯಾತ್ಮ ಹಸಿವಿದ್ದವನಿಗೆ ಗುರುಬೋಧೆ
ಮಾಡಿದರೆ ಬೇಗನೆ ಸಿದ್ಧಿ ಸಾಧಿಸುತ್ತಾನೆ. ಯಾರಿಗೆ
ಅನ್ನದ ಹಸಿವು ನೀರಿನ ದಾಹ ಮತ್ತು ಜ್ಞಾನದ ಹಂಬಲ ಇದೆಯೊ ಅವರಿಗೆ ನೀಡಿದರೆ ಸಾರ್ಥಕವಾಗುತ್ತದೆ.
ಶಿಷ್ಯನಲ್ಲಿ ಜ್ಞಾನದಾಹವಿದ್ದರೆ ಮಾತ್ರ ಗುರು ದೀಕ್ಷೆ ಕೊಡುತ್ತಾನೆ.
ಅದನ್ನು ಪಡೆದ ಶಿಷ್ಯ ಸಾಧಿಸಿ ಗುರುವನ್ನು ಮೀರಿದ
ಶಿಷ್ಯನಾಗುತ್ತಾನೆ. ಅನ್ನದಾಸೋಹ ಮತ್ತು ಜ್ಞಾನದಾಸೋಹ
ಹಸಿವಿದ್ದವನ ಹಸಿವು ನೀಗಿಸುತ್ತದೆ ಮತ್ತು ಸಫಲವಾಗುತ್ತದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990