ಸಿಂದಗಿ: ಮಕ್ಕಳ ದಿನಾಚರಣೆಯಂದು ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕ – ಪೋಷಕ ರ ಮಹಾಸಭೆ ಆಯೋಜನೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಯಡ್ರಾಮಿ ಹೇಳಿದರು.
ಸರ್ಕಾರದ ಸುತ್ತೋಲೆಯಂತೆ ನವಂಬರ್ ೧೪, ೨೦೨೫ ರ ಮಕ್ಕಳ ದಿನಾಚರಣೆಯಂದು ಸಿಂದಗಿ, ದೇವರಹಿಪ್ಪರಗಿ ಮತ್ತು ಆಲಮೇಲ ತಾಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕ-ಪೋಷಕ ಮಹಾಸಭೆಯನ್ನು ಆಯೋಜಿಸಲಾಗಿದೆ. ಈ ಮಹಾಸಭೆಯನ್ನು ತಾಲೂಕಿನ ಎಲ್ಲಾ ಅನುಷ್ಠಾನಾಧಿಕಾರಿಗಳ, ಸಿ ಆರ್ ಪಿ,ಬಿ ಆರ್ ಪಿ, ಇ ಸಿ ಓ ರವರು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿ ಯಶಸ್ವಿಗೊಳಿಸಲು ಗೂಗಲ್ ಮೀಟ್ ಸಭೆಯ ಮೂಲಕ ಸೂಚನೆ ನೀಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿಕ್ಷಕ-ಪೋಷಕ ಮಹಾಸಭೆಯಲ್ಲಿ, ಸಂವಿಧಾನ ಪೀಠಿಕೆಯ ಓದು, ಮಕ್ಕಳ ಕಲಿಕಾ ಪ್ರಗತಿ, ದಾಖಲಾತಿ ಮತ್ತು ಹಾಜರಾತಿ,ಎಸ್ ಎಲ್ ಸಿ ಪರೀಕ್ಷೆಯ ಪೂರ್ವ ಸಿದ್ಧತೆ, ಪರೀಕ್ಷಾ ಭಯ ನಿವಾರಣೆ,ಪಾಠ ಆಧಾರಿತ ಮೌಲ್ಯಮಾಪನದ ವಿಶ್ಲೇಷಣೆ, ಇಲಾಖೆಯ ಪ್ರೋತ್ಸಾಹದಾಯಕ ಯೋಜನೆಗಳು, ಶಾಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಹಾಗೂ ಎಸ ಡಿಎಂಸಿ ಅವರ ಪಾತ್ರ, ಆರ್ ಟಿ ಇ ಕಾಯ್ದೆ, ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣಾ ನೀತಿ, pocso ಕಾಯ್ದೆ, ಮಧ್ಯಾಹ್ನ ಉಪಹಾರ ಯೋಜನೆಯ ಸಮರ್ಪಕ ಅನುಷ್ಠಾನ, ಬಾಲ್ಯ ವಿವಾಹ ನಿಷೇಧ, ಬಾಲಕಾರ್ಮಿಕ ಪದ್ಧತಿ ನಿಷೇಧ ನೀತಿ,ವಿಶೇಷ ಚೇತನ ಮಕ್ಕಳಿಗೆ ಇಲಾಖೆಯ ಸೌಲಭ್ಯಗಳು, ಶಾಲೆಯ ಅಭಿವೃದ್ಧಿಯಲ್ಲಿ ಭಾಗಿದಾರರ ಪಾತ್ರ, ಮತ್ತು ಮಕ್ಕಳ ಪ್ರತಿಭೆ ಗುರುತಿಸುವ ವೇದಿಕೆಯಾಗಿ ಪೋಷಕ-ಶಿಕ್ಷಕ ಮಹಾಸಭೆಯನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚಿಸಿದರು.
ಅಂದು ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನದವರೆಗೆ ವೇಳಾಪಟ್ಟಿಯನುಸಾರ ಈ ಸಭೆಯನ್ನು ಆಯೋಜಿಸುವಂತೆ ಸೂಚಿಸಿದ್ದಾರೆ. ಅಂದು ಶಾಲೆಯಲ್ಲಿ ತಳಿರು-ತೋರಣಗಳಿಂದ ಸಿಂಗರಿಸಿ, ಸಿಹಿ ಊಟ ವಿತರಿಸಿ, ಮಕ್ಕಳ ಕಲಿಕಾ ಪ್ರಗತಿಯನ್ನು ಎಲ್ಲಾ ಪಾಲಕರ ಗಮನಕ್ಕೆ ತರುವಂತೆ ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ತಿಳಿಸಿದ್ದಾರೆ.

