ಎಲ್ಲ ಗ್ರಾಮ ಪಂಚಾಯತಗಳಿಗೂ ಮೋದಿಯವರ ವಿಕಸಿತ ಭಾರತ ಸಂಕಲ್ಪ ಯಾತ್ರೆ – ಈರಣ್ಣ ಕಡಾಡಿ

0
169

ಮೂಡಲಗಿ: ದೇಶದ ಜನಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಮೂಲಕ ಸುಖಮಯ ಜೀವನಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಕೇಂದ್ರ ಸರ್ಕಾರ ದೃಢ ಸಂಕಲ್ಪದೊಂದಿಗೆ ಮುನ್ನಡೆಸುತ್ತಿದ್ದು ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೋದಿಯವರ ಗ್ಯಾರಂಟಿ ಯೋಜನೆಯ ಅನಾವರಣ ಆಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಶನಿವಾರ ಡಿ.02 ರಂದು ಕಲ್ಲೋಳಿ ಪಟ್ಟಣದ ಕೆ.ವಿ.ಜಿ ಬ್ಯಾಂಕ್ ಆವರಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯಾದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರದ ಹಲವು ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಿಗೂ ನಗರ ಸ್ಥಳೀಯ ಸಂಸ್ಥೆಗಳಿಗೂ ಭೇಟಿ ನೀಡಲಿದೆ ಎಂದರು.

ಮಹಿಳಾ ಸ್ವಸಹಾಯ ಸಂಘಕ್ಕೆ ಡ್ರೋನ್:

ರೂ. 1261 ಕೋಟಿ ರೂ ವೆಚ್ಚದಲ್ಲಿ ಪ್ರಧಾನಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರವನ್ನು ಸಹ ಪ್ರಾರಂಭಿಸಿದ್ದಾರೆ. ಡ್ರೋನ್ ಕೇಂದ್ರವು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸುತ್ತದೆ ಇದರಿಂದ ಅವರು ಈ ತಂತ್ರಜ್ಞಾನವನ್ನು ಬಳಸಿಕೊಂಡು ಜೀವನೋಪಾಯವನ್ನು ಗಳಿಸಬಹುದು. ಈ ಯೋಜನೆಯಡಿ ಮೂರು ವರ್ಷಗಳಲ್ಲಿ 15 ಸಾವಿರ ಡ್ರೋನ್‌ಗಳನ್ನು ಮಹಿಳೆಯರಿಗೆ ನೀಡುವ ಗುರಿ ಹೊಂದಿದೆ ಎಂದರು.

ದೇಶದಲ್ಲಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ರಿಂದ 25,000 ಕ್ಕೆ ಹೆಚ್ಚಿಸುವ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಪ್ರಾರಂಭಿಸಿದ್ದಾರೆ. ಉತ್ತಮ ಔಷಧ ಮತ್ತು ಅಗ್ಗದ ಔಷಧವೇ ಬಹುದೊಡ್ಡ ಸೇವೆ ಯಾಗಿದೆ. ಜನೌಷಧಿ ಕೇಂದ್ರದ ಬಗ್ಗೆ ಜನರಿಗೆ ಮಾಹಿತಿ ನೀಡಿ. ಈ ಹಿಂದೆ 12-13 ಸಾವಿರ ರೂ.ಗಳಷ್ಟಿದ್ದ ಔಷಧಿಗಳ ಖರ್ಚು ಇದೀಗ 2-3 ಸಾವಿರ ರು.ಗಳಾಗುತ್ತಿದೆ ಎಂದರೆ ಜನೌಷಧಿ ಕೇಂದ್ರದಿಂದಾಗಿ 10 ಸಾವಿರ ರೂ.ಗಳು ನಿಮ್ಮ ಜೇಬಿಗೆ ಉಳಿತಾಯವಾಗುತ್ತಿದೆ ಎಂದು ತಿಳಿಸಿದರು.

ಬಡವರಿಗೆ, ಮಹಿಳೆಯರಿಗೆ, ಯುವ ಜನತೆಗೆ ಹಾಗೂ ರೈತರಿಗೆ ವಿಶೇಷ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ್, ಪಿಎಂಜಿಎವೈ, ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ, ದೀನದಯಾಳ್ ಅಂತ್ಯೋದಯ ಯೋಜನೆ, ಪಿಎಂ ಆವಾಸ್ ಯೋಜನೆ (ಗ್ರಾಮೀಣ), ಪಿಎಂ ಉಜ್ವಲ ಯೋಜನೆ, ಪಿಎಂ ವಿಶ್ವಕರ್ಮ, ಪಿಎಂ ಕಿಸಾನ್ ಸಮಾನ್, ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ), ಪ್ರಧಾನಮಂತ್ರಿ ಪೋಷಣ್ ಅಭಿಯಾನ, ಹರ್ ಫರ್ ಜಲ್ ಜಲ ಜೀವನ್ ಮಿಷನ್, ಜನ್ ಧನ್ ಯೋಜನೆ, ಜೀವನ ಜ್ಯೋತಿ ಬಿಮಾ ಯೋಜನೆ, ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಪಿಎಂ ಪ್ರಣಾಮ್, ನ್ಯಾನೋ ರಸಗೊಬ್ಬರದಂತಹ ಯೋಜನೆಗಳ ಕುರಿತು ಅರಿವು ಮೂಡಿಸಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶ ಹೊಂದಿದೆ ಎಂದರು.

ನಂತರ ಜನರೊಂದಿಗೆ ಭಾರತ ಸರ್ಕಾರದ ಯೋಜನೆಗಳ ಕುರಿತಾದ ಕಿರುಚಿತ್ರ ವೀಕ್ಷಿಸಿ, ಉಜ್ವಲ 3.0 ಯೊಜನೆಯ ಲಾಭಾರ್ಥಿಗಳಿಗೆ ಉಚಿತ ಗ್ಯಾಸ್ ನೀಡಿದರು, ರೈತರು ವೈಜ್ಞಾನಿಕವಾಗಿ ಡ್ರೋಣ್ ಮೂಲಕ ರಸಗೊಬ್ಬರ ಸಿಂಪಣೆ ಮಾಡುವ ಪದ್ದತಿ ವೀಕ್ಷಿಸಿ ರೈತರು ವೈಜ್ಞಾನಿಕ ಕೃಷಿಯಲ್ಲಿಯೂ ತೊಡಗಬೇಕೆಂದು ತಿಳಿಸಿದರು. ನಂತರ ವಿವಿಧ ಯೋಜನೆಯಡಿ ಲಾಭ ಪಡೆದುಕೊಂಡ ಫಲಾನುಭವಿಗಳು ಮಾತನಾಡಿ ಅವರ ಸಂತೋಷ ಹಂಚಿಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಅಗ್ರಣೀಯ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರು ಹಾಗೂ ವಿಕಸಿತ ಭಾರತ ಸಂಕಲ್ಪ ಯಾತ್ರೆ ನೋಡಲ್ ಅಧಿಕಾರಿ ಪ್ರಶಾಂತ ಕುಲಕರ್ಣಿ, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಸಂಜೀವ ವನಜೇರಿ, ಡಿಡಿಎಂ ನರ್ಬಾಡ್ ಅಧಿಕಾರಿ ಅಭಿನವ ಯಾದವ, ತುಕ್ಕಾನಟ್ಟಿ ಬರ್ಡ್ಸ ಕೆ.ವಿ.ಕೆ ಕೇಂದ್ರದ ಹಿರಿಯ ವಿಜ್ಞಾನಿ ದತ್ರಾತ್ರೇಯ ಮೇತ್ರಿ, ಗೋಕಾಕ ಕೆ.ವಿ.ಜಿ.ಬಿ ಕ್ಷೇತ್ರಿಯ ಕಛೇರಿ ಮುಖ್ಯಸ್ಥರಾದ ಸಂತೋಷ ನರಗುಂದ, ಗೋಕಾಕ ಮಲ್ಲಿಕಾರ್ಜುನ ಗ್ಯಾಸ್ ವಿತರಕ ಮಲ್ಲಿಕಾರ್ಜುನ ಚುನಮರಿ, ಕಲ್ಲೋಳಿ ಪಾಟೀಲ ಗ್ಯಾಸ್ ವಿತರಕ ಕೆಂಪಣ್ಣ ಬಿ. ಪಾಟೀಲ, ಶಿವಂ ಗ್ಯಾಸ್ ವಿತರಕ ಶಿವಕುಮಾರ ಹೆಗ್ಗನ್ನವರ, ಘಟಪ್ರಭಾ ದೀವಾಕರ ಲಾ ಗ್ಯಾಸ್ ವಿತರಕ ಶಿವಕುಮಾರ ತಿಲಕ, ಕೊಣ್ಣುರ ರೇಣುಕಾ ಗ್ಯಾಸ್ ವಿತರಕ ಉದಯ, ಕಲ್ಲೋಳಿ ಕೆ.ವಿ.ಜಿ ಬ್ಯಾಂಕ್ ವ್ಯವಸ್ಥಾಪಕ ಸಂತೋಷ, ಬಸವರಾಜ ಕಡಾಡಿ, ಮಂಜುಳಾ ಹಿರೇಮಠ, ಶಿವರುದ್ರ ಬಿ.ಪಾಟೀಲ, ಬಸಗೊಂಡ ಪರಕನಟ್ಟಿ ಅಧಿಕಾರಿಗಳು ಹಾಗೂ ಪಟ್ಟಣದ ಪ್ರಮುಖರು, ರೈತರು, ಮಹಿಳೆಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.