ಬೆಳಗಾವಿಯ ಜಿಲ್ಲೆ , ರಾಮದುರ್ಗ ತಾಲೂಕಿನ ಪಾವನ ಸುಕ್ಷೇತ್ರ ಕಿಲ್ಲಾತೊರಗಲ್ಲದಲ್ಲಿ ಮಂಗಳವಾರ ದಿ.16 ರಂದು ” ಹಿಂದೂ – ಮುಸ್ಲಿಮರ ” ಸೌಹಾರ್ದತೆ ಹಾಗೂ ಭಾವೈಕ್ಯತೆಯ ಪ್ರತೀಕವಾಗಿರುವ ” ಮೊಹರಂ ಹಬ್ಬದ ” ಆಚರಣೆಯು ವಿಜೃಂಭಣೆಯಿಂದ ಜರುಗಲಿದೆ.
ಸ್ವಾತಂತ್ರ್ಯ ಪೂರ್ವ ಕಿಲ್ಲಾ ತೊರಗಲ್ಲ ಸಂಸ್ಥಾನ ಕಾಲದಲ್ಲಿ ಹಿಂದೂ , ಮುಸ್ಲಿಂ , ಜೈನ್, ಮರಾಠಾ ಹೀಗೆ ಅನೇಕಾನೇಕ ರಾಜ , ಮಹಾರಾಜರು, ಆಳರಸರು ಸಂಸ್ಥಾನವನ್ನು ಆಳಿ , ಅಳಿದು ಹೋಗಿದ್ದರೂ ಕೂಡ ಜಾತಿ ಸಾಮರಸ್ಯವನ್ನು ಕಾಪಾಡಿಕೊಂಡು ಬಂದಿರುವ ಈ ಕಿಲ್ಲಾ ತೊರಗಲ್ಲ ಗ್ರಾಮವು ಶತಶತಮಾನದ ಹಿಂದಿನ ಸಾಮರಸ್ಯ , ಸೌಹಾರ್ದತೆ ಮತ್ತು ಭಾವೈಕ್ಯತೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ , ಕಾರಣ ಈ ತೊರಗಲ್ಲ ಗ್ರಾಮದ ಪವಿತ್ರ ಮಣ್ಣಿನಲ್ಲೇ ಅಂಥಹ ದಿವ್ಯವಾದ ಅಧ್ಯಾತ್ಮಿಕ ಮಹಾನ್ ಶಕ್ತಿಯು ಬೆರೆತುಕೊಂಡಿದೆ. ಮಹಾಮಹಾ.. ಶರಣರು, ತಪಸ್ವಿಗಳು , ಸೂಫೀ ಸಂತರು, ಫಕೀರಾಗಳು ನಡೆದಾಡಿರುವ ಪುಣ್ಯ ಭೂಮಿ ಮಾತ್ರವಲ್ಲ, ಅವರೆಲ್ಲರ ಸಾಧನೆ, ತಪಶ್ಯಕ್ತಿಯು ಈ ಮಣ್ಣಿನೊಂದಿಗೆ ಬೆರೆತುಕೊಂಡಿದೆ ಎನ್ನಬಹುದು. ಕಾಲಗರ್ಭದಲ್ಲಿ ಹುದುಗಿ ಹೋದ ನೂರಾರು ಜಾತಿ , ಮತ, ಪಂಥಗಳ ಸಂಘರ್ಷಗಳಿಗೆ ಜಗತ್ತೇ ‘ ರಂಗ ‘ ಒದಗಿಸಿಕೊಟ್ಟಿದ್ದರೂ ಕೂಡ ನಮ್ಮ ಈ ತೊರಗಲ್ಲ ಗ್ರಾಮವು ಮಾತ್ರ ಎಂದಿಗೂ ತನ್ನ ಮೌನ ಮುರಿದಿಲ್ಲವೆಂಬುದು ಸಮಾಧಾನಕರ ಸಂಗತಿ.
ಮೊಹರಂ ಹಬ್ಬವು ಹಿಂದೂ – ಮುಸ್ಲಿಮರ ಸೌಹಾರ್ದತೆ ಹಾಗೂ ಭಾವೈಕ್ಯತೆಯ ಪ್ರತೀಕವಾಗಿರುವ ಹಬ್ಬಗಳಲ್ಲಿ ಪ್ರಮುಖವಾದದ್ದು ಎಂದು ಬೇರೆ ಹೇಳಬೇಕಿಲ್ಲ , ಯಾವುದೇ ತಾರತಮ್ಯತೆ ಇಲ್ಲದೇ ಈ ಹಬ್ಬದಲ್ಲಿ ಮುಸ್ಲಿಮರೊಡಗೂಡಿ ಸಕ್ರಿಯವಾಗಿ ಹಿಂದೂಗಳು ಕೂಡ ಪಾಲ್ಗೊಂಡು ಆಚರಿಸುವ ಗ್ರಾಮೀಣ ಪ್ರದೇಶದ ಹಬ್ಬವು ಇದಾಗಿದ್ದು, ಇದಕ್ಕೆ ” ಅಲ್ಹಾಬ್ ಹಬ್ಬ ” ಅಂತಲೂ ಕರೆಯುವ ವಾಡಿಕೆಯಿದೆ.
ಹತ್ತು ದಿನಗಳವರೆಗೆ ನಡೆಯುವ ಈ ಹಬ್ಬದ ಆಚರಣೆಯ ” ಕತ್ತಲ ರಾತ್ರಿ ” ಸೊಮವಾರ ದಿ.15 ರಂದು ಮಾರನೆಯದಿನ ಮಂಗಳವಾರ ದಿ.16 ರಂದು ಸಾಯಂಕಾಲ 4.30 ಗಂಟೆಗೆ ದೇವರು ಹೊಳೆಗೆ ಹೋಗುವ ದೃಶ್ಯವು ಭಕ್ತಾದಿಗಳ ಕಣ್ಮನ ಸೆಳೆಯುತ್ತದೆ. ಈ ಸಂದರ್ಭದಲ್ಲಿ ತೊರಗಲ್ಲ , ಖಾನಪೇಠ , ಚಿಲಮೂರು ಮತ್ತು ಹರ್ಲಾಪೂರ ಗ್ರಾಮಗಳ ನೂರಾರು ” ಪಂಜಾಗಳು ” ಹಾಗೂ ಡೋಲಿಗಳು ಆಗಮಿಸಿ ತೊರಗಲ್ಲದ ” ಬಡೇ ಪೀರಾಗೆ ” ಬೆಟ್ಟಿಕೊಟ್ಟು ಮುಂದೆ ಸಾಗುವ ಪ್ರಕ್ರಿಯೆಯು ಆಕರ್ಷಕವಾಗಿರುತ್ತದೆ.
ಮಂಗಳವಾರ ದಿ.16 ರಂದು ಮಧ್ಯಾಹ್ನ 12.30 ಗಂಟೆಗೆ ಕಿಲ್ಲಾ ತೊರಗಲ್ಲದ ಬಸ್ಸ ನಿಲ್ದಾಣದ ಹತ್ತಿರದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ” ಮೊಹರಂ ಹಬ್ಬ ” ನೋಡಲು ದೂರದೂರಿನಿಂದ ಬರುವ ಭಕ್ತಾಧಿಗಳಿಗಾಗಿ ” ಫಲಾವ್ ” ಅನ್ನಸಂತರ್ಪಣೆಯ ಕಾರ್ಯವನ್ನು ಕಿಲ್ಲಾ ತೊರಗಲ್ಲದ ಉತ್ಸಾಹಿ ಯುವಕರು ಹಾಗೂ ಸಮಾಜ ಸೇವಕರುಗಳಾದ ಶರೀಫ್. ಮೌ. ದಫೇದಾರ, ಶಾನೂರ. ಜಾ. ಮಹಾತ ಮತ್ತು ಮದಾರ. ಮೌ. ಪಕಾಲಿ ರವರು ಮಾಡಲಿದ್ದು , ಕಾರಣ ಈ ಸತ್ಕಾರ್ಯದಲ್ಲಿ ನಮ್ಮೂರಿನ ಸಮಸ್ತ ಯುವ ಮಿತ್ರರು ಕೈ ಜೊಡಿಸಿ ” ಮೊಹರಂ ಹಬ್ಬಕ್ಕೆ ” ಆಗಮಿಸಿದ ಭಕ್ತಾಧಿಗಳಿಗೆ ” ಫಲಾವ್ ” ವಿತರಿಸುವ ಕಾರ್ಯದಲ್ಲಿ ಸೇವೆಯನ್ನು ಒದಗಿಸುವುದರ ಮೂಲಕ ನಮ್ಮೂರಿನ ಹೆಸರು, ಕೀರ್ತಿಯು ಎಲ್ಲೆಡೆಯೂ ಪಸರಿಸುವಂತಾಗಲು ಕೋರಲಾಗಿದೆ.