ಮೂಡಲಗಿ: ಮೂಡಲಗಿ ತಾಲೂಕಿಗೆ ಹೊಸ ಕಾರ್ಮಿಕ ನಿರೀಕ್ಷಕರ ಕಛೇರಿ ಮಂಜೂರಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಮೂಡಲಗಿ ಸೇರಿದಂತೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹಾಗೂ ಕಾಗವಾಡ ಹೊಸ ತಾಲೂಕುಗಳಿಗೆ ಕಾರ್ಮಿಕ ನಿರೀಕ್ಷಕರ ಕಛೇರಿಗಳನ್ನು ಆರಂಭಿಸಲು ಈಗಾಗಲೇ ಸರ್ಕಾರ ಮಂಜೂರಾತಿ ನೀಡಿದೆ ಎಂದು ತಿಳಿಸಿದ್ದಾರೆ.
ಮಂಡಳಿಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಕಟ್ಟಡ ಕಾರ್ಮಿಕರ ನೋಂದಣಿ ಮಾಡಲು ಅವರಿಗೆ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸಲು ಅನುಕೂಲವಾಗುವಂತೆ ಕಾರ್ಮಿಕ ನಿರೀಕ್ಷಕರ ಕಛೇರಿ ಇಲ್ಲದಿರುವ ತಾಲೂಕುಗಳಲ್ಲಿ ಕೂಡ ಕಛೇರಿಯನ್ನು ತೆರೆದು ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿ ಕಟ್ಟಡ ಕಾರ್ಮಿಕರನ್ನು ನೋಂದಣಿ ಮಾಡಿ ಸೌಲಭ್ಯಗಳನ್ನು ವಿತರಿಸಲು ಅನುಕೂಲವಾಗುವಂತೆ ಮೂಡಲಗಿಯಲ್ಲಿ ಹೊಸ ಕಾರ್ಮಿಕರ ಕಛೇರಿ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.
ಕಛೇರಿಯನ್ನು ತೆರೆದು ಕರ್ತವ್ಯ ನಿರ್ವಹಿಸಲು ಹೊರಗುತ್ತಿಗೆ ಆಧಾರದ ಏಜೆನ್ಸಿ ಮೂಲಕ ಡಾಟಾ ಎಂಟ್ರಿ ಆಪರೇಟರ್ ನೇಮಕ ಮಾಡಲು ಅನುಮೋದನೆ ನೀಡಿ ಸರ್ಕಾರ ಆದೇಶಿಸಿದೆ ಎಂದು ಹೇಳಿರುವ ಅವರು, ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗಲು ಮೂಡಲಗಿಯಲ್ಲಿರುವ ತಹಶೀಲ್ದಾರ ಕಛೇರಿ ಹತ್ತಿರ ಕಾರ್ಮಿಕ ಇಲಾಖೆಯ ಕಛೇರಿಯನ್ನು ತೆರೆಯಲಾಗುವುದು. ಮೂಡಲಗಿ ತಾಲೂಕಿಗೆ ಅಗತ್ಯವಿರುವ ಎಲ್ಲ ಸರ್ಕಾರಿ ಕಛೇರಿಗಳು ಹಂತ ಹಂತವಾಗಿ ಕಾರ್ಯಾರಂಭ ಮಾಡಲಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.