‘ವಾದ್ಯಮೇಳ, ಪುಷ್ಪವೃಷ್ಟಿಯೊಂದಿಗೆ ಗುರುಗಳ ಸ್ವಾಗತ’
ಮೂಡಲಗಿ: ಮೂಡಲಗಿಯ ಎಸ್‍ಎಸ್‍ಆರ್ ಪ್ರೌಢ ಶಾಲೆಯಲ್ಲಿ 1998–99ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಕಲಿತ ವಿದ್ಯಾರ್ಥಿಗಳೆಲ್ಲ 25 ವರ್ಷಗಳ ನಂತರ ಇಲ್ಲಿಯ ಸತ್ಯಬಾಮಾ ರುಕ್ಮೀಣಿ ಹಂದಿಗುಂದ ಕಲ್ಯಾಣ ಮಂಟಪದಲ್ಲಿ ಸೇರಿ ಸ್ನೇಹ ಸಂಭ್ರಮ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಮಾಡುವ ಮೂಲಕ ತಮ್ಮ ಬಾಲ್ಯದ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
‘ಎಸ್‍ಎಸ್‍ಎಲ್‍ಸಿ ಎನ್ನುವುದು ಭವಿಷ್ಯದ ಟರ್ನಿಂಗ್ ಪಾಯಿಂಟ್. ಎಸ್‍ಎಸ್‍ಎಲ್‍ಸಿ ಮುಗಿದ ಮೇಲೆ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ ಇಲ್ಲವೆ ಡಿಪ್ಲೋಮಾ, ಐಟಿಐದಂತ ಬೇರೆ, ಬೇರೆ ಕೋರ್ಸಗಳನ್ನು ಮುಗಿಸಿ ಭವಿಷ್ಯ ಕಟ್ಟಿಕೊಳ್ಳುವುದು ಇರುತ್ತದೆ. ಯಾರು ಏನು ಆಗಿದ್ದಾರೆ, ಹೇಗಿದ್ದಾರೆ ಎನ್ನುವುದು ಕುತೂಹಲ. ಸ್ನೇಹ ಸಂಭ್ರಮವು ಹಳೆಯ ಬಾಲ್ಯವನ್ನು ಮರುಕಳಿಸುತ್ತದೆ’ ಎಂದು ಡಾ. ಸಂಜಯ ಶಿಂಧಿಹಟ್ಟಿ ಮತ್ತು ನಾಗೇಶ ದೊಂಗಡಿ ಪತ್ರಿಕೆಗೆ ಪ್ರತಿಕ್ರಿಯಿಸಿದರು.
ಸ್ನೇಹ ಸಂಭ್ರಮದಲ್ಲಿ 150ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕರು, ವೈದ್ಯರು, ಲೆಕ್ಕಪರಿಶೋಧಕರು, ಬ್ಯಾಂಕ್ ಅಧಿಕಾರಿಗಳು, ವಕೀಲರು, ವ್ಯಾಪಾರ, ಕೃಷಿಕರಾಗಿ ಬದುಕು ಕಟ್ಟಿಕೊಂಡವರೆಲ್ಲ ಕುಟುಂಬದ ಸಮೇತವಾಗಿ ಬಂದು ಒಂದು ದಿನ ಕೂಡಿ ಕಳೆದರು; ಶಾಲೆಯಲ್ಲಿ ಕಿಟಲೆ ಮಾಡಿದ್ದನೆಲ್ಲವನ್ನೂ ನೆನಪಿಸಿಕೊಂಡು ಸಂಭ್ರಮಿಸಿದರು.
ಢಣ,ಢಣ ಗಂಟೆ:
ಶಾಲೆಯಲ್ಲಿ ಢಣಢಣ ಎನ್ನುವ ವಾರ್ನಿಂಗ್ ಬೆಲ್, ಪಿರಿಯಡ್ ಮುಗಿದ ಮೇಲೆ ಬಾರಿಸುವ ಸಿಂಗಲ್ ‘ಢಣ್‘ ಬೆಲ್. ಇವನ್ನು 25 ವರ್ಷಗಳ ಹಿಂದೆ ಕೇಳಿದ್ದು ನೆನಪು. ಸಮಾರಂಭದ ದಿನ ಶಾಲೆಯಿಂದ ತರಿಸಿದ ಅದೇ ಗಂಟೆಯಿಂದ ‘ಢಣಢಣ’ ಎಂದು ಬಾರಿಸಿ ಸಮಾರಂಭವನ್ನು ಪ್ರಾರಂಭಿಸುವ ಮೂಲಕ ಹಳೆಯದನ್ನು ನೆನಪಿಸಿಕೊಂಡರು. ದೈಹಿಕ ಶಿಕ್ಷಕರು ಡ್ರಿಲ್ ಮಾಡಿಸಿ ಮತ್ತೆ ಎಲ್ಲರನ್ನು ಮಕ್ಕಳನ್ನಾಗಿಸಿದರು.
ಗುರುಗಳಿಗೆ ಗೌರವ:
ಬೀಜಗಣಿತ, ಸಂಖ್ಯಾ ಗಣಿತ, ಗಣಿತ ರಚನೆಗಳು, ವೃತ್ತಗಳು, ಪ್ರಮೇಯಗಳಂತ ಕಠಿಣ ವಿಷಯಗಳಿರುವ ಗಣಿತ ಕಲಿಸಿಕೊಟ್ಟ ಶಿಕ್ಷಕ ಎ.ಎಲ್. ಶಿಂಧಿಹಟ್ಟಿ, ವಿಜ್ಞಾನದ ಪ್ರಯೋಗಗಳನ್ನು ಮಾಡಿ ತೋರಿಸಿ ವಿಜ್ಞಾನದ ಸಮೀಕರಣಗಳನ್ನು ಹೇಳುವವರೆಗೆ ಬಿಡದೇ ಇರುತ್ತಿದ್ದ ಶಿಕ್ಷಕ ಆರ್.ಟಿ. ಲಂಕೆಪ್ಪನ್ನವರ, ಪಾಸ್ಟ್, ಪ್ರೆಸೆಂಟ್, ಪ್ಯೂಚರ್ ಟೆನ್ಸ್ ಅರ್ಥಹಿಸುವರೆಗೆ ಬಿಡದ ಇಂಗ್ಲಿಷಿನ ಶಿಕ್ಷಕ ವಿ.ಎಸ್. ಹಂಚಿನಾಳ, ‘ಕನ್ನಡಕ್ಕಾಗಿ ಕೈಯೆತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ‘ ಕುವೆಂಪು, ಬೇಂದ್ರೆ ಅವರ ಪದ್ಯಗಳನ್ನು ಚಂದಾಗಿ ಹೇಳುತ್ತಿದ್ದ ಸಿ.ಎಂ. ಹಂಜಿ ಸರ್. ಚಿತ್ರಕಲೆಯ ಮೂಲಕ ಸೃಜನತೆ ಬೆಳೆಸಿದ ಡ್ರಾಯಿಂಗ್ ಶಿಕ್ಷಕ, ಕಬಡ್ಡಿ, ಖೋ-ಖೋ ಆಡಿಸಿ ರಟ್ಟೆಗಳನ್ನು ಗಟ್ಟಿಮುಟ್ಟಾಗಿ ಮಾಡಿದ್ದ ಆಟದ ಸರ್ ಹೀಗೆ 25 ಶಿಕ್ಷಕರನ್ನು ಜಾನಪದ ವಾದ್ಯ ಮೇಳದೊಂದಿಗೆ ವೇದಿಕೆಗೆ ಬರಮಾಡಿಕೊಂಡರು. ಗುರುಗಳು ಬರುವ ದಾರಿಗೆ ಶಿಷ್ಯರೆಲ್ಲರೂ ಪುಷ್ಪವೃಷ್ಟಿ ಮಾಡಿ ಧನ್ಯತೆ ಮೆರೆದರು. ಸೇರಿದ 25 ಶಿಕ್ಷಕರನ್ನು ಶಾಲು ಹೊದಿಸಿ ಹಣ್ಣು, ಹಂಪಲದೊಂದಿಗೆ ಗೌರವಿಸಿ, ಪಾದ ಮುಟ್ಟಿ ನಮಸ್ಕರಿಸುವ ಮೂಲಕ ಗುರು ಶಿಷ್ಯರ ಪವಿತ್ರ ಪರಂಪರೆಗೆ ಅಂದಿನ ವೇದಿಕೆಯು ಸಾಕ್ಷಿಯಾಯಿತು.
ಶಿಕ್ಷಕರಾದ ಎ.ಎಲ್. ಶಿಂಧಿಹಟ್ಟಿ, ಆರ್.ಟಿ. ಲಂಕೆಪ್ಪನ್ನವರ, ವಿ.ಎಸ್. ಹಂಚಿನಾಳ, ಸಿ.ಎಂ. ಹಂಜಿ ಮಾತನಾಡಿ ‘ನಾವು ಶಿಕ್ಷಕ ವೃತ್ತಿಯ ಕರ್ತವ್ಯ ನಿಭಾಯಿಸಿ ಕಲಿಸಿರುತ್ತೇವೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಆತ್ಮವಿಸ್ವಾಸದೊಂದಿಗೆ ಮಾಡುವ ಸಾಧನೆಯು ಅಪೂರ್ವವೆನಿಸುತ್ತದೆ. ನಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಮಾಡಿರುವ ಸಾಧನೆಯನ್ನು ಕಂಡು ನಮ್ಮಲ್ಲಿಯೂ ಧನ್ಯತೆ ಭವ’ ಮೂಡಿದೆ ಎಂದು ಹೇಳಿದರು.
ಹಳೆಯ ವಿದ್ಯಾರ್ಥಿಗಳ ಪೈಕಿ ಡಾ. ಸಂಜಯ ಶಿಂಧಿಹಟ್ಟಿ, ಮುತ್ತು ಬಂಬಲವಾಡ, ಗೀತಾ ನೇಸೂರ, ಸುಜಾತಾ ಪಾಟೀಲ, ಆಶಾ ಸೂರಣ್ಣವರ, ಸೈದಪ್ಪ ಗದಾಡಿ ಮಾತನಾಡಿದರು.
ಬಾಲ್ಯದ ದಿನಗಳು ಯಾರಿಗೆ ತಾನೆ ಇಷ್ಟವಿಲ್ಲ? ಬಾಲ್ಯ ಎಲ್ಲರಿಗೂ ಸ್ಮರಣೀಯವಾದ ಅನುಭವ. ಅಂಥ ಹಳೆಯ ಬಾಲ್ಯವನ್ನು ನೆನಪಿಸುವ ಸ್ನೇಹ ಸಂಭ್ರಮ, ಗುರು ವಂದನೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ನಿವೃತ್ತ ಶಿಕ್ಷಕರಾದ ಡಿ.ಎಂ. ಗಾಡವಿ, ಜಿ.ವಿ. ಪಾಟೀಲ, ಬಿ.ವೈ. ಶಿವಾಪುರ, ಯು.ಬಿ. ದಳವಾಯಿ, ಸಿ.ಎಸ್. ಕಾಂಬಳೆ, ಕೆ.ಎಸ್. ಹೊಸಟ್ಟಿ, ಪಿ. ಅಯ್ಯನಗೌಡರ, ಎಸ್.ಪಿ. ಸೌದಾಗಾರ, ಬಿ.ಕೆ. ಕಾಳಪ್ಪಗೋಳ, ಆರ್.ಬಿ. ಗಂಗರಡ್ಡಿ, ಬಿ.ಎಲ್. ಲಗಳಿ, ಆರ್.ಎಂ. ಕಾಂಬಳೆ, ಸುಭಾಷ ಕುರಣೆ, ಮಲ್ಲಪ್ಪ ಶೆಟ್ಟರ, ಚನ್ನಬಸಪ್ಪ ಶೆಟ್ಟರ ಅವರು ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಚಂದ್ರಶೇಖರ ತೇಲಿ, ಆಂಜನೇಯ ರಾಚಪ್ಪನ್ನವರ, ಸಂಗಮೇಶ ಕೌಜಲಗಿ, ಜಗದೀಶ ತೇಲಿ, ಸುರೇಶ ಮರೆನ್ನವರ, ಗೋವಿಂದ ಸಣ್ಣಕ್ಕಿ, ಬಸನಗೌಡ ಪಾಟೀಲ, ಮನೋಹರ ಸಂಗಾನಟ್ಟಿ, ಮಲ್ಲಪ್ಪ ತೇರದಾಳ, ಶ್ರೀದೇವಿ ಪತ್ತಾರ, ಯಾಸ್ಮೀನ್ ಬಾಗವಾನ್ ಮತ್ತು ಇತರೆ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದರು.