ನಮ್ಮಲ್ಲಿ ಬಹುತೇಕರ ದಿನದ ಆರಂಭ ಕಿರಿ ಕಿರಿ ಗಾಬರಿ ಆತಂಕದಿಂದಲೇ ಆಗುತ್ತದೆ. ನಕ್ಕು ನಲಿಯುವ ಪ್ರಸಂಗಗಳು ಎದುರಾದರೂ ಅವುಗಳನ್ನು ಬಾಚಿ ತಬ್ಬಿಕೊಳ್ಳುವುದಿಲ್ಲ. ಗಡಿಬಿಡಿಯಲ್ಲಿ ಹಲ್ಕಿರಿದು ಮುಂದೆ ಓಡುತ್ತೇವೆ. ಕನ್ನಡಿಗೆ ಅನಿವಾರ್ಯವಾಗಿ ಹಲ್ಲು ತೋರಿಸುತ್ತೇವೆ ಅದು ಕೇವಲ ದಂತ ಮಾರ್ಜನ ಸಂದರ್ಭದಲ್ಲಿ ಮಾತ್ರ. ಮಳೆ ಕೊರತೆ ಬೆಳೆ ವೈಫಲ್ಯದಂಥ ಸಂಕಷ್ಟಗಳು ತಲೆದೋರಿದಾಗಲೂ ವೈಚಾರಿಕ ವಿರೋಧ ಅಭಿಪ್ರಾಯ ಭೇದದಲ್ಲಿ ಮುಳುಗೇಳುತ್ತಿದ್ದೇವೆ. ಜಾತಿ ಮತ ಧರ್ಮದ ಹೆಸರಿನಲ್ಲಿಯ ಭಿನ್ನತೆಗಳನ್ನು ಹಿಂಸೆ ರಕ್ತಪಾತದಿಂದ ಹತ್ತಿಕ್ಕುವ ರಕ್ಕಸ ವಿಧಾನಕ್ಕೆ ಶರಣಾಗುತ್ತಿದ್ದೇವೆ. ಸದಾ ಸ್ವಾರ್ಥ ಲಾಭವೆಂಬ ಪರಮ ಧ್ಯೇಯಕ್ಕೆ ಅಂಟಿಕೊಂಡೇ ವರ್ತಿಸುತ್ತಿದ್ದೇವೆ.
ಮನೆಯೊಳಗೂ ಮನೆಯಾಚೆಗೂ ನಾನೇ ಶ್ರೇಷ್ಠನೆಂಬ ಮೇಲಾಟದ ಗುದ್ದಾಟ ತಪ್ಪುತ್ತಿಲ್ಲ. ಬಾಳಿನ ಮರ್ಮ ಅರಿತವರು ಬೆರಳಿಣಿಕೆಯಷ್ಟು. ಅಂಥವರ ಆದರ್ಶ ತತ್ವಗಳನು ಪಾಲಿಸಲು ಸಿದ್ಧರಾಗದೇ ಸೋಮಾರಿತನವೆಂಬ ಹಳೆ ಚಾಳಿಗೆ ಅಂಟಿಕೊಳ್ಳುತ್ತಿದ್ದೇವೆ. ಕಷ್ಟದ ಸ್ಥಿತಿಯಲ್ಲಿ ಆಪದ್ಭಾಂದವನಂತೆ ಎಂಬ ನೆಪದಲ್ಲಿ ಹಣವೊಂದು ಸೆಳೆಯುವ ಆಡುಂಬೋಲವಾಗಿದೆ. ಇದೆಲ್ಲ ನೈತಿಕ ಅಧಃಪತನದ ವಿಕರಾಳ ರೂಪವೇ ಸರಿ. ಜನತಂತ್ರ ವ್ಯವಸ್ಥೆಗೆ ಬೆನ್ನು ತಿರುಗಿಸಿ ಸನಾತನ ಸಂಸ್ಕೃತಿಯನ್ನು ಗಾಳಿಗೆ ತೂರಿ ಹೊಣೆಗೇಡಿಗಳಾಗಿ ವರ್ತಿಸುತ್ತಿದ್ದೇವೆ.
ನಮ್ಮ ಈ ನಡೆ ಮಾನವೀಯತೆಗೆ ಅವಮಾನ.
‘ರೋಮ್ ಹೊತ್ತಿ ಉರಿಯುವಾಗ ನೀರೊ ಪೀಟಿಲು ನುಡಿಸುತ್ತಿದ್ದನಂತೆ’ ಎಂಬ ಮಾತು ನಮ್ಮ ವರ್ತನೆಗೆ ಒಪ್ಪುತ್ತದೆ. ನೋವು ಸಂಕಷ್ಟಗಳಿಗೆ ಮಿಡಿಯಬೇಕಿದ್ದ ಮನಸ್ಸುಗಳು ಸಂವೇದನೆಗಳನ್ನು ಕಳೆದುಕೊಂಡಂತೆ ನಡೆದುಕೊಳ್ಳುತ್ತಿವೆ. ಇದು ಸಮಾಜದಲ್ಲಿ ನೈತಿಕತೆ ಯಾವ ಮಟ್ಟಿಗೆ ಕುಸಿದಿದೆ ಎಂಬುದನ್ನು ಸೂಚಿಸುತ್ತದೆ. ಕೇವಲ ನೈತಿಕತೆಗೆ ಸೀಮಿತವಾದ ವಿಚಾರವಲ್ಲ. ಜೀವನ ಸಂಸ್ಕೃತಿಗೆ ಸಂಬಂಧಿಸಿದ್ದು. ದ್ರೋಹ ವಂಚನೆಯಲ್ಲಿ ತೊಡಗಿದ ಜನಾಂಗ ಮುಂದಿನ ಪೀಳಿಗೆಗೆ ನೀಡುವ ಸಮಾಜ ಎಂಥದ್ದು? ಎಂಬ ಅನುಮಾನದ ಪ್ರಶ್ನೆ ದಟ್ಟವಾಗಿ ಕಾಡುತ್ತದೆ. ಇದು ನಾವೇ ಸೃಷ್ಟಿಸಿಕೊಂಡ ದುಃಸ್ಥಿತಿ. ನಮಗೇ ಅಪಾಯಕಾರಿಯಾಗಿದೆ. ಮನಸ್ಸನ್ನು ನಿಯಂತ್ರಣದಲ್ಲಿ ಇಡದಿರುವುದು ಭೂಷಣವಲ್ಲ. ಭ್ರಮಾಧೀನವಾದ ಮನಸ್ಸನ್ನು ತಹಬಂದಿಗೆ ತರುವುದು ಇಂದಿನ ತುರ್ತು. ಅಗತ್ಯದ ಜವಾಬ್ದಾರಿ ಕೂಡ.
ಬದುಕಿಗೊಂದು ನೈತಿಕತೆಯ ಗೆರೆ ಎಳೆದುಕೊಳ್ಳಬೇಕಿದೆ. ‘ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ.’ ಎನ್ನುವಲ್ಲಿ ಸ್ವಾರ್ಥ ನಿರಾಕರಣೆಯ ಸಂಗತಿಯೆಂದು ಡಿವಿಜಿ. ಸ್ಪಷ್ಟವಾಗಿ ನಿರ್ದೇಶಿಸಿದ್ದಾರೆ. ಭಾವನಾತ್ಮಕ ಪ್ರೇರಣೆಗಳಿಂದ ನೈತಿಕತೆ ಗಟ್ಟಿಗೊಳಿಸಬೇಕಿದೆ. ಜೀವ ಬಾಂಧವ್ಯಗಳನು ಬೆಸೆಯಬೇಕಿದೆ. ಭಾವ ಶೂನ್ಯತೆಗೆ ಪೂರ್ಣವಿರಾಮವಿಟ್ಟು ಜೀವನದ ಚೆಲ್ವಿಕೆಗೆ ಮನ ತೆರೆಯಬೇಕಿದೆ.’ಉದಾರ ಚರಿತೆಯುಳ್ಳವರಿಗೆ ವಸುಧೆಯೆಲ್ಲವೂ ಕುಟುಂಬ.’ ಎಂಬ ಉಕ್ತಿಯಂತೆ ನೈತಿಕ ಜವಾಬ್ದಾರಿ ನಿರ್ವಹಿಸುವುದೇ ನಮಗೀಗ ದೊಡ್ಡ ಮಟ್ಟದ ಹೊಣೆ. ಹಾಗಂತ ನಾವು ಸಣ್ಣ ಮಟ್ಟಕ್ಕೆ ಇಳಿಯುವ ಹಾಗಿಲ್ಲ. ಕಣ್ಣೀರು, ಹತಾಶೆ, ಬೇಜಾರು, ಸಿಟ್ಟು ಬಿಟ್ಟು ನೈತಿಕತೆಯ ಮೆಟ್ಟಿಲೇರಿದರೆ ನೆಮ್ಮದಿಯ ಆಕಾಶ ನಮ್ಮೆದುರು ತೆರೆದುಕೊಳ್ಳುತ್ತದೆ. ಸುಂದರ ಬಾಳಿಗೆ ದಾರಿದೀಪದಂತಿರುವ ನೈತಿಕತೆಯನ್ನು ಹಿಡಿದು ಸಾಗೋಣ. ಆಗ ಸುಖ ಶಾಂತಿಯ ಜೀವನ ನಮ್ಮೊಂದಿಗೆ ನಗುತ್ತದೆ.
ಜಯಶ್ರೀ ಹೆ. ಅಬ್ಬಿಗೇರಿ, ಬೆಳಗಾವಿ
೯೪೪೯೨೩೪೧೪೨