ಸವದತ್ತಿ: ಪಟ್ಟಣದ ಗುರುಭವನದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ತಾಲೂಕ ಮಟ್ಟದ ಅಭಿಪ್ರೇರಣೆ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಶಾಸಕ ವಿಶ್ವಾಸ ವಸಂತ ವೈದ್ಯರವರು ವಿದ್ಯಾರ್ಥಿಗಳು ಭಯಮುಕ್ತ ವಾತಾವರಣದಲ್ಲಿ ಪರೀಕ್ಷೆಯನ್ನು ಎದುರಿಸಲು ಸಜ್ಜಾಗಲು ಕರೆ ನೀಡಿದರು.
2023- 24 ನೇ ಸಾಲಿನಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ 10 ವಿದ್ಯಾರ್ಥಿಗಳಿಗೆ ತಲಾ 5,000ಗಳ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಈ ವರ್ಷವೂ ಕೂಡ ಯಾವ ವಿದ್ಯಾರ್ಥಿಗಳು ಚೆನ್ನಾಗಿ ಓದಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನ ಮೊದಲ 10 ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಮುಂದಿನ ವರ್ಷ ಇದೇ ಕಾರ್ಯಾಗಾರದಲ್ಲಿ ಬಹುಮಾನ ವಿತರಿಸುವುದಾಗಿ ಭರವಸೆ ನೀಡಿದರು.
ಮಕ್ಕಳು ನಿರಂತರ ಅಧ್ಯಯನಶೀಲರಾಗಬೇಕು ಹಾರ್ಡ್ ವರ್ಕ್ ನೊಂದಿಗೆ ಸ್ಮಾರ್ಟ್ ವರ್ಕ್ ಮಾಡಬೇಕೆಂದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯ ಉಜ್ವಲ ಗೊಳಿಸುವಲ್ಲಿ 10ನೇ ತರಗತಿಯು ಮೊದಲನೆಯ ಮೆಟ್ಟಿಲಾಗಿದೆ ಎಂದು ಕಿವಿಮಾತು ಹೇಳಿದರು. ತಾಲೂಕಿನ ಎಲ್ಲಾ ಪ್ರೌಢಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನ ಒದಗಿಸಲು ಬದ್ಧರಾಗಿದ್ದೇವೆ. ಶಾಲೆಗಳಿಗೆ ಅವಶ್ಯಕವಿರುವಂತೆ ಗ್ರೀನ್ ಬೋರ್ಡ್, ಕ್ರೀಡಾ ಸಾಮಗ್ರಿಗಳು, ಪರೀಕ್ಷಾ ಪತ್ರಿಕೆಗಳು ಹೀಗೆ ಹಲವಾರು ಸೌಲಭ್ಯಗಳನ್ನು ಒದಗಿಸುವ ಕುರಿತು ಭರವಸೆ ನೀಡಿದರು. ವಿದ್ಯಾರ್ಥಿಗಳು ಇವುಗಳ ಸಂಪೂರ್ಣ ಸದುಪಯೋಗಪಡಿಸಿಕೊಂಡು ಮನೆಗೆ,ಶಾಲೆಗೆ, ಊರಿಗೆ ಮತ್ತು ತಾಲೂಕಿಗೆ ಕೀರ್ತಿ ತರುವಂತವರಾಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಅಭಿಪ್ರೇರಣೆ ಉಪನ್ಯಾಸಕರಾಗಿ ಆಗಮಿಸಿದ ಎ ಸಿ ಗಂಗಾಧರ್ ವಿಶ್ರಾಂತ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಇವರು ಮಾತನಾಡಿ, ಮಕ್ಕಳಿಗೆ ಪರೀಕ್ಷೆ ಎಂದರೆ ಭಯ ಇರುತ್ತದೆ. ಭಯವನ್ನು ಹೋಗಲಾಡಿಸಲು ದೃಢವಾದ ಮನಸ್ಸಿರಬೇಕು ಎಂದರು. ಭಯ ಮುಕ್ತ ವಾತಾವರಣದಲ್ಲಿ ಪರೀಕ್ಷೆ ಬರೆದರೆ ಅತಿ ಹೆಚ್ಚು ಅಂಕಗಳನ್ನು ಪಡೆಯಬಹುದು. ವಿದ್ಯಾರ್ಥಿಗಳು ಯಾವ ವಿಷಯ ಕಠಿಣವೆನಿಸುತ್ತದೆಯೋ ಆ ವಿಷಯವನ್ನು ನಿರಂತರವಾಗಿ ಓದಬೇಕು. ಓದಿದ್ದನ್ನು ಬರೆದು ತೆಗೆಯಬೇಕು ಎಂದು ತಿಳಿಸಿದರು ಎಸ್ ಎಸ್ ಎಲ್ ಸಿ ಎಂಬುದು ಜೀವನದ ಒಂದು ಪಾಠವೇ ವಿನಃ ಇದುವೇ ಜೀವನವಲ್ಲ. ಆದ್ದರಿಂದ ಭಯವನ್ನು ಮನಸ್ಸಿನಿಂದ ಕಿತ್ತುಹಾಕಿ ಪ್ರತಿನಿತ್ಯ ಶಾಲೆಯ ವೇಳಾಪತ್ರಿಕೆಯ ಜೊತೆ ಜೊತೆಗೆ ಮನೆಯಲ್ಲಿ ವೇಳಾಪತ್ರಿಕೆಯನ್ನು ಸಿದ್ಧಪಡಿಸಿಕೊಂಡು ಆ ವೇಳಾಪತ್ರಿಕೆಯ ಮೂಲಕ ನಿರಂತರವಾಗಿ ಓದಬೇಕು. ಪರೀಕ್ಷೆ ಎಂಬುದು ಒಂದು ಹಬ್ಬ ಖುಷಿಯಿಂದ ಈ ಪರೀಕ್ಷಾ ಹಬ್ಬವನ್ನು ಎಲ್ಲರೂ ಆಚರಿಸಬೇಕು. ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ನೋಡಿ ಭಯಪಡದೆ ಪ್ರಶ್ನೆ ಪತ್ರಿಕೆಯಲ್ಲಿನ ಸರಳ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ತದನಂತರ ಎರಡನೆಯ ಸುತ್ತಿನಲ್ಲಿ ಕಠಿಣ ಪ್ರಶ್ನೆಗಳಿಗೆ ಉತ್ತರಿಸುವಂತೆ ವಿದ್ಯಾರ್ಥಿಗಳು ಗಮನ ನೀಡಬೇಕೆಂದು ಕಿವಿಮಾತು ಹೇಳಿದರು.
ಗಣಿತ ಸಂಪನ್ಮೂಲ ವ್ಯಕ್ತಿಗಳಾದ ಜೆ.ಕೆ. ಪಾಟೀಲ್, ಆಂಗ್ಲ ಭಾಷೆ ಸಂಪನ್ಮೂಲ ವ್ಯಕ್ತಿಗಳಾದ ಉಮೇಶ್ ನರಗುಂದ, ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಎಂ ವಿ ಉಪ್ಪಿನ ಇವರು ತಲಾ ಒಂದು ಗಂಟೆಗಳ ಕಾಲ ಪ್ರತಿ ವಿಷಯಕ್ಕೆ ಸಂಬಂಧಪಟ್ಟಂತೆ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಎಲ್ಲರನ್ನೂ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ್ ರವರು ಯಶಸ್ಸು ಎಂಬುದು ಒಂದೇ ದಿನದಲ್ಲಿ ಸಿಗುವಂತಹ ವಸ್ತುವಲ್ಲ, ಇದು ನಿರಂತರ ಪ್ರಯತ್ನದಿಂದ ದೀರ್ಘಕಾಲದಲ್ಲಿ ಸಿಗುವ ಒಂದು ಅಪರೂಪದ ಸಾಧನೆಯಾಗಿದೆ. ಆದ್ದರಿಂದ ಮಕ್ಕಳು ಪರೀಕ್ಷೆ ಸಮೀಪಿಸಿದಾಗ ಮಾತ್ರ ಓದದೇ ನಿರಂತರವಾಗಿ ಓದುವ ಹವ್ಯಾಸವನ್ನು ಇಟ್ಟುಕೊಳ್ಳುವುದು ಮಕ್ಕಳ ಉಜ್ವಲ ಭವಿಷ್ಯಕ್ಕೆ ತುಂಬಾ ಸಹಕಾರಿಯಾಗುತ್ತದೆ. ಅದೇ ರೀತಿಯಾಗಿ ಶಾಲೆಯಲ್ಲಿ ಕಲಿತಂತಹ ವಿಷಯಗಳನ್ನು ಮನೆಯ ವೇಳಾಪತ್ರಿಕೆಯಿಂದ ಹೆಚ್ಚು ಅಂಕಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ.ಅದರಲ್ಲೂ ವಿಶೇಷವಾಗಿ ಹತ್ತನೇ ತರಗತಿಗೆ ಬಂದ ನಂತರ ಓದದೇ ಎಂಟನೇ ತರಗತಿ ಕಾಲಿಟ್ಟ ತಕ್ಷಣ ನಾವು 10ನೇ ತರಗತಿಯ ಪರೀಕ್ಷೆ ತಯಾರಿಯನ್ನು ಮಾಡಿಕೊಳ್ಳಬೇಕೆಂದು ತಿಳಿಸಿ ವಿದ್ಯಾರ್ಥಿಗಳು ಓದಿದಷ್ಟು ಸಮಯ ಮನಸ್ಸುಕೊಟ್ಟು ಓದಬೇಕು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾದ ಎಸ್ ವಿ ಯರಡ್ಡಿ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಆರ್. ಸಿ.ರಾಠೋಡ್ ಅವರು ಮಾತನಾಡಿ, ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ.ಯಾವ ವಿದ್ಯಾರ್ಥಿ ವಿನಯದಿಂದ ನಡೆದುಕೊಳ್ಳುತ್ತಾನೋ ಅಂತಹ ವಿದ್ಯಾರ್ಥಿಗೆ ಭವಿಷ್ಯದಲ್ಲಿ ದೊಡ್ಡ ಸ್ಥಾನಮಾನ ದೊರೆಯುತ್ತದೆ. ಬಡ ಮಕ್ಕಳಿಗೆ ಪ್ರೋತ್ಸಾಹ ದೊರೆಯುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಓದು ಬರಹದಲ್ಲಿ ನಿರಂತರ ತೊಡಗಿಸಿಕೊಳ್ಳಲು ತಿಳಿಸಿದರು. ಮಾನ್ಯ ಶಾಸಕರು ಶಿಕ್ಷಣ ಪ್ರೇಮಿಯಾಗಿದ್ದು ವಿದ್ಯಾರ್ಥಿಗಳಿಗೆ ಬಹುಮಾನ ರೂಪದಲ್ಲಿ ನಗದು ಸಹಾಯ ಮಾಡುವ ಕಾರ್ಯವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ, ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಬಿ ಎನ್ ಬ್ಯಾಳಿ,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ್ ಕುರಿ, ತಾಲೂಕ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿಗಳಾದ ಸುಧೀರ ವಾಗೇರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಅಶೋಕ ಮುರಗೋಡ,ಪುರಸಭೆ ಅಧ್ಯಕ್ಷ ರಾದ ಚಿನ್ನವ್ವ ಹುಚ್ಚನ್ನವರ.ಮುಖ್ಯೋಪಾಧ್ಯಾಯರಾದ ಆರ್ ಎಫ್ ಮಾಗಿ, ಎ ಎ ನದಾಫ್, ಬಿ.ಕೆ ಹಲಗಿ, ಶಿಕ್ಷಣ ಸಂಯೋಜಕ ಅರ್ಜುನ ಕಾಮನ್ನವರ, ರಾಜು ಭಜಂತ್ರಿ, ರವಿ ನಲವಡೆ, ಸುನಿಲ ಏಗನಗೌಡರ, ಎಚ್ ಎಲ್ ನದಾಫ, ರಾಮಚಂದ್ರಪ್ಪ, ಸಿದ್ದಪ್ಪ ಜೋಗಿ, ರಾಘವೇಂದ್ರ ಕೊಳದೂರು, ಏನ್ ಎಲ್ ನಾಯಕ, ಕೋಕಟನೂರ, ವಂಕಲಕುಂಟಿ ವೈ ಬಿ ಕಡಕೋಳ.ಡಿ ಎಲ್ ಭಜಂತ್ರಿ. ಕುಶಾಲ್ ಮುದ್ದಾಪುರ.ಬಹುಮಾನ ಪಡೆದ ವಿದ್ಯಾರ್ಥಿಗಳು ಮತ್ತು ಪಾಲಕರು ಹಾಜರಿದ್ದರು. ಸವದತ್ತಿ ನಗರದಲ್ಲಿ ಇರುವ ಕನ್ನಡ ಮಾಧ್ಯಮ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಂದೋಗಿ ವಂದಿಸಿದರು.