ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಲಹಾ ಕೇಂದ್ರದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಉಪನ್ಯಾಸಕರಾಗಿ ಆಗಮಿಸಿದ ಧಾರವಾಡದ ಮೇಧಾಶಕ್ತಿ ಸಂಸ್ಥೆಯ ಮುಖ್ಯಸ್ಥರಾದ ಕುಶಾಲರಡ್ಡಿ ಗಣಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಕೌಶಲ್ಯವನ್ನು ಗುರುತಿಸಿಕೊಂಡು ಬದುಕಿನ ಗುರಿ ನಿರ್ಧರಿಸಿಕೊಳ್ಳಬೇಕು ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಕಷ್ಟು ಅಧ್ಯಯನ, ಪರಿಶ್ರಮ, ತಾಳ್ಮೆ, ತ್ಯಾಗ, ಬದ್ಧತೆ ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಹೊಸದನ್ನು ಕಲಿಯುವತ್ತ ತಮ್ಮ ಚಿತ್ತ ಹರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಎಸ್.ಎಸ್.ಎಲ್.ಸಿ ಮುಗಿದ ನಂತರ ಲಭ್ಯವಿರುವ ವಿವಿಧ ಕೋರ್ಸಗಳು, ಪರಾಮರ್ಶನ ಗ್ರಂಥಗಳು, ನೀಟ್, ಜೆಇಇ, ಕೆಎಎಸ್, ಐಎಎಸ್ ಪರೀಕ್ಷೆಗಳು ಹಾಗೂ ವಿಭಿನ್ನ ಉದ್ಯೋಗಗಳ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ, ಜ್ಞಾನಾರ್ಜನೆ ಮಾಡುವ ಹಂಬಲ, ಅಚಲವಾದ ಮನೋಬಲ ಬದುಕಿನಲ್ಲಿ ಸಾಧನೆ ಮಾಡಲು ಸಹಕಾರಿ ಎಂದು ಹೇಳಿದರು.
ಮಕ್ಕಳು ಪಠ್ಯಪುಸ್ತಕಗಳ ಜೊತೆಗೆ ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಅರಿವಿನ ಪರೀದಿ ವಿಸ್ತಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿನಾಯಕ ಬಡಿಗೇರ, ಪದಾಧಿಕಾರಿಗಳಾದ ದುಂಡಪ್ಪ ಮಡಿವಾಳರ, ರಾಮಲಿಂಗಪ್ಪ ಮೆಕ್ಕೇದ, ರವೀಂದ್ರ ಮನಗುತ್ತಿ, ಗ್ರಾಮದ ಹಿರಿಯರಾದ ಜನಕರಾಜ ಪಾಟೀಲ, ಬಾಳಪ್ಪ ನಾಗಣ್ಣವರ, ಸಂಭಾಜಿ ಸೂರ್ಯವಂಶಿ, ರಾಜಶೇಖರ ಮಠದ, ಗ್ರಾಪಂ ಸದಸ್ಯರಾದ ಮಹಾಂತೇಶ ಹುಣಶೀಕಟ್ಟಿ, ರಾಜಶೇಖರ ದೊಡವಾಡ, ಮಾಜಿ ಸೈನಿಕರಾದ ವೆಂಕಣ್ಣ ಬಡಿಗೇರ, ಸಿದ್ಧಪ್ಪ ಮನಗುತ್ತಿ, ಹಳೆಯ ವಿದ್ಯಾರ್ಥಿ ಮಡಿವಾಳಪ್ಪ ಕಬ್ಬೂರ, ಶಿಕ್ಷಕರಾದ ಜೆ.ಆರ್.ನರಿ, ಪಿ.ಎಸ್.ಗುರುನಗೌಡರ, ಎಚ್.ವಿ.ಪುರಾಣಿಕ, ಎಸ್.ವಿ.ಬಳಿಗಾರ, ಎಂ.ಎನ್.ಕಾಳಿ. ಎಸ್.ಬಿ. ಸಾಳೂಂಕೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಾನಿಕಾ ಕುಲಕರ್ಣಿ ಸ್ವಾಗತಿಸಿದರು. ಭಾಗ್ಯಶ್ರೀ ಬಡಿಗೇರ ನಿರೂಪಿಸಿದರು. ಚೇತನಾ ಗಡಾದ ವಂದಿಸಿದರು.