ಮೂಡಲಗಿ: ಮೂಡಲಗಿ ತಾಲೂಕಿನ ಅವರಾದಿ ಸೇತುವೆ ಎತ್ತರಕ್ಕೆ ಏರಿಸುವ ಕೆಲಸಕ್ಕೆ ಇನ್ನೂ ಮಹೂರ್ತ ಕೂಡಿ ಬಂದಿಲ್ಲ. ದಶಕಗಳಿಂದ ಸೇತುವೆಗಾಗಿ ಗ್ರಾಮಸ್ಥರು ಹೋರಾಟ ಮಾಡಿದರು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಇಲ್ಲಿಯವರೆಗೆ ಯಾರು ಕೂಡ ಈ ಕಡೆ ತಲೆ ಹಾಕುವ ಗೋಜಿಗೆ ಹೋಗಿಲ್ಲ.
ಮೂಡಲಗಿ ತಾಲೂಕಿನ ಹಾಗೂ ಮುಧೋಳ ತಾಲೂಕಿನ ಸುಮಾರು 15 ರಿಂದ 20 ಹಳ್ಳಿಯ ಜನರು ತಮ್ಮ ಕೆಲಸಗಳಿಗೆ ಮತ್ತು ವಾಣಿಜ್ಯೋದ್ಯಮಕ್ಕೆ ಸಮೀಪದ ಮಹಾಲಿಂಗಪೂರ ನಗರವನ್ನು ಅವಲಂಬಿಸಿದ್ದಾರೆ. ಹೀಗಾಗಿ ಮಹಾಲಿಂಗಪೂರ ನಗರವನ್ನು ಸಂಪರ್ಕಿಸುವ ಪ್ರಮುಖ ಸೇತುವೆ ಇದಾಗಿದೆ.
ಈ ಸೇತುವೆಯನ್ನು ಎತ್ತರಕ್ಕೆ ಏರಿಸದ ಕಾರಣ ಅಲ್ಪ ಪ್ರಮಾಣದಲ್ಲಿ ನೀರು ಬಂದರೂ ಸೇತುವೆ ಮುಳುಗಡೆ ಆಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇಲ್ಲಿ ಅನೇಕರು ಹಾದು ಹೋಗುವಾಗ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ.
ಕಳೆದ ವಾರವಷ್ಟೇ ಈ ಸೇತುವೆಯ ಮೇಲೆ ಬೈಕ್ ಮೇಲೆ ಹೋಗುವಾಗಿ ಓರ್ವ ಪುರುಷ ಮತ್ತು ಓರ್ವ ಮಹಿಳೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಸೇತುವೆ ಮೇಲ್ದರ್ಜೆಗೇರಿಸಲು ಇನ್ನೂ ಎಷ್ಟು ಜೀವಗಳು ಬಲಿಯಾಗಬೇಕೆಂದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಈಗಾಗಲೇ ಅರಭಾಂವಿ ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಿದರೂ ಸಹಿತ ಪ್ರಯೋಜನವಾಗಿಲ್ಲ. ಈ ಮಳೆಗಾಲ ಮುಗಿದ ತಕ್ಷಣ ಸೇತುವೆ ಎತ್ತರಕ್ಕೆ ಏರಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದೆಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ನಮ್ಮ ಅವರಾದಿ ಗ್ರಾಮದಲ್ಲಿ ಅನೇಕ ಪ್ರಭಾವಿ ರಾಜಕೀಯ ನಾಯಕರಿದ್ದರೂ ಇಲ್ಲಿಯವರೆಗೆ ಶಾಸಕರಿಂದ ಈ ಕೆಲಸ ಮಾಡಿಸಲಾಗುತ್ತಿಲ್ಲ. ಕೇವಲ ಅವರ ಬಾಲಂಗೋಚಿಗಳಾಗಿ ವೈಯಕ್ತಿಕ ಲಾಭಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಗ್ರಾಮಸ್ಥರ ಬವಣೆ ಕೇಳುವವರಿಲ್ಲ, ಇನ್ನಾದರೂ ಶಾಸಕರ ಮೇಲೆ ಒತ್ತಡ ಹೇರಿ ಈ ಕೆಲಸಮಾಡಬೇಕಿದೆ. ಯುವ ಸಮೂಹ ರೊಚ್ಚಿಗೇಳುವ ಮುನ್ನ ಈ ಸೇತುವೆ ಎತ್ತರಕ್ಕೆ ಏರಿ ಸಾರ್ವಜನಿಕರಿಗೆ ಅನೂಕೂಲ ಆಗಲಿ.
ಪ್ರಕಾಶ್ ರಾಮಪ್ಪ ಕಾಳಶೆಟ್ಟಿ
ಅವರಾದಿ