ಮೂಡಲಗಿ: ಶಿಕ್ಷಕರ, ಪಾಲಕ, ಪೋಷಕರ ಹಾಗೂ ವಿದ್ಯಾರ್ಥಿಗಳ ಪರಿಶ್ರಮದ ಫಲವಾಗಿ ಮೂಡಲಗಿ ಶೈಕ್ಷಣಿಕ ವಲಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ೨೦೨೧-೨೨ ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಪರೀಕ್ಷೆಗೆ ದಾಖಲಾದ ೭೦೩೯ ವಿದ್ಯಾರ್ಥಿಗಳ ಪೈಕಿ ೬೭೩೭ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮೂಡಲಗಿ ಶೈಕ್ಷಣಿಕ ವಲಯದ ಕೀರ್ತಿ ಹೆಚ್ಚಿಸಿದ್ದಾರೆಂದು ಬಿಇಒ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಗುರುವಾರ ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿ ಪ್ರಕಟಿಸಿದ ಫಲಿತಾಂಶದ ಹಿನ್ನೆಲೆಯಲ್ಲಿ ಮೂಡಲಗಿ ವಲಯದ ಸಾಧನೆಯನ್ನು ವಿವರಿಸಿ, ಶ್ರೇಣಿಯಾದರಿಸಿ ಎ ಪ್ಲಸ್ ೨೧೨೮, ಎ ೨೨೪೮, ಬಿ ಪ್ಲಸ್ ೧೩೪೪, ಬಿ ೭೨೩, ಸಿ ಪ್ಲಸ್ ೨೬೯, ಸಿ ೨೫ ದರ್ಜೆಯಲ್ಲಿ ಪಾಸಾಗಿದ್ದಾರೆ. ಕೋವಿಡ್-೧೯ ಹಿನ್ನೆಲೆಯಲ್ಲಿ ಕಲಿಕೆಯಲ್ಲಿ ಸಾಕಷ್ಟು ತೊಂದರೆಗಳ ನಡುವೆ ಶಿಕ್ಷಕ ಸಮುದಾಯ, ಪಾಲಕರ, ವಿದ್ಯಾರ್ಥಿಗಳ ಅವಿರತ ಪ್ರಯತ್ನದ ಫಲವಾಗಿ ಉತ್ತಮ ಫಲಿತಾಂಶ ದೊರಕಿದೆ. ಗುಣಮಟ್ಟದ ಫಲಿತಾಂಶ ದೊರೆಯಲು ಪ್ರಮುಖವಾಗಿ ವಿಷಯಾಧರಿತ ಧೀರ್ಘ ಉತ್ತರ ಬರೆಯುವದು, ಆಶು ಭಾಷಣ, ರಂಗೋಲಿ ಸಮಾಜ ವಿಜ್ಞಾನ, ವಿಜ್ಞಾನ ವಿಷಯ, ನಕ್ಷೆಗಳ ತಯಾರಿ, ಕ್ವಿಜ್ ಪ್ರಶ್ನೋತ್ತರ, ಸಂಪನ್ಮೂಲ ಶಿಕ್ಷಕರಿಂದ ತಂಡ ಭೇಟಿ, ಬೆಳಗ್ಗೆ ವಿಶೇಷ ತರಗತಿಗಳ ಆಯೋಜನೆ, ಪರೀಕ್ಷಾ ಪೂರ್ವದಲ್ಲಿ ೩ ಪರೀಕ್ಷೆಗಳು, ಪ್ರತಿದಿನ ಸಾಯಂಕಾಲ ಗುಂಪು ಅಧ್ಯಯನ, ಸಮೂಹ ಸಂವಹನಗಳ ಮೂಲಕ ಅಗತ್ಯ ವಿಷಯಾಧರಿಸಿದ ಕಲಿಕಾ ಸಾಮರ್ಥ್ಯಗಳನ್ನು ಪೂರೈಸಿದ ಫಲವಾಗಿ ಗುಣಮಟ್ಟದ ಫಲಿತಾಂಶ ದೊರಕಿದೆ ಎಂದು ಹೇಳಿದ್ದಾರೆ.
ಮೂಡಲಗಿ ಶೈಕ್ಷಣಿಕ ವಲಯ ಜಲ ಪ್ರವಾಹ, ಕೋವಿಡ್-೧೯ ನಂತಹ ಪರಿಸರ ಸಂಕಷ್ಟಕಗಳ ನಡುವೆ ಈ ಸಲದ ಫಲಿತಾಂಶವು ಶಿಕ್ಷಕ ಸಮುದಾಯದ ನಿರಂತರ ಪ್ರಯತ್ನದ ಫಲನೀಡಿದೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಶಾಲಾ ಆಂಡಳಿತ ಮಂಡಳಿಯವರ ಶಿಕ್ಷಣದ ಕುರಿತಾದ ಸಾಮಾಜಿಕ ಕಳಕಳಿ ಮೆಚ್ಚುವಂತಹದು. ವಿದ್ಯಾರ್ಥಿಗಳು ಗುಣಾತ್ಮಕ ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ತಮ್ಮಯ ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಶ್ರಮವಹಿಸಿರುವದು ಪ್ರಶಂಸಾರ್ಯವಾಗಿದೆ. ಉತ್ತಮ ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳ ಮುಂದಿನ ಭವಿಷ್ಯತ್ತಿನ ಜೀವನ ರೂಪಿಸಿಕೊಳ್ಳುವಲ್ಲಿ ಶಿಕ್ಷಕ ಸಮುದಾಯ, ಪಾಲಕ ಪೋಷಕರು, ಚುನಾಯಿತ ಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳ ಸಹಾಯ ಸಹಕಾರ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯಕ್ಕೆ ದ್ವಿತೀಯ, ಮೂಡಲಗಿ ವಲಯಕ್ಕೆ ಪ್ರಥಮ ಸ್ಥಾನವನ್ನು ೬೨೪ ಅಂಕ ಪಡೆದು ಮೊರಾರ್ಜಿ ವಸತಿ ಶಾಲೆಯ ಅಡಿವೇಶ ಬಂಗೆನ್ನವರ, ಲಕ್ಷ್ಮೀ ಚನಾಳ, ದ್ವಿತೀಯ ಸ್ಥಾನದಲ್ಲಿ ೬೨೩ ಅಂಕ ಪಡೆದು ಗಾಯತ್ರಿ ಚಾಯಪ್ಪಗೋಳ, ಸರಸ್ವತಿ ಕೌಜಲಗಿ, ಹನಮಂತ ನಾಯ್ಕ, ಕಲಾವತಿ ಹೊಸಮನಿ, ಮೇಹಕ್ ಡಾಂಗೆ, ಪ್ರಜ್ವಲ ಸಕ್ರಿ, ಪ್ರವೀಣ ಕೆಂಚನ್ನವರ, ತೇಜಶ್ವೀನಿ ಹೆಬ್ಬಾಳ, ಸೌಮ್ಯ ಸಿದ್ದಾಪೂರ, ಸುಬಾನ್ ನದಾಫ್, ಮಹಾಲಕ್ಷ್ಮಿ ತಳವಾರ ಹಾಗೂ ತೃತೀಯ ಸ್ಥಾನಗಳಲ್ಲಿ ೬೨೨ ಅಂಕ ಪಡೆದು ೯ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಉತ್ತಮ ಸಾಧನೆ ಗೈದಿದ್ದಾರೆ.
ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಉತ್ತಮ ಫಲಿತಾಂಶ ದೊರಕಿದರಿಂದ ವಿದ್ಯಾರ್ಥಿಗಳಲ್ಲಿ, ಪಾಲಕ ಪೋಷಕರಿಗೆ, ಶಿಕ್ಷಕ ಸಮುದಾಯದಲ್ಲಿ ಹರ್ಷದಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.