ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್
ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಶೀರ್ವಾದ ಮಾಡುವಂತೆ ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಕೋರಿದರು.
ಶುಕ್ರವಾರದಂದು ನಿಪ್ಪಾಣಿ ಪಟ್ಟಣದ ಹೊರವಲಯದಲ್ಲಿರುವ ಬ್ರಹ್ಮನಾಥ ಭವನದಲ್ಲಿ ಹಮ್ಮಿಕೊಂಡ ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪಕ್ಷಾತೀತವಾಗಿ ನನಗೆ ಬೆಂಬಲ ನೀಡುತ್ತಿದ್ದಾರೆ. ಈಗಾಗಲೇ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದು, ಎಲ್ಲ ಕಡೆಗಳಲ್ಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲ ಸಮಾಜಗಳ ಬೆಂಬಲ, ಹಿರಿಯ ಆಶೀರ್ವಾದ ಸದಾ ನನ್ನ ಮೇಲಿದೆ. ಪಂಚಾಯತಿಗಳ ಬಲವರ್ಧನೆಗಾಗಿ ಡಿ.10 ರಂದು ನಡೆಯುವ ಪರಿಷತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಇರಾದೆ ಹೊಂದಿದ್ದೇನೆ. ಪರಿಷತ್ ಸದಸ್ಯನಾಗಿ ಆಯ್ಕೆ ಮಾಡಿದರೆ ಖಂಡಿತವಾಗಿಯೂ ಗ್ರಾಮ ಪಂಚಾಯತಿಗಳಿಗಿರುವ ಅಧಿಕಾರ ಹಾಗೂ ಪಂಚಾಯತ ಸದಸ್ಯರಿಗೆ ಇರುವ ಸ್ಥಾನಮಾನಗಳನ್ನು ಸದುಪಯೋಗಪಡಿಸಿಕೊಳ್ಳುವ ರೀತಿಯಲ್ಲಿ ಗೌರವಪೂರ್ವಕವಾಗಿ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಈ ಚುನಾವಣೆ ಬಂದ ಮೇಲೆ ಕೆಲ ಅಭ್ಯರ್ಥಿಗಳು ಸದಸ್ಯರ ಮನೆ ಬಾಗಿಲಿಗೆ ಬಂದು ಹೋಗುತ್ತಿದ್ದಾರೆ. ಆಯ್ಕೆಯಾದ ಮೇಲೆ ಹಿಂತಿರುಗಿಯೂ ನೋಡುವುದಿಲ್ಲ. ಅಲ್ಲದೇ ಸಾಕಷ್ಟು ಆಮೀಷಗಳನ್ನು ಸಹ ಸದಸ್ಯರಿಗೆ ಒಡ್ಡುತ್ತಿರುವುದು ತಿಳಿದುಬಂದಿದೆ. ಸಮಗ್ರ ಅಭಿವೃದ್ಧಿಯೇ ನಮ್ಮಗಳ ಗುರಿಯಾಗಿದೆ. ಪಂಚಾಯತ ಸದಸ್ಯರಿಗೆ ಎಲ್ಲ ರೀತಿಯ ಸ್ಥಾನಮಾನಗಳನ್ನು ಕಲ್ಪಿಸಿಕೊಡಲಾಗುವುದು. ಯಾವುದೇ ಸಮಸ್ಯೆಗಳಿದ್ದರೆ ನಮ್ಮ ಕಛೇರಿ ಬಾಗಿಲು ಎಂದೆಂದಿಗೂ ತೆರೆದಿರುತ್ತದೆ. ಜನ ಸೇವೆಯೇ ನಮ್ಮಗಳ ಪರಮ ಗುರಿ ಎಂದು ಲಖನ್ ಜಾರಕಿಹೊಳಿ ಹೇಳಿದರು.
ವಿಪ ಚುನಾವಣೆ ಈ ಬಾರಿ ಮಹತ್ವದಿಂದ ಕೂಡಿದ್ದು, ಬರುವ ಡಿ. 10 ರಂದು ನಡೆಯಲಿರುವ ಮತದಾನದಂದು ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸಬೇಕು. ನಿಮ್ಮಗಳ ಸೇವೆಗಾಗಿಯೇ ಪರಿಷತ್‍ಗೆ ನನ್ನನ್ನು ಚುನಾಯಿಸಲು ಶೇಜ್ ನಂ. 5 ಕ್ಕೆ ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ಹೆಚ್ಚಿನ ಅಂತರದಿಂದ ವಿಜಯಶಾಲಿಯನ್ನಾಗಿ ಆಯ್ಕೆ ಮಾಡುವಂತೆ ಲಖನ್ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.
ಯುವ ಧುರೀಣ ಉತ್ತಮ ಪಾಟೀಲ ಮಾತನಾಡಿ, ಜಾರಕಿಹೊಳಿ ಸಹೋದರರು ನಿಪ್ಪಾಣಿಯೂ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಬಸವ ತತ್ವ ಪರಿಪಾಲಕರಾದ ಸಹೋದರರು ಜಾತ್ಯಾತೀತವಾಗಿ ಎಲ್ಲ ಸಮುದಾಯಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ಕ್ಷೇತ್ರಗಳನ್ನು ಬೆಳೆಸುತ್ತಿದ್ದಾರೆ. ಕುಟುಂಬದ ಕಿರಿಯ ಸದಸ್ಯರಾಗಿರುವ ಲಖನ್ ಜಾರಕಿಹೊಳಿ ಅವರನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡುವ ಮೂಲಕ ಲಖನ್ ಅವರ ಕೈ ಬಲಪಡಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಜಯವಂತ ಕಾಂಬಳೆ, ವಿಲಾಸ ಗಾಡಿವಡ್ಡರ, ಅಭಿನಂದನ ಪಾಟೀಲ, ದಲಿತ ಮುಖಂಡ ಅಶೋಕ ಅಸೂಧೆ, ಚೇತನ ಸ್ವಾಮಿ, ಸಚೀನ ಖೋತ್, ಸುನೀಲ ಮಹಾಕಾಳಿ, ಇಂದ್ರಜೀತ್ ಸೋಳಾಂಕುರೆ, ಸಂಜಯ ಕಾಗೆ, ತಾನಾಜಿ ಚೌಗಲೆ, ಉಮೇಶ ಪಾಟೀಲ, ನಿಪ್ಪಾಣಿ ಮತಕ್ಷೇತ್ರದ ಗ್ರಾಮ ಪಂಚಾಯತ ಸದಸ್ಯರು, ಪಟ್ಟಣ ಪಂಚಾಯತ ಸದಸ್ಯರು ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.