ಬೆಂಗಳೂರು: ಕನ್ನಡದ ವೀರ ಸೇನಾನಿಯಾದ ಟಿ.ಎ.ನಾರಾಯಣ ಗೌಡರು ಕನ್ನಡಕ್ಕಾಗಿ ವೀರ-ಧೀರ-ಶೂರರಾಗುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಕೂಡ ಹೊಂದಿದವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಬಣ್ಣಿಸಿದರು.
ಅವರು ನಾಡಿನ ಅಪರೂಪದ ಕನ್ನಡ ಸೇನಾನಿ, ಕನ್ನಡಕ್ಕೆ ಸದಾ ಮಿಡಿವ ಚೈತನ್ಯದ ಚಿಲುಮೆ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಿದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣವನ್ನು ಮಾಡುತ್ತಿದ್ದರು.
ಕನ್ನಡ ನೆಲ, ಜಲ, ಕನ್ನಡಿಗರ ನೆಮ್ಮದಿಯ ಬದುಕಿಗಾಗಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿರುವ ನಾರಾಯಣ ಗೌಡರು ಇದುವರೆಗೂ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಯಾವುದೇ ಪುರಸ್ಕಾರವನ್ನೂ ಸ್ವೀಕರಿಸಿಲ್ಲ. ಆದರೆ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಭಿಮಾನ ಮತ್ತು ಕುವೆಂಪು ಅವರ ಸಾಹಿತ್ಯದ ಪ್ರೇರಣೆಯಿಂದ ಹೋರಾಟಕ್ಕೆ ಬಂದ ಹಿನ್ನೆಲೆಯಿಂದ ತಮ್ಮ ಜೀವನದ ಮೊಟ್ಟ ಮೊದಲ ಪ್ರಶಸ್ತಿಯಾಗಿ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾರೆ ಎಂದ ನಾಡೋಜ ಡಾ.ಮಹೇಶ ಜೋಶಿಯವರು ವಿವೇಕಾನಂದರು ಪ್ರವಾಹದ ವಿರುದ್ದ ಹೋರಾಡುವವರು ಯೋಧರು ಎಂದು ಹೇಳಿದ್ದನ್ನು ನೆನೆಪು ಮಾಡಿ ಕೊಂಡ ಅವರು ಕಾವೇರಿ ತೀರ್ಪಿನ ವಿರುದ್ದ, ಬೆಳಗಾವಿ ಕರ್ನಾಟಕಕ್ಕೇ ಸೇರ ಬೇಕು ಎನ್ನುವ ಕುರಿತು ಹೀಗೆ ನಾರಾಯಣ ಗೌಡರ ಹೋರಾಟದ ಹಾದಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಾರಾಯಣ ಗೌಡರೂ ಬೆಂಬಲ ನೀಡಿದ್ದನ್ನ ಸ್ಮರಿಸಿ ನ್ಯಾಯಾಧೀಶರಿಂದ ಹಿಡಿದು ಸಮಾಜದ ಎಲ್ಲಾ ಹಂತದ ಕನ್ನಡಿಗರೂ ಬೆಂಬಲ ನೀಡಿರುವುದು ಕನ್ನಡ ಕೆಲಸಕ್ಕೆ ಹುಮ್ಮನಸ್ಸನ್ನು ತಂದಿದೆ ಎಂದರು. ಕನ್ನಡದ ತಂಟೆಗೆ ಬಂದರೆ ಬುಲ್ಡೋಜರ್ ಆಗಿ ಬಿಡುತ್ತೇವೆ ಎಂಬ ಕುವೆಂಪು ಅವರ ಮಾತನ್ನು ನೆನಪು ಮಾಡಿ ಕೊಂಡ ಅವರು ‘ಸ್ನೇಹಕ್ಕೆ ಬದ್ದ; ಸಮರಕ್ಕೆ ಸಿದ್ದ’ ಎನ್ನುವ ಮನೋಭಾವದ ನಾರಾಯಣ ಗೌಡರು ಕನ್ನಡದ ಬದ್ದತೆಯ ಹರಿಕಾರ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ.ಹಂಪ.ನಾಗರಾಜಯ್ಯನವರು ಮಾತನಾಡಿ, ನಾನು ಕುವೆಂಪು ಅವರ ನೇರ ಶಿಷ್ಯನಾದರೆ ನಾರಾಯಣ ಗೌಡರು ಪರೋಕ್ಷ ಶಿಷ್ಯರು. ಹೋರಾಟಗಾರರದಂತೆ ಅವರು ವಿನಯವಂತರು, ಬೀಗುವವರಲ್ಲ ಬಾಗುವವರು. ಕನ್ನಡ ಬಾವುಟಕ್ಕೆ ಇರುವ ಶಕ್ತಿಯನ್ನು ತೋರಿಸಿ ಕೊಟ್ಟವರು, ನಾರಾಯಣ ಗೌಡರು ಕನ್ನಡ ಚಳವಳಿಯನ್ನು ವಿಕೇಂದ್ರೀಕರಣಗೊಳಿಸಿದರು. ಸ್ವಯಂ ಬರಹಗಾರರಾದ ಅವರು ಕನ್ನಡದ ವಿರಾಟ್ ಶಕ್ತಿಯನ್ನು ತೋರಿಸಿ ಕೊಟ್ಟರು ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಮಾಡಿದ ವಿಶ್ರಾಂತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಕೆ.ಎಂ.ಶಿವಲಿಂಗೇ ಗೌಡರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಎರಡರ ಉದ್ದೇಶವೂ ಒಂದೇ ಆಗಿದೆ. ಇಲ್ಲಿ ಕನ್ನಡ ಹೃದಯದ ಮಾತಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಗೆ ಹೋರಾಟದ ಅಯಾಮ ಇರುವಂತೆ ವೈಚಾರಿಕತೆಯ ಅಯಾಮ ಕೂಡ ಇದೆ ಯುವ ಸಮುದಾಯಕ್ಕೆ ನಾಯಕತ್ವದ ಗುಣವನ್ನು ಅವರು ಕಲಿಸುತ್ತಾ ಬಂದಿದ್ದಾರೆ ಎಂದು ಪ್ರಶಂಸಿಸಿದರು. ಅಭಿನಂದನಾ ನುಡಿಗಳನ್ನಾಡಿದ ಡಾ.ದೊಡ್ಡರಂಗೇ ಗೌಡರು ಕರ್ನಾಟಕ ರಕ್ಷಣಾ ವೇದಿಕೆಯ ಹುಟ್ಟಿನಿಂದ ನಾನು ಜೊತೆಗಿದ್ದೇನೆ ಎಂದು ಹೇಳಿ ನಾರಾಯಣ ಗೌಡರನ್ನು ಸಂಸ್ಕೃತಿಯ ಹಿನ್ನೆಲೆ ಇರುವ ನಾಯಕನೆಂದು ವರ್ಣಿಸಿ ಸಂಘಟನೆಗೆ ಪರ್ಯಾಯ ಪದವೇ ನಾರಾಯಣ ಗೌಡರಾಗಿದ್ದಾರೆ ಅವರೊಬ್ಬ ಅವರ ಹೋರಾಟದಲ್ಲಿ ಅಭಿಜಾತವಾದ ಆಶಯಗಳಿವೆ ಎಂದರು.
ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಶ್ರೀ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಮಾತನಾಡಿ ಬೆಳಗಾವಿಯಲ್ಲಿ ಕನ್ನಡ ಉಳಿಯುವಲ್ಲಿ ನಾರಾಯಣ ಗೌಡರ ಪಾತ್ರ ಬಹಳ ಮುಖ್ಯವಾದದ್ದು ಉತ್ತರ ಕರ್ನಾಟಕಕ್ಕೆ ತೊಂದರೆಯಾದಾಗಲೆಲ್ಲ ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಶ್ರೀ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರುವರು ಧ್ವನಿ ಎತ್ತಿದ್ದಾರೆ. ಈ ಪುರಸ್ಕಾರ ಸ್ವತಃ ಕುವೆಂಪು ಅವರೇ ಕೈ ತುತ್ತು ತಿನ್ನಿಸಿದಷ್ಟು ಆತ್ಮೀಯವಾಗಿದೆ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಇನ್ನೊಬ್ಬ ಶ್ರೀಗಳಾದ ಕೋಡಿ ಮಠದ ಶ್ರೀಗಳಾದ ಶ್ರೀ ಶ್ರೀ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿಯವರು ನಾರಾಯಣ ಗೌಡರಿಗೆ ಅವರೇ ಹೋಲಿಕೆ ಕೆಂಪೇಗೌಡರೇ ನಾರಾಯಣ ಗೌಡರಾಗಿ ಜನಿಸಿದ್ದಾರೆ ಎನ್ನುವ ಭವ್ಯತೆ ಅವರ ವ್ಯಕ್ತಿತ್ವದಲ್ಲಿದೆ ಎಂದರು.
ಪುರಸ್ಕಾರಕ್ಕೆ ಸ್ಪಂದಿಸಿದ ನಾರಾಯಣ ಗೌಡರು ನಾನು ನಾಯಕನಲ್ಲ ನೀವೇ ನನ್ನ ನಾಯಕರು ಮನುಜಮತ ವಿಶ್ವ್ಪಥದ ಕುವೆಂಪು ಅವರ ಆಶಯಕ್ಕೆ ಸ್ಪಂದಿಸಿ ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪ ವೃಕ್ಷವಾಗುತ್ತದೆ ಎನ್ನವ ಅವರ ಕರೆಗೆ ಸ್ಪಂದಿಸಿ ಹೋರಾಟಕ್ಕೆ ಬಂದೆ ಹೀಗಾಗಿ ಕುವೆಂಪು ಅವರ ಹೆಸರಿನ ಪುರಸ್ಕಾರ ನನಗೆ ಬಹಳ ಮುಖ್ಯ, ಕನ್ನಡ ಸಾಹಿತ್ಯ ಪರಿಷತ್ತು ನಾಡೋಜ ಡಾ.ಮಹೇಶ ಜೋಶಿಯವರ ನೇತೃತ್ವದಲ್ಲಿ ಬಹಳ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎನ್ನುವ ಮಾತಿನಂತೆ ಅವರು ಟೀಕೆಗಳ ಬಗ್ಗೆ ಚಿಂತಿಸದೆ ಮುನ್ನುಗ್ಗಲಿ ಎಂದು ಆಶಿಸಿ ಕರ್ನಾಟಕ ರಕ್ಷಣಾ ವೇದಿಕೆ ಸದಾ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ಕೆಲಸ ಮಾಡುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟರು ಸ್ವಾಗತಿಸಿದರೆ ಇನ್ನೊಬ್ಬ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು ವಂದಿಸಿದರು. ತಿಮ್ಮೇಶ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರೆ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ ಪಾಂಡು ಅವರು ಪ್ರಶಸ್ತಿ ಪತ್ರವನ್ನು ವಾಚಿಸಿದರು. ಕಾರ್ಯಕ್ರಮಕ್ಕೆ ಮೊದಲು ಖ್ಯಾತ ಗಾಯಕರಾದ ಮತ್ತು ಆನಂದ ಮಾದಲಗೆರೆಯವರ ತಂಡದಿಂದ ಗೀತ ಗಾಯನ ಕಾರ್ಯಕ್ರಮವಿತ್ತು.
ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ಸಮಿತಿ
ಕನ್ನಡ ಸಾಹಿತ್ಯ ಪರಿಷತ್ತು