ಮುಧೋಳ – ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಭಾಗದ ಲಕ್ಷಾಂತರ ಜನರು ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದಾರೆ. ಇವತ್ತು ಗ್ರಾಮೀಣ ಭಾಗದ ಜನರಿಗೆ ಧರ್ಮಸ್ಥಳದ ಯೋಜನೆಗಳು ದಾರಿದೀಪವಾಗಿವೆ ಎಂದು ತಾಲೂಕಾ ಯೋಜನಾಧಿಕಾರಿಗಳಾದ ರಾಜೀವ್ ಆಚಾರ್ಯರು ಅಭಿಪ್ರಾಯ ಪಟ್ಟರು.
ಅವರು ಮುಧೋಳ ತಾಲೂಕಿನ ಶ್ರೀ ಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಸಭೆಯನ್ನು ಉದ್ಘಾಟಿಸಿ ಒಕ್ಕೂಟದ ಸದಸ್ಯರನ್ನುದೇಶಿಸಿ ಮಾತನಾಡುತ್ತಾ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಕಲ್ಪನೆ ಕನಸು ಗ್ರಾಮಾಂತರ ಪ್ರದೇಶದ ಜನರಿಗೆ ಅವರ ಯೋಜನೆಗಳು ದಾರಿದೀಪವಾಗಿದೆ. ಸ್ವಸಹಾಯ ಸಂಘಗಳ ಸ್ಥಾಪನೆ, ಕಿರು ಆರ್ಥಿಕ ವ್ಯವಹಾರ, ಯುವಕರಿಗೆ ಉದ್ಯೋಗ ಅಲ್ಪಕಾಲಕ್ಕೆ ಹೆಚ್ಚು ಆದಾಯ ಬರುವಂತಹ ಹೈನುಗಾರಿಕೆ ಮುಂತಾದ ಯೋಜನೆಗಳು ಹಾಗೂ ಮದ್ಯಪಾನ ಬಿಡಿಸುವಂತಹ ಮಹತ್ತರ ಯೋಜನೆ ಇವತ್ತು ನಾಡಿನಾದ್ಯಂತ ಹಲವು ಕುಟುಂಬಗಳನ್ನ ಬದುಕಿಸಿದೆ. ಹೀಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಜ್ಞಾನವಿಕಾಸ ಕಾರ್ಯಕ್ರಮದಿಂದ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕಾಗಿ ನೀಡಲಾಗುತಿದೆ ಇವುಗಳನ್ನು ಗ್ರಾಮಾಂತರದ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಲು ಹೇಳಿದರು.
ಲೋಕನಾಯಕಿ ಸಂಸ್ಥೆಯ ಅಧ್ಯಕ್ಷೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿಗಳಾದ ಎಲ್. ಶ್ಯಾಮಲಾ ಅವರು ಮಾತನಾಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಮ್ಮರವಾಗಿ ಬೆಳೆದ ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ವ್ಯವಸ್ಥಿತವಾದ ಅಪಪ್ರಚಾರ ನಡೆಯುತ್ತಿದೆ. ನಾವೆಲ್ಲ ಅದನ್ನು ಒಕ್ಕೂರಲಿನಿಂದ ಖಂಡಿಸಬೇಕು. ಧರ್ಮಸ್ಥಳ ಸಂಸ್ಥೆಯಿಂದ ಯಾವುದೇ ಯೋಜನೆಗಳನ್ನು ಪಡೆಯುವ ಹಂತದಲ್ಲಿ ಯಾರಿಗೂ ಕೂಡ ಆಸೆ ಆಮಿಷಗಳನ್ನು ಒಡ್ಡುವಂತಹ ಪ್ರಯತ್ನವನ್ನು ಸದಸ್ಯರು ಮಾಡಕೂಡದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನೂರಾರು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವು ವಿಶೇಷವಾಗಿ ಜರುಗಿತು.ಕೃಷಿ ಅಧಿಕಾರಿ ಪ್ರವೀಣ ಹಾಗೂ ಮಂಜುಳಾ ಮುಚ್ಚಂಡಿ, ಸೋನವ್ವ ತೆಳಗೇರಿ, ಭಾರತಿ ಮಟಗಾರ, ಸುಜಾತಾ ಒಡೆಯರ ಉಪಸ್ಥಿತರಿದ್ದರು