ಪರಿಸರ ನಾಶದಿಂದ ಪ್ರಕೃತಿ ಮುನಿಯುತ್ತಿದೆ – ಡಾ.ಶಿವಾನಂದ ಹೊಸಮನಿ

0
1103

ಸಿಂದಗಿ: ಪರಿಸರದ ಅಸಮತೋಲನದಿಂದ ಮಾಲಿನ್ಯ ಹೆಚ್ಚಾಗಿ ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳಲ್ಲಿ ದಮ್ಮು, ಕೆಮ್ಮು, ಅಸ್ತಮಾದಂಥ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಯಾವ ಔಷಧಿಯೂ ಶಾಶ್ವತ ಪರಿಹಾರವಲ್ಲ ಬದಲಾಗಿ ನಮಗೆ ಅವಶ್ಯಕ ಹಾಗೂ ಪೂರಕವಾದ ಪರಿಸರ ನಿರ್ಮಾಣದ ಜವಾಬ್ದಾರಿ ಪ್ರಜ್ಞಾವಂತ ನಾಗರಿಕರ ಮೇಲಿದೆ ಎಂದು ಖ್ಯಾತ ವೈದ್ಯ ಡಾ.ಶಿವಾನಂದ ಹೊಸಮನಿ ಹೇಳಿದರು.

ಪಟ್ಟಣದ ಸುಷ್ಮಾ ಪಬ್ಲಿಕ್ ಸ್ಕೂಲ್‍ನಲ್ಲಿ ಹಮ್ಮಿಕೊಂಡ 24 ನೇ ವಾರದ ವಿಶ್ವಬಂಧು ಪರಿಸರ ಜಾಗೃತಿ ಆಂದೋಲನದ ಸಸಿನೆಡುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ಮರಗಳ ಮಾರಣಹೋಮದಿಂದ ಕಾಡುಗಳು ನಾಶವಾಗುತ್ತಿದೆ ಇದರಿಂದ ಪ್ರಾಣಿ ಪಕ್ಷಿಗಳು ವಲಸೆ ಹೋಗುವ ಪ್ರಸಂಗ ಒದಗಿ ಬಂದಿದೆ ಕಾಡಿನಲ್ಲಿ ವನ್ಯ ಮರಗಳ ನಾಶದಿಂದಾಗಿ ವನ್ಯ ಮೃಗಗಳು ಜನವಸತಿ ಪ್ರದೇಶಗಳತ್ತ ನುಗ್ಗಿ ಮನುಷ್ಯ ಹಾಗೂ ಕಾಡು ಪ್ರಾಣಿಗಳ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಮಳೆಬಾರದೇ ಬರ ಆವರಿಸುವುದು ಅಥವಾ ಅತಿಯಾದ ಉಷ್ಣತೆಯಿಂದ ಜಾಗತಿಕ ತಾಪಮಾನ ಹೆಚ್ಚಾಗಿ ಮೇಘಸ್ಪೋಟ ಸಂಭವಿಸಿ ಅತಿವೃಷ್ಟಿಯಿಂದಾಗಿ ಅಪಾರ ಹಾನಿ ಹೀಗೆ ಹಲವಾರು ಸಮಸ್ಯೆಗಳು ಪರಿಸರ ನಾಶದಿಂದ ಆಗುತ್ತಿದೆ. ಕಾರಣ ಪ್ರತಿ ವಿದ್ಯಾರ್ಥಿಯೂ ತಮ್ಮ ತಮ್ಮ ಸುತ್ತಮುತ್ತಲು ವಾತಾವರಣದಲ್ಲಿ ಒಂದೊಂದು ಮರನೆಟ್ಟು ಬೆಳೆಸಿದರೆ ಬರುವ ಹತ್ತು ವರ್ಷಗಳಲ್ಲಿ ನಾಡೆಲ್ಲಾ ಹಸುರಿನಿಂದ ಕಂಗೊಳಿಸುತ್ತದೆ. ಅಲ್ಲದೇ ಆಕ್ಷಿಜನ್ ಕೊರತೆಯೂ ನೀಗುತ್ತದೆ ಎಂದರಲ್ಲದೇ ವಿಶ್ವಬಂಧು ಪರಿಸರ ಬಳಗದ ಕಾರ್ಯ ಶ್ಲಾಘನೀಯ ಎಲ್ಲರೂ ಅದರ ಜೊತೆ ಕೈಜೋಡಿಸೋಣ ಎಂದರು.

ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ಧಲಿಂಗ ಚೌಧರಿ ಮಾತನಾಡಿ, ಪರಿಸರದ ಸಂರಕ್ಷಣೆ ಪ್ರತಿ ನಾಗರಿಕನ ಮೇಲಿದೆ ಸಸಿಗಳನ್ನು ನೆಟ್ಟರಷ್ಟೇ ಸಾಲದು ಅವುಗಳನ್ನು ಪಾಲನೆ ಪೋಷಣೆಯ ಜವಾಬ್ದಾರಿ ನಾವೆಲ್ಲ ಹೊರಬೇಕು ಎಂದರು.

ಶಕುಂತಲಾ ಹಿರೇಮಠ ಪ್ರಾರ್ಥಿಸಿದರು ಸಾಯಬಣ್ಣ ದೇವರಮನಿ ಸ್ವಾಗತಿಸಿ ನಿರೂಪಿಸಿದರು ಮಲ್ಲಿಕಾರ್ಜುನ ಬಿರಾದಾರ ವಂದಿಸಿದರು. ಮಹಾದೇವಿ ಹಿರೇಮಠ, ಪ್ರಕಾಶ ರಾಗರಂಜಿನಿ, ಸಂಗೀತಾ ತಿಕೋಟಿ, ಶರಣಗೌಡ ಬಿರಾದಾರ, ಗುರು ದಶವಂತ, ಮಂಜುನಾಥ ದೊಡಮನಿ, ಪರಿಮಳ ಯಲಗೋಡ, ರಾಘವೇಂದ್ರ ನಾಯಕ, ಮಂಜುನಾಥ ಜಲಕೋಟೆ, ಶರಣು ನಂದ್ಯಾಳ, ಸಾವಿತ್ರಿ ನರಬಳ್ಳಿ, ಲಕ್ಷ್ಮಿ ಬಡಿಗೇರ, ದಾನಮ್ಮ, ಸಿದ್ದಮ್ಮ ಹೊಸಮನಿ, ಲಲಿತಾ ತಿಕೋಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.