ಹತ್ತಾರು ಟ್ರ್ಯಾಕ್ಟರ್ ಸಮೇತ ಪಂಚಾಯತಿ ಮುಂದೆ ನೂರಾರು ಜನ ಕಾರ್ಮಿಕರು ಪ್ರತಿಭಟನೆ
ಹುನಗುಂದ: ನರೇಗಾ ಯೋಜನೆ ಅಡಿಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರು ಕೆಲಸ ಮಾಡಿದರೂ ಕೂಡಾ ಕಳೆದ ಆರು ತಿಂಗಳಿನಿಂದ ಪದೇ ಪದೇ (ಎನ್.ಎಂ.ಆರ್) ಪೇಮೆಂಟ್ ಜೀರೋ ಮಾಡುತ್ತಿರುವುದ್ದು ಇದೆಲ್ಲಾ ಪಿಡಿಓ ಮತ್ತು ಕಂಪ್ಯೂಟರ್ ಆಪರೇಟರ್ ದಿವ್ಯ ನಿರ್ಲಕ್ಷ್ಯದಿಂದಾಗಿದೆ. ಅವರ ಕಾರ್ಯವೈಕರಿಯನ್ನು ಖಂಡಿಸಿ ಶನಿವಾರ ಹತ್ತಾರು ಟ್ರ್ಯಾಕ್ಟರ್ ಗಳಲ್ಲಿ ಬುತ್ತಿ ಕಟ್ಟಿಕೊಂಡು ಇದ್ದಲಗಿ ಗ್ರಾಮದ ನೂರಾರು ಕೂಲಿ ಕಾರ್ಮಿಕರು ಧನ್ನೂರ ಗ್ರಾಮ ಪಂಚಾಯತಿಯ ಮುಂದೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನಾ ನಿರತ ಶರಣಪ್ಪ ಮುಳ್ಳೂರ ಮಾತನಾಡಿ ಕಳೆದ ಏಪ್ರಿಲ್ ತಿಂಗಳಲ್ಲಿ ಮಾಡಿರುವ ಒಂದು ಕೆಲಸಕ್ಕೆ ಮೂರು ಬಾರಿ ಎನ್ಎಂಆರ್ ಜೀರೋ ಮಾಡಿದ್ದು, ಇದರಿಂದ ೩೦ಕ್ಕೂ ಹೆಚ್ಚು ಜನ ಕೂಲಿ ಕಾರ್ಮಿಕರು ಮಾಡಿದ ಕೆಲಸಕ್ಕೆ ಪೇಮೆಂಟ್ ಇಲ್ಲದೇ ನಿತ್ಯ ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ ಒಂದು ಕೆಲಸಕ್ಕೆ ಆರು ತಿಂಗಳಲ್ಲಿ ಮೂರು ಬಾರಿ ಎನ್ಎಂಎಂಎಸ್ ಮಾಡಿಸಿದರೂ ಕೂಡಾ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪೇಮೆಂಟ್ ಆಗುತ್ತಿಲ್ಲ. ಅಧಿಕಾರಗಳ ನಿರ್ಲಕ್ಷ್ಯಕ್ಕೆ ಕಾರ್ಮಿಕರು ನಿತ್ಯ ಹೊಲದ ಕೆಲಸವನ್ನು ಬಿಟ್ಟು ಮತ್ತೆ ಎನ್ಎಂಎಂಎಸ್ ಮಾಡಿದರೂ ಪೇಮೆಂಟ್ ಆಗುತ್ತದೆ ಎನ್ನುವ ಗ್ಯಾರಂಟಿ ಇಲ್ಲದಂತಾಗಿದೆ. ಪದೇ ಪದೇ ಯಾಕೆ ಎನ್ಎಂಆರ್ ಜೀರೋ ಆಗುತ್ತೇ ಅದಕ್ಕೆ ಕಾರಣ ಕೇಳಿದರೇ ತಾಂತ್ರಿಕ ದೋಷ ಮತ್ತು ಪೋಟೋ ಮ್ಯಾಚ್ ಆಗದೇ ಇರೋದಕ್ಕೆ ಎನ್ನುವ ಎರಡು ಕಾರಣ ಬಿಟ್ಪರೇ ನಿಮ್ಮಲ್ಲಿ ಏನು ಕಾರಣಗಳಿವೆ ಹೇಳಿ ಎಂದು ತಾ. ಪಂ. ಎಡಿ ಮಹಾಂತೇಶ ಚಲವಾದಿ ಮತ್ತು ಪಿಡಿಓ ಬಸವರಾಜ ಹುಲ್ಯಾಳ ಅವರಿಗೆ ಪ್ರಶ್ನೆ ಮಾಡಿದರು.
ಅವರು ಉತ್ತರ ಕೊಡಲು ತಡವರಿಸಿದ್ದು ನೋಡಿದರೇ ಇವರ ನಿರ್ಲಕ್ಷ್ಯ ಎದ್ಧು ಕಾಣುತ್ತದೆ.ಇನ್ನು ಎರಡು ತಿಂಗಳಿನಿಂದ ಕೆಲಸ ನೀಡಿ ಎಂದು ಅರ್ಜಿ ಸಲ್ಲಿಸಿದರೂ ಕೂಡಾ ಕೆಲಸ ನೀಡುತ್ತಿಲ್ಲ, ಕೂಸಿನ ಮನೆಯನ್ನು ನಿರ್ವಹಣೆ ಮಾಡಿದವರಿಗೂ ಸಹ ವೇತನ ಆಗುತ್ತಿಲ್ಲ ಎಂದು ಆರೋಪಿಸುವ ಜೊತೆಗೆ ಈ ಎಲ್ಲ ನಮ್ಮ ಬೇಡಿಕೆಗಳು ಈಡೇರಿಸುವರಿಗೂ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಮೀನಾಕ್ಷಿ ಗಂಜೀಹಾಳ ಮಾತನಾಡಿ ಮೂರು ಬಾರಿ ಎನ್ಎಂಆರ್ ಜೀರೋ ಮಾಡಿದಾಗ ನಷ್ಟ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದೇವು. ಎನ್ಎಂಎಂಎಸ್ ಜೀರೋ ಇದ್ದಾಗಲೂ ಪೇಮೆಂಟ್ ಮಾಡಿದರೆ ಅದು ಹೇಗಾಯಿತು. ಉಳಿದವುಗಳು ಯಾಕೆ ಆಗುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅದಕ್ಕೆ ಅಧಿಕಾರಿಗಳ ಬಳಿ ಉತ್ತರವಿಲ್ಲದೆ ಸುಮ್ಮನೆ ನಿಂತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ನಾವು ಮತ್ತೆ ಎನ್ಎಂಎಂಎಸ್ ಮಾಡಲು ಸಿದ್ದರಿಲ್ಲ ಜೀರೋ ಆಗಿರುವ ಎಲ್ಲಾ ಪೇಮೆಂಟನ್ನು ಪಿಡಿಒ ಭರಿಸಬೇಕೆಂದು ಪಟ್ಟು ಹಿಡಿದರು.
ಇವೆಲ್ಲ ಸಮಸ್ಯೆಗಳನ್ನು ೧೫ ದಿನಗಳಲ್ಲಿ ಬಗೆಹರಿಸುವುದಾಗಿ ಎಡಿ ಮಹಾಂತೇಶ ಚಲವಾದಿ ಪ್ರತಿಭಟನಾ ನಿರತರಿಗೆ ಹೇಳಿ ಸಮಾಧಾನ ಪಡಿಸಲು ಮುಂದಾದರೂ ಕೂಡಾ ಪ್ರತಿಭಟನಾ ನಿರತ ಕಾರ್ಮಿಕರು ಒಪ್ಪಿಕೊಳ್ಳದೆ ಪ್ರತಿಭಟನೆಯನ್ನು ಮುಂದುವರಿಸಿದ್ದರು.
ಈ ವೇಳೆ ಕೂಲಿ ಕಾರ್ಮಿಕರ ಮುಖಂಡರಾದ ಮಹಾಂತೇಶ ಹೊಸಮನಿ, ಯಮನೂರ ಮಾದರ, ಕಲ್ಲಪ್ಪ ಆನೇಹೊಸೂರ, ಶರಣಪ್ಪ ಚಿಕ್ಕೋಡಿ, ಬಸವರಾಜ ಮುಳ್ಳೂರ, ಪಕೀರಪ್ಪ ಅಡಿಹಾಳ, ಶರಣಯ್ಯ ಕಂತಿಮಠ, ಭೀಮಪ್ಪ ಪೂಜಾರಿ, ಮೌಲಪ್ಪ ಮಾದರ, ವೀರಭದ್ರಪ್ಪ ಲೋಕಾಪೂರ, ಶರಣಪ್ಪ ಬೇನಾಳ ಸೇರಿದಂತೆ ನೂರಾರು ಕೂಲಿ ಕಾರ್ಮಿಕರು ಇದ್ದರು.
ಜಿರೋ ಪೇಮೆಂಟ್ ಪರಿಹರಿಸಲು ೧೫ ದಿನ ಕಾಲಾವಕಾಶ
ತಾಂತ್ರಿಕ ದೋಷ ಮತ್ತು ಎನ್ಎಂಎಂಎಸ್ ಮ್ಯಾಚಿಂಗ್ ಸಮಸ್ಯೆಯಿಂದ ಪೇಮೆಂಟ್ ಆಗದೆ ತೊಂದರೆಯಾಗಿದ್ದು. ಅದನ್ನು ೧೫ ದಿನಗಳ ಒಳಗಾಗಿ ಪರಿಹರಿಸುವ ಕೆಲಸವನ್ನು ಮಾಡಲಾಗುವುದು. ಇನ್ನು ಜಾಬ್ ಕಾರ್ಡ್ ಸಮಸ್ಯೆಯನ್ನು ಕೂಡಾ ಶೀಘ್ರಗತಿಯಲ್ಲಿ ಪರಿಹರಿಸುವಂತೆ ಪಿಡಿಓ ಮತ್ತು ಡಿಓಗೆ ಸೂಚಿಸಲಾಗುವುದು.
-ಮಹಾಂತೇಶ ಚಲವಾದಿ,ಸಹಾಯಕ ನಿರ್ದೇಶಕ ತಾ.ಪಂ. ಹುನಗುಂದ.
ಪ್ರತಿಭಟನಾ ಸ್ಥಳದಲ್ಲಿ ಬಿತ್ತಿ ಬಿಚ್ಚಿ ಊಟ ಮಾಡಿದ ಕಾರ್ಮಿಕರು
ಕಳೆದ ಆರು ತಿಂಗಳ ಹಿಂದೆ ಮಾಡಿರುವ ಕೆಲಸಕ್ಕೆ ಕೂಲಿಯಿಲ್ಲದೆ ಕಂಗಾಲಾಗಿದ್ದ ಕೂಲಿ ಕಾರ್ಮಿಕರು. ತಮ್ಮ ಸಮಸ್ಯೆಯನ್ನು ಪರಿಹರಿಸುವವರೆಗೂ ಮನೆ ಮರಳಿ ಹೋಗಬಾರದೆಂದು ಬರುವಾಗ ತಂದಿದ್ದ ಬುತ್ತಿಯನ್ನು ಪ್ರತಿಭಟನಾ ಸ್ಥಳದಲ್ಲಿ ಬಿಚ್ಚಿ ಸಾಮೂಹಿಕವಾಗಿ ಊಟ ಮಾಡಿದ ದೃಶ್ಯ ಕಂಡು ಬಂದಿತು.

