Homeಸುದ್ದಿಗಳುನೇತಾಜಿ ಸುಭಾಸ ಚಂದ್ರ ಬೋಸ್ ಅವರು ಯುವಕರಿಗೆ ಸ್ಪೂರ್ತಿ: ಬೆಳಗಾವಿ ಕಸಾಪ ಜಿಲ್ಲಾಧ್ಯಕ್ಷೆ ಶ್ರೀಮತಿ ಮಂಗಲಾ...

ನೇತಾಜಿ ಸುಭಾಸ ಚಂದ್ರ ಬೋಸ್ ಅವರು ಯುವಕರಿಗೆ ಸ್ಪೂರ್ತಿ: ಬೆಳಗಾವಿ ಕಸಾಪ ಜಿಲ್ಲಾಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ

ಬೆಳಗಾವಿ : ನೇತಾಜಿ ಸುಭಾಸ ಚಂದ್ರ ಬೋಸರು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ನನಗೆ ರಕ್ತಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಹೇಳಿದ್ದರು. ದೇಶದ ಪ್ರತಿ ಹಳ್ಳಿಗಳಲ್ಲಿ ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದವರು ಬಹಳಷ್ಟು ಹುತಾತ್ಮರಿದ್ದು ಅಂಥವರ ಚರಿತ್ರೆಯ ಬಗ್ಗೆ ಸಂಶೋಧನೆಯಾಗಬೇಕು. ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿಯವರ ಕಾರ್ಯ ಬಲಿದಾನದ ಸಂಗತಿ ಅವಿಸ್ಮರಣೀಯವಾಗಿದ್ದು ನೇತಾಜಿ ಸುಭಾಸಚಂದ್ರ ಬೋಸ್ ಅವರ ಕುರಿತು ಚರಿತ್ರೆ ಶಾಲೆಗಳ ಪಠ್ಯದಲ್ಲಿ ಅಳವಡಿಕೆ ಮಾಡಬೇಕು ಎಂದು ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ ಆಗ್ರಹಿಸಿದರು.

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತಾಜಿ ಸುಭಾಸಚಂದ್ರ ಬೋಸ್ ಅವರ ೧೨೫ನೇ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಿದ ಜಾಲಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಹಾಗೂ ಹಿರಿಯ ಸಾಹಿತಿ ಪಾಂಡುರಂಗ ಯಲಿಗಾರ ವಿಶೇಷ ಉಪನ್ಯಾಸ ನೀಡುತ್ತಾ, ಭಾರತ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ನೇತಾಜಿ ಸುಭಾಸಚಂದ್ರ ಬೋಸ್ ಒಬ್ಬರು. ಅವರ ಹೋರಾಟ ಮತ್ತು ಸಂಘಟನೆಯ ಚತುರತೆ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ಹೇಳಿದರು.

ಬೋಸ್ ಅವರು ಆಜಾದ ಹಿಂದ್ ಫೌಜ್ ಎಂಬ ಸೈನ್ಯದ ಮೂಲಕ ಭಾರತ ಸ್ವಾತಂತ್ರ್ಯದ ಮೊಟ್ಟ ಮೊದಲ ರಾಷ್ಟ್ರಧ್ವಜವನ್ನು ರಂಗೂನ್ ನಲ್ಲಿ ಹಾರಿಸಿ ಸ್ವತಂತ್ರ ಸರಕಾರವನ್ನು ಸ್ಥಾಪನೆ ಮಾಡಿದ್ದರು. ಸುಭಾಸಚಂದ್ರ ಬೋಸ್ ಅವರಿಗೆ ಕರ್ನಾಟಕದ ಜೊತೆಗೆ ನಿಕಟ ಸಂಪರ್ಕವಿದ್ದು ಹಾವೇರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಹೊಸಮನಿ ಸಿದ್ದಪ್ಪ ಅವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿದ್ದರು ಎಂದು ಹೇಳಿದರು.

ಸ್ವಾಮಿ ವಿವೇಕಾನಂದರ ಪರಮ ಶಿಷ್ಯರಾಗಿದ್ದ ಬೋಸ್ ದೇಶಪ್ರೇಮ, ರಾಷ್ಟ್ರೀಯ ಐಕ್ಯತೆ ಕುರಿತು ಹಾಗೂ ಭಾರತ ದೇಶದ ಸ್ವಾಭಿಮಾನದ ರಕ್ಷಣೆಗಾಗಿ ಯುವಕರಿಗೆ ಕರೆ ನೀಡಿದ್ದ ಅವರು ವಿಶ್ವದ ಎಲ್ಲ ಸಮುದಾಯದ ಸ್ಪೂರ್ತಿಯ ಸಂಕೇತವಾಗಿದ್ದಾರೆ. ಇಂತಹ ಮಹಾನ್ ದೇಶಭಕ್ತನ ತತ್ವ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿಯಾಗಿದ್ದು ಯುವ ಜನಾಂಗ ತಮ್ಮ ಜೀವನದಲ್ಲಿ ನೇತಾಜಿಯವರ ಆದರ್ಶಗಳನ್ನು ಅಳವಡಿಸಿಕೊಂಡು ದೇಶದ ಅಭಿವೃದ್ದಿಗಾಗಿ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.

ಜಾಲಗೋಷ್ಠಿಯಲ್ಲಿ ಹಿರಿಯ ಲಾವಣಿಕಾರ ಬಿ.ಆರ್.ಪೋಲಿಸ್ ಪಾಟೀಲ, ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಅಕ್ಕಿ, ವಿಜಯ ಬಡಿಗೇರ, ಜ್ಯೋತಿ ಬದಾಮಿ, ಜಯಾ ಚುರುಮರಿ, ಶ್ರೀಪಾದ ಕುಂಬಾರ, ಡಾ.ಶ್ರೀಶೈಲ ದಳವಾಯಿ, ಪ್ರಕಾಶ ಅವಲಕ್ಕಿ ಇತರರು ಭಾಗವಹಿಸಿದ್ದರು.

ಪ್ರತಿಭಾ ಕಳ್ಳಿಮಠ ನಾಡಗೀತೆ ಹಾಡಿದರು. ಎಂ.ವಾಯ್.ಮೆಣಸಿನಕಾಯಿ ಸ್ವಾಗತಿಸಿದರು. ಪಾಂಡುರಂಗ ಜಟಗನ್ನವರ ಜಾಲಗೋಷ್ಠಿಯನ್ನು ಸಂಯೋಜನೆಗೊಳಿಸಿದ್ದರು.

RELATED ARTICLES

Most Popular

error: Content is protected !!
Join WhatsApp Group