ಸಿಂದಗಿ: ಎಲ್ಲ ರಂಗದಲ್ಲಿ ಹೆಣ್ಣು ಮಕ್ಕಳು ಮುಂದುವರೆಯುತ್ತಿದ್ದಾರೆ ಅವರನ್ನು ಗೌರವಿಸುವುದು ಮಠ-ಮಾನ್ಯಗಳ ಕರ್ತವ್ಯವಾಗಿದೆ. ಉತ್ತರ ಕರ್ನಾಟಕದ ನಮ್ಮ ಜಿಲ್ಲೆಯ ಹೆಣ್ಣು ಮಗಳಿಗೆ ಕುಲಪತಿ ಆಗುವ ಅವಕಾಶ ದೊರತದ್ದು ಸಂತಸ ತಂದಿದೆ ಎಂದು ಯಂಕಂಚಿ ಕುಂಟೋಜಿ ಹಿರೇಮಠದ ಪೀಠಾಧಿಪತಿ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಯಂಕಂಚಿ ಕುಂಟೋಜಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಇತ್ತೀಚೆಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಗೆ ೬ನೆಯ ನೂತನ ಕುಲಪತಿಯಾಗಿ ನೇಮಕಗೊಂಡ ಪ್ರೊ.ವಿಜಯಾ ಕೋರಿಶೆಟ್ಟಿ ಅವರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಸನ್ಮಾನವನ್ನು ಸ್ವೀಕರಿಸಿದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಹರ ಗುರು ಚರಮೂರ್ತಿಗಳ ಆಶೀವಾದದಿಂದ ವಿಶ್ವವಿದ್ಯಾಲಯವು ಸಮಗ್ರ ಅಭಿವೃದ್ಧಿ ಹೊಂದಲಿ ಎನ್ನುವುದೇ ನನ್ನ ಮಹದಾಸೆಯಾಗಿದೆ. ಸದಾ ಕಾಲ ತಮ್ಮ ಆಶೀರ್ವಾದ, ಮಾರ್ಗದರ್ಶನ ನಮ್ಮ ಮೇಲಿರಲಿ ಎಂದರು.
ಈ ಸಂದರ್ಭದಲ್ಲಿ ತನಸಹಳ್ಳಿ ಶ್ರೀಮಠದ ಚರಂತೇಶ್ವರ ಶಿವಾಚಾರ್ಯರು, ಮಹಿಳಾ ವಿವಿಯ ಡಾ.ರಾಜಕುಮಾರ ಮಾಲಿಪಾಟೀಲ, ವಿಜಯಕುಮಾರ ಸೇರಿದಂತೆ ಇತರರು ಇದ್ದರು.