ಭ್ರಷ್ಟರ ರಕ್ಷಣೆಗೆ ನಿಂತಿರುವರೆ ಮೇಲಾಧಿಕಾರಿಗಳು?
ಮೂಡಲಗಿ – ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹುಣಶ್ಯಾಳ
(ಪಿ.ಜಿ.) ಗ್ರಾಮ ಪಂಚಾಯತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕೆಲ ಸದಸ್ಯರುಗಳು ಸೇರಿಕೊಂಡು 2018ನೇ ಸಾಲಿನ ಸ್ವಚ್ಛ ಭಾರತ ಯೋಜನೆಯಲ್ಲಿ ಶೌಚಾಲಯಗಳನ್ನ ನಿರ್ಮಿಸಲು ಸರಕಾರದ ಪ್ರೋತ್ಸಾಹ ಧನವನ್ನು ಪಡೆದುಕೊಂಡು ಶೌಚಾಲಯಗಳನ್ನು ಕೇವಲ ದಾಖಲೆಗಳಲ್ಲಿ ಮಾತ್ರ ತೋರಿಸಿ ಸುಮಾರು 400ಕ್ಕಿಂತಲೂ ಹೆಚ್ಚು ಶೌಚಾಲಯಗಳನ್ನು ತಿಂದು ಹಾಕಿರುವ ಘಟನೆಯೂ ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ.
ಇಷ್ಟೊಂದು ಬೃಹತ್ ಪ್ರಮಾಣದ ಭ್ರಷ್ಟಾಚಾರದ ಬಗ್ಗೆ ದಾಖಲೆಗಳೊಂದಿಗೆ ದೂರು ನೀಡಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕಾಗಿ ಪತ್ರ ಬರೆದಿದ್ದರೂ ಕೂಡಾ ರಾಜಕೀಯ ಒತ್ತಡಕ್ಕೆ ಸಿಲುಕಿದ ಅಧಿಕಾರಿಗಳು ತನಿಖೆಗೆ ವಿಳಂಬ ಮಾಡುತ್ತಿದ್ದು, ಭ್ರಷ್ಟರ ರಕ್ಷಣೆಗೆ ನಿಂತಿರುವ ಅಧಿಕಾರಿಗಳ ಮೇಲೆ ಕೂಡಾ ಕ್ರಮಕ್ಕಾಗಿ ಪ್ರಧಾನ ಮಂತ್ರಿಯವರಿಗೂ ಮತ್ತು ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ.
ಈ ವಿಷಯವನ್ನು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಪ್ರಕಟಣೆಯೊಂದರಲ್ಲಿ ತಿಳಿಸಿದ್ದು ಶೌಚಾಲಯ ಗುಳುಂ ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ನಿರ್ಮಲ ಭಾರತ ಯೋಜನೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವ ಸಲುವಾಗಿ ಪ್ರತಿಯೊಂದು ಕುಟುಂಬಕ್ಕೂ ಶೌಚಾಲಯಗಳನ್ನು ನಿರ್ಮಿಸಿಕೊಂಡ ನಂತರ ಪ್ರತಿ ಶೌಚಾಲಯಕ್ಕೆ 12000ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ.
ಈ ಬೃಹತ್ ಪ್ರಮಾಣದ ಹಗರಣದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೆಲ ಸದಸ್ಯರುಗಳು ಸೇರಿಕೊಂಡು ತಾವೇ ಶೌಚಾಲಯಗಳನ್ನು ನಿರ್ಮಿಸಿಕೊಡುವುದಾಗಿ ಫಲನಾಭವಿಗಳನ್ನು ನಂಬಿಸಿ ಅವರ ಖಾತೆಗೆ ಸರಕಾರದ ಪ್ರೋತ್ಸಾಹ ಧನವನ್ನು ಜಮೆ ಮಾಡಿಸಿ ಬಳಿಕ ಅವರಿಂದ ಸಹಿ ಪಡೆದುಕೊಂಡು ಪ್ರೋತ್ಸಾಹ ಧನವನ್ನು ಕಬಳಿಸಿದ್ದಾರೆ, ಅಲ್ಲದೇ ಇದುವರೆಗೂ ಯಾರೊಬ್ಬರಿಗೂ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿರುವುದಿಲ್ಲ ಇದರಿಂದಾಗಿ ಸರಕಾರ ಮಹತ್ವಾಕಾಂಕ್ಷೆಯ ನಿರ್ಮಲ ಭಾರತ ಯೋಜನೆಯ ಹಣವು ಖದೀಮರ ಪಾಲಾಗಿರುತ್ತದೆ ಎಂದು ಅವರು ದೂರು ಕೊಟ್ಟಿದ್ದಾರೆ.
ವಿಚಿತ್ರವೆಂದರೆ 26 ಕುಟುಂಬಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಸ್ಥಳದ ಲಭ್ಯತೆ ಇರದೇ ಇರುವುದರಿಂದ ಗ್ರಾಮದ ಕರೆಮ್ಮ ದೇವರ ಗುಡಿಯ ಹತ್ತಿರ 26 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಆದರೆ ಇವುಗಳಿಗೆ ಬಾಗಿಲು ಕಿಟಿಕಿಗಳು ಇರುವುದಿಲ್ಲ. ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ ಗಮನಿಸಬೇಕಾದ ಅಂಶವೆಂದರೆ ಇವುಗಳ
ಸುತ್ತಮುತ್ತಲು ಗಿಡ-ಗಂಟಿಗಳು ಬೆಳೆದಿದ್ದು ಇದುವರೆಗೂ ಒಬ್ಬರು ಕೂಡಾ ಇಲ್ಲಿ ಶೌಚ ಮಾಡಿರುವುದಿಲ್ಲ ಎಂದು ಸದರ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಭ್ರಷ್ಟ ಅಧಿಕಾರಿಗಳು ಶೌಚಾಲಯಗಳನ್ನೇ ತಿಂದು ಹಾಕಿರುವ ಈ ಹಗರಣದ ಬಗ್ಗೆ ದಾಖಲೆಗಳ ಸಮೇತವಾಗಿ ದಿನಾಂಕ: 21-10-2021 ರಂದು ದೂರು ನೀಡಿದ್ದರೂ ಯಾವುದೇ ಪರಿಹಾರ ದೊರಕದೇ ಇದ್ದಾಗ ಪುನಃ ದಿನಾಂಕ: 06-12-2021 ರಂದು ಪತ್ರ ಬರೆದು ಗಮನಸೆಳೆಯಲಾಗಿದೆ. ಕುರಿತು ಸರಕಾರಕ್ಕೆ ಕೂಡಲೇ ವರದಿ ನೀಡುವಂತೆ ಆಯುಕ್ತರು, ನೈರ್ಮಲ್ಯ ಇಲಾಖೆ, ಬೆಂಗಳೂರು ಇವರಿಂದ ದಿನಾಂಕ: 24-11-2021 ರಂದು ಪತ್ರ ಬರೆದಿದ್ದರು ರಾಜಕೀಯ ಒತ್ತಡದಿಂದ ಅಧಿಕಾರಿಗಳು ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಹ ಈ ದೂರಿನಲ್ಲಿ ತಿಳಿಸಲಾಗಿದೆ.
ಗಡಾದ ಅವರು ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೂ ಪತ್ರ ಬರೆದಿದ್ದಾರೆ. ಫಲಾನುಭವಿಗಳ ಹೆಸರಿನೊಂದಿಗೆ ದಾಖಲೆ ಸಮೇತ ದೂರನ್ನು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಕೊಳ್ಳದೇ ಇರುವುದನ್ನು ನೋಡಿದರೆ, “ಶೌಚಾಲಯಗಳನ್ನು ತಿಂದು ಹಾಕಿರುವ ಭ್ರಷ್ಟ ಅಧಿಕಾರಿಗಳನ್ನು ಸರಕಾರ ರಕ್ಷಿಸಲು ನಿಂತಂತೆ ಕಾಣುತ್ತಿದೆ ಕಾರಣ ಈ ಕುರಿತು ತ್ವರಿತವಾಗಿ ಕ್ರಮ ಕೈಕೊಂಡು ತಪ್ಪಿತಸ್ಥರಿಗೆ ಕಾನೂನಿನ ರೀತಿ ಶಿಕ್ಷೆ ವಿಧಿಸುವುದರ ಮೂಲಕ ಕಾನೂನಿನ ಘನತೆ-ಗೌರವ ಹೆಚ್ಚಿಸುವಂತೆ ಗೌರವಾನ್ವಿತ ಪ್ರಧಾನ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳಲ್ಲಿ ವಿನಂತಿಸಲಾಗಿದೆ.” ಎಂದು ಗಡಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಡಲಗಿ ತಾಲೂಕಿನಲ್ಲಿ ಇತ್ತೀಚೆಗೆ ಭ್ರಷ್ಟಾಚಾರದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಇತ್ತೀಚೆಗೆ ಬಡವರಿಗೆ ಮನೆ ನೀಡುವ ಪ್ರಕರಣದಲ್ಲಿ ಪಿಡಿಓ ಒಬ್ಬ ಬಹಿರಂಗವಾಗಿಯೆ ಫಲಾನುಭವಿಯಿಂದ ಲಂಚ ಕೇಳುತ್ತಿರುವ ವೀಡಿಯೊ ವೈರಲ್ ಆಗಿತ್ತು. ಈಗ ಶೌಚಾಲಯ ಪ್ರಕರಣ ಹೊರಬಂದಿದೆ.
ನಿಜವಾಗಿಯೂ ಶೋಚನೀಯ ವಿಷಯ ಏನೆಂದರೆ, ಮೂಡಲಗಿಯೂ ತಾಲೂಕಾಗಿದೆ ಎಂಬ ಟೋಪಿಯನ್ನಷ್ಟೇ ಧರಿಸಿದೆ ; ಕಿರೀಟವನ್ನಲ್ಲ. ಈಗಲೇ ಇಷ್ಟೊಂದು ಭ್ರಷ್ಟಾಚಾರದ ಪ್ರಕರಣಗಳು ಹೊರಬರುತ್ತಿರುವುದು ತಾಲೂಕಾಡಳಿತದ ದಕ್ಷತೆಗೊಂದು ಸವಾಲು. ಇಲ್ಲಿನ ಜನಪ್ರತಿನಿಧಿಗಳು, ಆಡಳಿತಾಧಿಕಾರಿಗಳು ಬಡವರ ಹೊಟ್ಟೆಯ ಮೇಲೆ ಹೊಡೆಯುವ ಹಾಗೂ ಜನರ ತೆರಿಗೆ ಹಣ ಪೋಲು ಮಾಡುವ ಅಧಿಕಾರಿಗಳ ಮೇಲೆ ಉಗ್ರ ಕ್ರಮ ಕೈಗೊಂಡು ತಮ್ಮ ಸಾಚಾತನ ಪ್ರಕಟಪಡಿಸಬೇಕಾಗಿದೆ.