ಬೆಂಗಳೂರು: ಸಮಾಜಮುಖಿ ಚಿಂತನೆ, ನಿಸ್ವಾರ್ಥ ಸೇವೆ ಮತ್ತು ಮೌಲ್ಯಾಧಾರಿತ ಬದುಕಿನ ಮೂಲಕ ನಾಡಿನ ಗೌರವಕ್ಕೆ ಪಾತ್ರರಾಗಿರುವ ಡಾ. ಕೆ.ಜಿ. ಲಕ್ಷ್ಮೀನಾರಾಯಣಪ್ಪ ಅವರ ಅಭಿನಂದನಾರ್ಥವಾಗಿ ರೂಪುಗೊಂಡಿರುವ ‘ನಿಸ್ವಾರ್ಥ ಸಿರಿ’ ಅಭಿನಂದನಾ ಗ್ರಂಥದ ಲೋಕಾರ್ಪಣೆ ಸಮಾರಂಭವು ಮಂಗಳವಾರ, ಜನವರಿ 13, 2026ರಂದು ಸಂಜೆ 5.00 ಗಂಟೆಗೆ, ಬೆಂಗಳೂರಿನ ಕುಮಾರಕೃಪಾ ರಸ್ತೆ, ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ, ನಾಡೋಜ ಡಾ. ಶಿವರಾಜ ವಿ. ಪಾಟೀಲ ಅವರು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಮಾಜಿ ಸಂಸದ ಹಾಗೂ ನೇಕಾರ ಸಮುದಾಯ ಒಕ್ಕೂಟದ ಗೌರವಾಧ್ಯಕ್ಷ ಕೆ.ಎಸ್. ಕೊಂಡಯ್ಯ ಉದ್ಘಾಟಿಸುವರು.
ಹಿರಿಯ ಸಾಹಿತಿ ಮತ್ತು ಸಂಶೋಧಕ ಪ್ರೊ. ಹಂಪನಾ ಅವರು ಅಭಿನಂದನಾ ಗ್ರಂಥ ‘ನಿಸ್ವಾರ್ಥ ಸಿರಿ’ಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಾಡೋಜ ಡಾ. ವೂಡೇ ಪಿ. ಕೃಷ್ಣ (ಅಧ್ಯಕ್ಷ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ),
ರಾಮಲಿಂಗಾರೆಡ್ಡಿ (ಸಾರಿಗೆ ಮತ್ತು ಮುಜರಾಯಿ ಸಚಿವ),
ಹೆಚ್.ಎಂ. ರೇವಣ್ಣ (ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ),
ಕೆ.ಎಂ. ನಾಗರಾಜ್ (ಹಿರಿಯ ಮುತ್ಸದ್ದಿ) ಭಾಗವಹಿಸಲಿದ್ದಾರೆ.
ನಾಡೋಜ ಡಾ. ವೂಡೇ ಪಿ. ಕೃಷ್ಣ ಪ್ರಧಾನ ಸಂಪಾದಕರಾಗಿಯೂ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿ ಸಿದ್ಧಪಡಿಸಿರುವ ಈ ಗ್ರಂಥವನ್ನು ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ಬೆಂಗಳೂರು ಪ್ರಕಟಿಸಿದೆ.
ವಜ್ರಪೂರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಡಾ. ಕೆ.ಜಿ. ಲಕ್ಷ್ಮೀನಾರಾಯಣಪ್ಪ ಅವರ ವ್ಯಕ್ತಿತ್ವ, ಸೇವಾ ಬದುಕು, ಸಂಘಟನೆ, ಸಾಮಾಜಿಕ ಬದ್ಧತೆ ಮತ್ತು ಮಾನವೀಯ ಮೌಲ್ಯಗಳನ್ನು ಈ ಗ್ರಂಥವು ಸಮಗ್ರವಾಗಿ ದಾಖಲಿಸುತ್ತದೆ.
ಸಾಧನೆಗಿಂತ ಮೌಲ್ಯಗಳಿಗೆ ಆದ್ಯತೆ ನೀಡಿದ ಅವರ ಬದುಕು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲೆಂಬ ಉದ್ದೇಶದಿಂದ ‘ನಿಸ್ವಾರ್ಥ ಸಿರಿ’ ರೂಪುಗೊಂಡಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸಮಾರಂಭದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು, ಶಿಕ್ಷಣತಜ್ಞರು, ಸಮಾಜಸೇವಕರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ.

