ಬದುಕು ಪ್ರತಿ ದಿನವೂ ಹೊಸತೇನನ್ನೋ ಸೇರಿಸುತ್ತದೆ. ಮೇಲ್ನೋಟಕ್ಕೆ ಇದು ಬದುಕಿನ ರೀತಿಯೆಂಬಂತೆ ತೋರಿದರೂ ಸೂಕ್ಷ್ಮವಾಗಿ ಅವಲೋಕಿಸಿದರೆ ಸಂಕೀರ್ಣವಾದ ವ್ಯಾಖ್ಯಾನಗಳನ್ನು ನೀಡುತ್ತದೆ. ಜೀವನವೆಂಬುದು ಸಿದ್ಧ ಮಾದರಿಗಳ ಎರಕದಲ್ಲಿಟ್ಟು ಸಾಗಿಸಿ ಹೊರ ನಡೆಯುವಂಥದ್ದಲ್ಲ. ಅದು ಅನೇಕ ಕಾರಣಗಳಿಂದಾಗಿ ಅಚ್ಚರಿಯನ್ನು ಮೂಡಿಸುತ್ತವೆ. ಯಾವ ಬಿರುಕು ಅಡೆತಡೆಗಳಿಲ್ಲದೇ ಉತ್ತುಂಗಕ್ಕೇರಬೇಕೆನ್ನುವ ನಿರೀಕ್ಷೆ ಎಲ್ಲರಲ್ಲೂ ಇರುತ್ತದೆ. ಆದರೆ ಬದುಕು ಹಾಗಲ್ಲ. ಹಲವು ಬಾರಿ ಕರ್ಕಶ ಸದ್ದು ಮಾಡುತ್ತದೆ. ಎದೆಯ ಮೇಲೆ ಹರಿದು ಹೋದಂತೆನಿಸುತ್ತದೆ. ಅದು ಯಾವಾಗ ಹೇಗೆ ಎಲ್ಲಿ ಕೈ ಹಿಡಿಯುವುದೋ, ಮೇಲಿನಿಂದ ಕೆಳಕ್ಕೆ ಬೀಳಿಸುವುದೋ ಗೊತ್ತಿಲ್ಲ. ಎಷ್ಟೋ ಸಲ ಬದುಕಿನ ಬಾಗಿಲಿನ ಹಗ್ಗ ಸಡಿಲಿಸಿ ಹೊರಕ್ಕೆ ಹೋಗಬಿಡಬೇಕೆನ್ನಿಸುವುದುಂಟು. ಜೀವನ ಅನಿರೀಕ್ಷಿತವಾದುದು. ವಿಸ್ಮಯವೆಂಬಂತೆ ಒಮ್ಮೊಮ್ಮೆ ಜೀವನದ ರಸ್ತೆಗಳ ತಿರುವುಗಳಲ್ಲಿ ಬ್ರೇಕ್ ಒತ್ತಿ ಹೊರಳಿ ನಂತರ ವೇಗ ಹೆಚ್ಚಿಸಿಕೊಳ್ಳುವುದುಂಟು. ಇದೆಲ್ಲ ನಿರೀಕ್ಷೆಯ ಫಲವಲ್ಲದೆ ಮತ್ತೇನೂ ಅಲ್ಲ. ನಿರೀಕ್ಷೆಗಳ ಹುಟ್ಟಿಗೆ ಸದಾ ಹೊಸತಾಗುವ ಹಂಬಲವೇ ಕಾರಣವಾಗಿದೆ. ನಿರೀಕ್ಷೆಗಳು ಸುಂದರ ಬದುಕನ್ನಷ್ಟೇ ಸೃಷ್ಟಿಸುವುದಿಲ್ಲ. ನಮ್ಮನ್ನೂ ಸೃಷ್ಟಿಸುತ್ತವೆ. ಇವು ಕುತೂಹಲವನ್ನು ಹೆಚ್ಚಿಸುವುದರ ಜತೆಗೆ ವಿಚಾರಧಾರೆಯಲ್ಲಿ ಹೊಸ ಹುಟ್ಟು ಪಡೆಯುವಂತೆ ಮಾಡುತ್ತವೆ. ಲೆಕ್ಕವಿಲ್ಲದಷ್ಟು ಸಂಕಷ್ಟಗಳ ನಡುವೆಯೂ ಬೆಳವಣಿಗೆ ವೇಗವಾಗಿಯೇ ಮುಂದುವರೆಯುವುದು ಎಂದು ನಿರೀಕ್ಷಿಸಲಾಗುವುದು. ಗೊತ್ತಿಲ್ಲ ಯಾವುದೋ ಹೊಳವು ಯಾವುದೋ ಸವಾಲು ತಟ್ಟನೇ ಮಿಂಚಿನಂತೆ ಮಿನುಗಿಸಿಬಿಡಬಹುದು.
ಬಿತ್ತುವ ಬೀಜ ಒಂದೇ ಆದರೂ ಮಣ್ಣಿನ ಗುಣಕ್ಕೆ ತಕ್ಕಂತೆ ಫಲ ದೊರೆಯುವುದು. ಈ ‘ಬೀಜ-ಫಲ ನ್ಯಾಯ’ ನಿರೀಕ್ಷೆಗೂ ಹೊಂದುವಂಥದ್ದು. ಹಾಂ, ತುಸು ಎಚ್ಚರ ತಪ್ಪಿದರೆ, ಸಾಕು ಪಾತಾಳಕ್ಕೆ ಬೀಳಬಹುದು. ಇಂದಿನ ಇಂಟರ್‍ನೆಟ್ ಯುಗದಲ್ಲಿ ಏನೆಲ್ಲ ಪಡೆಯುವ ಸಾಧ್ಯತೆಗಳಿವೆ. ಈ ಸಾಧ್ಯತೆಗಳು ನಿರೀಕ್ಷೆಗೆ ವರದಾನ. ನಿರೀಕ್ಷೆಗಳಿಂದ ಬದುಕು ಎಷ್ಟೆಲ್ಲಾ ಬದಲಾಗುತ್ತದೆ. ನಮ್ಮನ್ನು ನಂಬಿದವರು ನಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿರುತ್ತಾರೆ. ನಿರೀಕ್ಷೆಗಳಿಗೆ ತಕ್ಕಂತೆ ನಾವು ನಡೆದುಕೊಳ್ಳುತ್ತೇವೆ ಎನ್ನುವುದು ಅವರ ಅಭಿಪ್ರಾಯವಾಗಿರುತ್ತದೆ. ಅದರಲ್ಲೂ ಹೆತ್ತವರಿಂದ ಮಕ್ಕಳ ಭವ್ಯ ಭವಿಷ್ಯದ ನಿರೀಕ್ಷೆ ಬಹಳಷ್ಟಿರುವುದರಿಂದ ವಿವೇಕಯುತವಾಗಿ ನಡೆದುಕೊಳ್ಳಬೇಕು. ಹಲವಾರು ಸಲ ನಿರೀಕ್ಷೆಗಳಿಂದ ಬದುಕು ಕಠಿಣ ಪರೀಕ್ಷೆ ಎನಿಸತೊಡಗುತ್ತದೆ. ಈ ಹಿನ್ನೆಲೆಯಲ್ಲಿ ಒತ್ತಡ, ಏರಿಕೆ, ಆತ್ಮವಿಶ್ವಾಸದ ಕುಸಿತ ಸಂಭವಿಸುವುದು ಸಾಮಾನ್ಯ. ಒತ್ತಡಗಳನ್ನು ಚೆನ್ನಾಗಿ ಅರಿತಿರುವವರು ಮಾತ್ರ ಹೆತ್ತವರ ಬದುಕಿನ ಬವಣೆಗಳ ಭಾರವನ್ನು ಸ್ವಲ್ಪ ಮಟ್ಟಿಗೆ ಇಳಿಸುವ ನಿರೀಕ್ಷೆಯನ್ನು ಹುಟ್ಟಿಸುತ್ತಾರೆ. ಆರ್ಥಿಕ ಸಂಕಷ್ಟ ಇನ್ನು ಮುಂದೆ ಚಿಂತೆಯ ವಿಷಯವಲ್ಲವೆಂಬ ಭರವಸೆಯನ್ನು ಮೂಡಿಸುತ್ತಾರೆ. ಅಷ್ಟೇ ಅಲ್ಲ ಕಳೆದುಕೊಂಡಿದ್ದನ್ನೆಲ್ಲ ಗಳಿಸಿಕೊಂಡು ಮುನ್ನುಗ್ಗತ್ತೇವೆ ಎಂಬ ಭದ್ರ ಭಾವವೂ ಚಿಗುರುತ್ತದೆ. ನಿರೀಕ್ಷೆಯನ್ನು ಸಾಕಾರಗೊಳಿಸುವುದೆಂದರೆ ಹಿಮಾಲಯ ಪರ್ವತವನ್ನೇರಿದಂತೆ. ಮತ್ತೊಮ್ಮೆ ಹುಟ್ಟಿ ಬಂದಂತೆ ಎನ್ನುವುದು ಕೆಲವರ ಅಂಬೋಣ. ನಿರೀಕ್ಷೆಗಳನ್ನು ಹುಸಿಗೊಳಿಸದೇ ನನಸಾಗಿಸುವುದೆಂದರೆ ಬದ್ಧತೆ ಮತ್ತು ಜವಾಬ್ದಾರಿಯರಿತು ದಿನದ ಹೋರಾಟಕ್ಕೆ ಅಣಿಯಾಗುವುದು. ಅದರಂತೆಯೇ ಕರುಳಕುಡಿಗಳನ್ನು ಸ್ವಾವಲಂಬಿಯನ್ನಾಗಿಸಲು ಸರ್ವ ಪ್ರಯತ್ನ ಮಾಡುವ ಪಾಲಕರ ಹಿತಾಸಕ್ತಿಗಳಿಗೆ ಅಗ್ರ ಪ್ರಾಶಸ್ತ್ಯ ನೀಡುವುದು ಬಹು ಮುಖ್ಯವಾಗುತ್ತದೆ. ಹೆತ್ತವರಿಗೂ ಮಕ್ಕಳ ನಿರೀಕ್ಷೆಗಳ ಎಳೆಗಳನ್ನು ಹಣ್ಣಾಗಿಸುವ ಜವಾಬ್ದಾರಿಯಿದೆ. ಮನಸಾರೆ ಪ್ರಯತ್ನಿಸಿದರೆ ನಿರೀಕ್ಷೆಗಳ ಎಳೆಗಳಿಗೆ ಸರಿಸಾಟಿಯಾದುದು ಮತ್ತೊಂದಿಲ್ಲ ಎನ್ನುವುದನ್ನು ಮರೆಯುವಂತಿಲ್ಲ.
ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ
ಇಂಗ್ಲೀಷ್ ಉಪನ್ಯಾಸಕರು
9449234142