ಮೂಡಲಗಿ: ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸುವುದರಿಂದ ಗ್ರಾಮೀಣ ಭಾಗದ ಜನರ ಜೀವನ ಶೈಲಿ, ಕಷ್ಟ-ಸುಖ, ಬದುಕು-ಬವಣೆ ಅರಿಯಲು ಸಾಧ್ಯವಾಗುತ್ತದೆ. ಅನ್ನ ದೇವರ ಮುಂದೆ ಮತ್ಯಾವ ದೇವರು ಇಲ್ಲ. ಜೀವನದಲ್ಲಿ ಅನ್ನವನ್ನು ಹಾಳು ಮಾಡದಂತೆ ಬದುಕಬೇಕು ಎಂದು ರಾಜಾಪೂರದ ಹಿರಿಯರಾದ ವಿಠ್ಠಲ ಉ. ಪಾಟೀಲ ನುಡಿದರು.
ಅವರು ಕಲ್ಲೋಳಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ರಾಜಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 2024-25 ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಯುವಕರು ಉತ್ತಮ ಸೇವೆಯ ಮೂಲಕ ಸಂಸ್ಕಾರಯುತ ಬದುಕು ನಡೆಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿ ಕಲ್ಲೋಳಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಚಿದಾನಂದ ಮುಗಳಖೋಡ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ಶಿಸ್ತು-ಸಂಯಮ, ಸಂಸ್ಕಾರ, ಸೇವಾ ಮನೋಭಾವವನ್ನು ಮೂಡಿಸುತ್ತದೆ. ಯುವಕರು ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಸಮಾರಂಭದಲ್ಲಿ ರಾಜಾಪೂರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಲ್ಲಪ್ಪ ಪಾಟೀಲ, ಪುಂಡಲಿಕ ಕಮತಿ, ಕಾಲೇಜಿನ ಪ್ರಾಚಾರ್ಯ ಡಾ. ಸುರೇಶ ಹನಗಂಡಿ, ಸರ್ಕಾರಿ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಕಾಶ ಹುನ್ನೂರ, ಅಧ್ಯಾಪಕರು, ಸ್ವಯಂಸೇವಕರು ಉಪಸ್ಥಿತರಿದ್ದರು.
ಪ್ರೊ. ಡಿ.ಎಸ್. ಹುಗ್ಗಿ ನಿರೂಪಿಸಿದರು, ರಾಧಿಕಾ ಕರೆಪ್ಪಗೋಳ ಪ್ರಾರ್ಥಿಸಿದರು. ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ಸ್ವಾಗತಿಸಿದರು. ಡಾ. ಕೆ.ಎಸ್. ಪರವ್ವಗೋಳ ವಂದಿಸಿದರು.