ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಾ. ಎಸ್.ಎಲ್. ಭೈರಪ್ಪ ಅವರಿಗೆ ನುಡಿನಮನ

Must Read

ಬೈಲಹೊಂಗಲ: ಪಟ್ಟಣದ ತಾಲೂಕು ಪಂಚಾಯತಿಯ ಸಭಾಭವನದಲ್ಲಿ ನಮ್ಮನ್ನಗಲಿದ ನಾಡಿನ ಖ್ಯಾತ ಸಾಹಿತಿಗಳಾದ ಪದ್ಮಶ್ರೀ, ಪದ್ಮಭೂಷಣ ಡಾ. ಎಸ್.ಎಲ್.ಭೈರಪ್ಪ ಅವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು.

ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜೀವ ಜುನ್ನೂರ ಮಾತನಾಡಿ ನಾಡಿನ ಶ್ರೇಷ್ಠ ಸಾಹಿತಿಗಳಾದ ಭೈರಪ್ಪ ಅವರನ್ನು ಕಳೆದುಕೊಂಡಿದ್ದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಬದುಕಿನಲ್ಲಿ ಸಾಕಷ್ಟು ನೋವುಗಳನ್ನು ಉಂಡು, ಸಂಕಷ್ಟಗಳನ್ನು ಎದುರಿಸಿ ಬೆಳೆದ ಭೈರಪ್ಪನವರ ಸಾಧನೆ ಹೆಮ್ಮೆಪಡುವಂತದ್ದು ಎಂದು ಅವರು ಅಭಿಪ್ರಾಯಪಟ್ಟರು.

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ, ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯಪುಸ್ತಕದಲ್ಲಿ ಭೈರಪ್ಪನವರ ಮೇರು ವ್ಯಕ್ತಿತ್ವವನ್ನು ಮಕ್ಕಳು ಓದುವಂತಾಗಬೇಕು ಮತ್ತು ಅವರ ಮೌಲಿಕ ಕೃತಿಗಳು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯಗಳಾಗಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕಾ ಘಟಕದ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಎಲ್.ಎಲ್. ಭೈರಪ್ಪನವರು ಸಾಕಷ್ಟು ಅಧ್ಯಯನ ಮಾಡಿ, ಪ್ರವಾಸ ಕೈಗೊಂಡು, ಅನುಭವಗಳನ್ನು ಪಡೆದು ವಾಸ್ತವಿಕ ನೆಲೆಗಟ್ಟಿನ ಮೇಲೆ ಕಾದಂಬರಿಗಳನ್ನು ರಚಿಸಿರುವುದರಿಂದ ಅವರ ಸಾಹಿತ್ಯ ಓದುಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಸಾಧ್ಯವಾಗಿದೆ ಎಂದು ಹೇಳಿದರು.

ಕೆ.ಆರ್.ಸಿ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಜಿ.ಕೆ.ಗಾಂವಕರ ಮಾತನಾಡಿ ಭೈರಪ್ಪನವರು ಸಾಹಿತ್ಯದ ಜೊತೆಗೆ ತತ್ವಶಾಸ್ತ್ರ, ಸಂಗೀತದ ಮೇಲೂ ವಿಶೇಷ ಒಲವು ಹೊಂದಿದವರಾಗಿದ್ದು ಅವರ ಕೃತಿಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿರುವುದು ಕನ್ನಡಿಗರಾದ ನಮಗೆಲ್ಲ ಅಭಿಮಾನದ ಸಂಗತಿ ಎಂದು ಹೇಳಿದರು.

ನುಡಿನಮನದಲ್ಲಿ ಕಸಾಪ ಗೌರವ ಕಾರ್ಯದರ್ಶಿಗಳಾದ ಮಂಜುಳಾ ಶೆಟ್ಟರ, ಗೌರವ ಕೋಶಾಧ್ಯಕ್ಷರಾದ ಮಹೇಶ ಕೋಟಗಿ, ಕಾರ್ಯಕಾರಿ ಸಮಿತಿ ಸದಸ್ಯರಾದ ರಂಗಕರ್ಮಿ ದುಂಡಪ್ಪ ಗರಗದ, ಸೋಮೇಶ್ವರ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಶ್ರೀಶೈಲ ಶರಣಪ್ಪನವರ, ಕನ್ನಡ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷರಾದ ಚಂದ್ರಶೇಖರ ಕೊಪ್ಪದ, ಶಿಕ್ಷಣ ತಜ್ಞರಾದ ಎಸ್.ಎಲ್. ನಾಗನೂರ, ಕವಯಿತ್ರಿ ಸಾವಿತ್ರಿ ಹೊತ್ತಿಗಿಮಠ, ಕವಿ ಪ್ರಕಾಶ ಮರಿತಮ್ಮನವರ, ಉಡಿಕೇರಿ ಗ್ರಾಪಂ ಪಿಡಿಒ ಆಸೀಫ್ ಲತೀಫ್, ಮುರ್ಕಿಬಾವಿ ಗ್ರಾಪಂ ಪಿಡಿಒ ಶಕುಂತಲಾ ಮರಕುಂಬಿ, ತಾಪಂ ಸಿಬ್ಬಂದಿ ರಮೇಶ ಮುನೆನ್ನಿ, ಪವನಕುಮಾರ ತುರಮರಿ, ಎಸ್.ಬಿ.ಯರಗಟ್ಟಿ, ಈಶ್ವರಗೌಡ ಪಾಟೀಲ, ಮಹಾಂತೇಶ ಭಜಂತ್ರಿ ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಶಿಕ್ಷಕರಾದ ರಾಜು ಹಕ್ಕಿ ನಿರೂಪಿಸಿ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group