ಮೂಡಲಗಿ: ಮೂಡಲಗಿಯಲ್ಲಿ ವಿವಿಧ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ವರ್ಗಾವಣೆಯಾಗದೆ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಅಧಿಕಾರಿಗಳು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಆರೋಪಿಸಿದ್ದಾರೆ.
ಬುಧವಾರದಂದು ಪಟ್ಟಣದ ತಾಲೂಕಾ ಪತ್ರಕರ್ತರ ಕಾರ್ಯಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ನಿಯಮದಂತೆ ಓರ್ವ ಅಧಿಕಾರಿ ಅಥವಾ ಯಾವುದೇ ನೌಕರ ಕನಿಷ್ಠ ಎರಡು ವರ್ಷ ಗರಿಷ್ಠ ಮೂರು ವರ್ಷ ಕಾಲ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ. ಆದರೆ ಮೂಡಲಗಿ ತಾಲೂಕಿನ ವಿವಿಧ ಇಲಾಖೆಗಳಲ್ಲಿ ಕೆಲವು ನೌಕರರು ಹಲವಾರು ವರ್ಷಗಳಿಂದ ಕುರ್ಚಿಗೆ ಅಂಟಿಕೊಂಡಂತೆ ಒಂದೇ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಒಂದೇ ಸ್ಥಳದಲ್ಲಿ ಇರುವ ವಿವಿಧ ಇಲಾಖೆಯ ಅಧಿಕಾರಿಗಳು ಸಾಕಷ್ಟು ಬೇನಾಮಿ ಆಸ್ತಿ ಮಾಡಿರುವ ದಾಖಲೆಗಳು ನಮ್ಮ ಹತ್ತಿರ ಇವೆ. ಅವುಗಳು ಶೀಘ್ರವಾಗಿ ಸಂಬಂಧಪಟ್ಟ ಇಲಾಖೆಗಳ ಮೇಲಾಧಿಕಾರಿಗಳಿಗೆ ತಲುಪಿಸಿ, ಎಸಿಬಿ ಅಧಿಕಾರಿಗಳಿಗೆ ಅಧಿಕಾರಿಗಳ ಬೇನಾಮಿ ಆಸ್ತಿಗಳ ದಾಖಲೆ ನೀಡಿ, ದೂರು ದಾಖಲು ಮಾಡಲಾಗುವುದು. ದೂರು ದಾಖಲಾದ ಬಳಿಕ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸದೇ ಇದ್ದ ಪಕ್ಷದಲ್ಲಿ ಬೇನಾಮಿ ಆಸ್ತಿಗಳ ದಾಖಲೆಗಳನ್ನು ಸಾರ್ವಜನಿಕರ ಮುಂದೆ ಬಹಿರಂಗ ಪಡಿಸಲಾಗುವುದು ಎಂದು ಹೇಳಿದರು.
ಗುರುನಾಥ ಗಂಗನ್ನವರ, ಶಿವಾನಂದ ಮಡಿವಾಳ ಮಾತನಾಡಿ, ಅಧಿಕಾರಿಗಳು ತಮ್ಮ ಇಲಾಗೆ ಸಂಬಂಧಿಸಿದ ಕಾರ್ಯಗಳನ್ನು ಮಾಡದೇ ಬೇರೆ ಬೇರೆ ಕಾರ್ಯಗಳನ್ನು ಮಾಡುವುದು ಸರಿ ಅಲ್ಲ. ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳನ್ನು ಸರಿಯಾಗಿ ಸಾರ್ವಜನಿಕರಿಗೆ ಮುಟ್ಟಿಸುವಂಥ ಕಾರ್ಯ ಮಾಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಭಾಷ ಲೋಕನ್ನವರ, ಮಾದೇವ ಬಂಗೆನ್ನವರ, ಪಾರಿಸ್ ಉಪ್ಪಿನ್, ವಿಠ್ಠಲ ನಾಯ್ಕ್ ಇದ್ದರು.