ಪಾತ್ರಗಳ ಪರಕಾಯ ಪ್ರವೇಶ ಬಯಲಾಟ ಕಲಾವಿದ ಅಶೋಕ ಬಿರಾದಾರ ಚಡಚಣ

Must Read

ವಿಜಾಪುರ ಜಿಲ್ಲೆಯ ಗಂಡು ಮೆಟ್ಟಿನ ಕಲೆ ಬಯಲಾಟ ಕಲೆ. ಈ ಕಲೆಯಲ್ಲಿ ಚಡಚಣದ ಅಶೋಕ ಬಿರಾದಾರ ಪರಿಣಿತ ಕಲಾವಿದರು. ಒಂದು ಕಾಲದಲ್ಲಿ ಈ ಕಲೆ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಕಂಡು ಬರುತ್ತಿತ್ತು. ಆದರೆ ಈ ಕಲೆಯು ಇತ್ತೀಚಿಗೆ ಬಹಳಷ್ಟು ಕಡಿಮೆಯಾಗತೊಡಗಿದೆ. ಜನರ ಒಲವು ಸಿನಿಮಾ ರಂಗದ ಕಡೆಗೆ ಹರಿಯುತ್ತಿದೆ. ಮೊಬೈಲ್ ನಲ್ಲಿ ಮುಳುಗಿರುವ ಈಗಿನ ಯುವಕರಿಗೆ ಈ ಕಲೆಯ ಬಗ್ಗೆ ಆಸಕ್ತಿ ಇಲ್ಲ. ಈ ಕಲೆಯನ್ನು ಹಿಂದಿನಿಂದಲೂ ರೈತರು ಹಾಗೂ ಕೃಷಿ ಕೂಲಿಕಾರರು ಅಷ್ಟೇ ಮುಂದುವರಿಸಿಕೊಂಡು ಬಂದಿದ್ದಾರೆ. ಈಗ ಕೆಲವೊಂದು ಗ್ರಾಮಗಳಲ್ಲಿ ಮಾತ್ರ ಕಲೆ ಉಳಿದುಕೊಂಡಿದೆ . ಇಂತಹ ಗ್ರಾಮಗಳಲ್ಲಿ ಚಡಚಣ ಕೂಡ ಒಂದು. ಇಲ್ಲಿ  ಶಿವನಗೌಡರ ನೇತೃತ್ವದಲ್ಲಿ ಶ್ರೀ ಲಕ್ಷ್ಮೀದೇವಿ ದೊಡ್ಡಾಟ ಸಂಘವಿದ್ದು ಇಂದಿಗೂ ಈ ಕಲೆಯನ್ನು ಜೀವಂತವಿರಿಸಿದ್ದಾರೆ. ಈ ತಂಡದ ಕಲಾವಿದರಲ್ಲಿ ಅಶೋಕ ಬಿರಾದಾರ ಕೂಡ ಒಬ್ಬರು.

೧೯೫೮ರ ಜೂನ್  ೧ ರಂದು ಜನಿಸಿದ ಅಶೋಕ ಬಿರಾದಾರ ಇವರ ತಂದೆ ಭೀಮಣ್ಣ ಬಿರಾದಾರ ತಾಯಿ ಶಿವಮ್ಮ.  ಇವರ ಶಿಕ್ಷಣ ಕೇವಲ ನಾಲ್ಕನೇ  ತರಗತಿಗೆ ನಿಂತುಹೋಗುತ್ತದೆ. ಶಾಲೆ ಬಿಟ್ಟ ನಂತರ ತಮ್ಮ ತಂದೆಯ ಜೊತೆಗೆ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಅಶೋಕ ಇವರು ೨೭ನೇ ವಯಸ್ಸಿನವರಿದ್ದಾಗ ಓಣಿಯ ಜನರು ಇವರನ್ನು ಬೈಲಾಟದ ಕಡೆಗೆ ಎಳೆದು ತಂದರು. ಅಂದಿನಿಂದ ಇಂದಿನವರೆಗೂ ಇವರು ಬಯಲಾಟಗಳಲ್ಲಿ ತಮ್ಮ ಅಭಿನಯವನ್ನು ತೋರಿಸುತ್ತಾ ಜನಮನ್ನಣೆಗೆ ಪಾತ್ರರಾಗಿದ್ದಾರೆ.

೧೯೮೨ರಲ್ಲಿ ದಕ್ಷಬ್ರಹ್ಮ ಬಯಲಾಟದಲ್ಲಿ ದೇವೇಂದ್ರನ ಪಾತ್ರ ನಿರ್ವಹಿಸಿದ ಇವರು  ೧೯೮೭ರಲ್ಲಿ ದುದುಂಬಿ ರಾಜನ ಪಾತ್ರವನ್ನು ನಿಭಾಯಿಸಿದ್ದಾರೆ. ೧೯೯೨ರಲ್ಲಿ ಚಿತ್ರಸೇನ ಗಂಧರ್ವ ಬಯಲಾಟದಲ್ಲಿ ಮಂತ್ರಿಯ ಪಾತ್ರವನ್ನು, ಇಂದ್ರಜಿತ ಕಾಳಗದಲ್ಲಿ ಐದಾರು ಬಾರಿ ರಾಮನ ಪಾತ್ರ ನಿರ್ವಹಿಸಿದ್ದಾರೆ. ಬಾಣಸೂರನ ಕಥೆ, ಧರ್ಮ ವಿಜಯ ಹೀಗೆ ಬೇರೆ ಬೇರೆ ಕಥೆಗಳಲ್ಲಿ ಅಭಿನಯಿಸಿದ್ದಾರೆ. ಸುತ್ತಲಿನ ಗ್ರಾಮಗಳಲ್ಲಿ ಆಹ್ವಾನ ಬಂದಾಗ ಮರಬಗಿ, ಒಂತೆವನ ಬಬಲಾದ ಮಾಡಗ್ಯಾಳ ಗ್ರಾಮಗಳಲ್ಲಿ ಕಲಾತಂಡದೊಡನೆ ಹೋಗಿ ಆಡಿ ಬಂದಿದ್ದಾರೆ.

ಕರ್ನಾಟಕ ಬಯಲಾಟ ಅಕಾಡೆಮಿ ಇವರಿಂದ ಬಂದ ಕಾರ್ಯಕ್ರಮಗಳು ಬೀದರ್ ಗುಲ್ಬರ್ಗ ಕನ್ನಳ್ಳಿ ಮಂದೇವಾಲ ಮುಂತಾದ ಕಡೆಗಳಲ್ಲಿ ಆಡಿದ್ದಾರೆ. ಎತ್ತರದ ನಿಲುವು ಕಟುಮಸ್ತಾದ ದೇಹ ಪಡೆದ ಇವರು ಬಣ್ಣ ಹಚ್ಚಿ ಪೋಷಾಕು ಧರಿಸಿ ವೇದಿಕೆಗೆ ಬಂದರೆ ಯಾರೂ ಗುರುತಿಸಲಾರರು. ಧರ್ಮವಿಜಯ ಬಯಲಾಟದ ಪ್ರಥಮ ಪ್ರದರ್ಶನದಲ್ಲಿ ಕರ್ಣನ ಪಾತ್ರವನ್ನು ನಿರ್ವಹಿಸಿದಾಗ ಸ್ವತಃ ಇವರ ತಾಯಿಯೇ ಗುರುತಿಸಲಿಲ್ಲವಂತೆ! ಅಶೋಕರು ಮಾತನಾಡಿದಾಗ ಅವರ ಧ್ವನಿಯಿಂದ ಗುರುತಿಸಿ ಅಯ್ಯೋ ಮಗನೇ, ಎಷ್ಟ್ ಚೆಂದ್ ಆಡ್ತಿಯೋ..ಎಂದು ತಾಯಿ ಉದ್ಘರಿಸಿದ್ದರಂತೆ!

ಅಶೋಕರಿಗೆ ಯಾವುದೇ ಮಹಾಭಾರತದ ಪಾತ್ರವು ಬಹಳ ಚೆನ್ನಾಗಿ ಒಪ್ಪುತ್ತದೆ. ಯಾವುದೇ ಪಾತ್ರ ನೀಡಿದರು ಅದರಲ್ಲಿ ತಾನು ಒಳಹೊಕ್ಕು ತನ್ನ ತಾನು ಮರೆತು ಆ ಪಾತ್ರವೇ ತಾನಾಗಿ ಮನೋಜ್ಞ ಅಭಿನಯ ನೀಡುವರು.  ದುರ‍್ಯೋಧನ ಹಾಗೂ ಕರ‍್ಣನ ಸಂವಾದವು ಪ್ರೇಕ್ಷಕರನ್ನು ಬೆರಗುಗೊಳಿಸುತ್ತದೆ. ದುರ‍್ಯೋಧನನ ಪಾತ್ರ ನಿರ‍್ವಹಿಸುವ ಸಂಗಪ್ಪ ಬಿರಾದಾರ ಹಾಗೂ ಕರ‍್ಣನ ಪಾತ್ರ ನಿರ‍್ವಹಿಸುವ ಅಶೋಕ ಬಿರಾದರ ಇಬ್ಬರೂ ಭಲೇ ಜೋಡಿ ಯಾಗಿ ಚೆನ್ನಾಗಿ ಅಭಿನಯಿಸುತ್ತಾರೆ. ಇವರ ನೆನಪಿನ ಶಕ್ತಿ ಬಹು ದೊಡ್ಡದು. ಸುಮಾರು ೪೦ ವರ‍್ಷದ ಹಿಂದೆ ಮಾಡಿದ ಪಾತ್ರದ ಸಂಭಾಷಣೆಗಳನ್ನು ಈಗಲೂ ಕೂಡ ಚಾಚು ತಪ್ಪದೇ ಹೇಳುತ್ತಾರೆ ಎಂದು ಹೆಮ್ಮೆ ಪಡುತ್ತಾರೆ ಇವರ ಜೊತೆಗಿನ ಹಿರಿಯ ಬಯಲಾಟ ಕಲಾವಿದ ಶಿವಣ್ಣ ಬಿರಾದಾರ.

೨೦೨೪ರಲ್ಲಿ ಚಡಚಣ ತಾಲೂಕು ಆಡಳಿತವು ಇವರನ್ನು ಗುರುತಿಸಿ ಗಣರಾಜ್ಯೋತ್ಸವದಂದು ಗೌರವ ಸನ್ಮಾನ ನೀಡಿದೆ. ಅನೇಕ ಸಂಘ ಸಂಸ್ಥೆಗಳ ಮಹನೀಯರು ಸನ್ಮಾನಿಸಿದ್ದಾರೆ. ಇವರಿಗೆ ಜಿಲ್ಲಾಡಳಿತ ಹಾಗೂ ಬಯಲಾಟ ಅಕಾಡೆಮಿ ಗುರುತಿಸಿ ಗೌರವಿಸಬೇಕಾಗಿದೆ. ಇವರಿಗೆ ಕಲಾವಿದರ ಮಾಸಾಶನ ಬರುತ್ತಿದೆ. ಆದರೆ ಇವರ ತಂಡದ ಕಲಾವಿದರಿಗೆ ಬಯಲಾಟ ಪ್ರದರ್ಶಿಸಲು ವೇದಿಕೆಗಳು ಬೇಕಾಗಿದೆ. ಸಂಘ ಸಂಸ್ಥೆಗಳು ಅವಕಾಶ ಕಲ್ಪಿಸಿಕೊಡಬೇಕಾಗಿದೆ. ಆ ಮುಖಾಂತರ ನಶಿಸುತ್ತಿರುವ ಬಯಲಾಟ ಕಲೆಯನ್ನು ಉಳಿಸಿ ಬೆಳಸಲು ಒಂದಿಷ್ಟು ಸಹಕರಿಸಬೇಕಿದೆ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್ ಶ್ರೀ ಶನಿಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group