ತುಕ್ಕಾನಟ್ಟಿ (ತಾ.ಮೂಡಲಗಿ) ಭಾರತೀಯ ರೈತ ಸಮುದಾಯ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ವಿಮುಖರಾಗಿ ಪೂರ್ಣ ಪ್ರಮಾಣದಲ್ಲಿ ಸಾಂಪ್ರದಾಯಿಕವಾಗಿ ಬಂದಿರುವ ಸಾವಯವ ಕೃಷಿಯತ್ತ ಗಮನಹರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ರಸಗೊಬ್ಬರ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿರುವುದಲ್ಲದೆ ಇದರ ಪರಿಣಾಮ ಬೆಳೆಗಳ ಇಳುವರಿ ಮೇಲೂ ಪ್ರಭಾವ ಬೀರುತ್ತಿದೆ. ರೈತರು ಯಥೇಚ್ಚವಾಗಿ ರಸಗೊಬ್ಬರ ಬಳಕೆ ಮಾಡಿ ಬೆಳೆ ಬೆಳೆಯುತ್ತಿರುವುದರಿಂದ ಆಹಾರದಲ್ಲಿ ನಿಧಾನಗತಿಯಲ್ಲಿ ವಿಷವು ಮಿಶ್ರಣಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಸಾವಯವ ಕೃಷಿ ಸಾಧಕ ರಮೇಶ ಖಾನಗೌಡ್ರ ಹೇಳಿದರು.
ಅವರು ತುಕ್ಕಾನಟ್ಟಿ ಗ್ರಾಮದಲ್ಲಿ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನದ ‘ಆರ್ಥಿಕ ಸ್ವಾವಲಂಬನೆಯಲ್ಲಿ ಆಧುನಿಕ ಕೃಷಿ ಪದ್ಧತಿ’ ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಸಾವಯವ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ದೀರ್ಘಾವಧಿಯವರೆಗೆ ಕಾಪಾಡಿಕೊಂಡು ಉತ್ತಮ ಬೇಸಾಯ ಮಾಡಬಹುದು. ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ, ಜೀವಾಮೃತ, ಕೊಟ್ಟಿಗೆ ಗೊಬ್ಬರಗಳನ್ನು ಬೇಸಾಯಕ್ಕೆ ಬಳಸುವುದರಿಂದ ಪೌಷ್ಠಿಕ ಆಹಾರೋತ್ಪನಗಳ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಇನ್ನೋರ್ವ ಅತಿಥಿ ವಿಜಯ್ ಆರ್ ಮಾತನಾಡಿ ಕೃಷಿ ಮಾಡುವ ವಿಧಾನದಲ್ಲಿ ಮತ್ತು ಕೃಷಿ ಯಂತ್ರೋಪಕರಣಗಳಲ್ಲಿ ಸಾಕಷ್ಟು ತಂತ್ರಜ್ಞಾನ ಪ್ರಗತಿ ಸಾಧಿಸಿದೆ. ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ನುಡಿದರು.
ಶಿಬಿರಾಧಿಕಾರಿ ಶಂಕರ ಎಂ. ನಿಂಗನೂರ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ರಾಸಾಯನಿಕ ಗೊಬ್ಬರಗಳಿಂದ ಬೆಳೆಯಲಾಗುವ ವಿಷಯುಕ್ತ ಆಹಾರ ಬೆಳೆಗಳ ಬದಲಿಗೆ ಇಂದು ಜಗತ್ತಿನಾದ್ಯಂತ ಸಾವಯವ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ರೈತರು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆದು ಲಾಭದಾಯಕ ಮಾಡಿಕೊಳ್ಳಬೇಕೆಂದು ಎಂದರು.
ಪಶು ವೈದ್ಯ ಲಕ್ಷ್ಮಣ ಉಪ್ಪಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗುರುನಾಥ ಹುಕ್ಕೇರಿ, ಶಿಬಿರಾಧಿಕಾರಿ ಎಂ.ಬಿ.ಕುಲಮೂರ, ಸಹ ಶಿಬಿರಾಧಿಕಾರಿಗಳಾದ ಡಿ.ಎಸ್.ಹುಗ್ಗಿ, ಬಿ.ಕೆ. ಸೊಂಟನವರ, ಶಿಬಿರ ಸಂಘಟನಾ ಸಹಾಯಕರಾದ ಸಂಪತ್ ಗದಾಡಿ, ಮುತ್ತೇಪ್ಪ ಬಾಗೇವಾಡಿ, ಗಜಾನನ ಉಪ್ಪಾರ, ಬಾಬುರಾವ ಹುಲಕುಂದ ಇನ್ನಿತರರು ಉಪಸ್ಥಿತರಿದ್ದರು.
ಶಿಬಿರಾರ್ಥಿ ಕುಮಾರಿ ಅನುಷಾ ಬಂಡಾರಿಮಠ ನಿರೂಪಿಸಿದರು. ಚೈತ್ರಾ ಬಾಗೋಜಿ ಪ್ರಾರ್ಥಿಸಿದರು. ಶಾಂತಾ ಮೂಡಲಗಿ ಹಾಗೂ ಸಂಗಡಿಗರು ಎನ್ಎಸ್ಎಸ್ ಗೀತೆ ಹಾಡಿದರು. ಪ್ರೀಯಾ ನಾಯಕವಾಡಿ ವಂದಿಸಿದರು.