ಮೂಡಲಗಿ– ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿಯೇ ಜನರ ಪ್ರಧಾನ ಕಸಬು ಆಗಿರುವುದರಿಂದ ಹಳ್ಳಿಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಕೃಷಿ ಮೇಳ ಮತ್ತು ವಿಚಾರ ಸಂಕಿರಣ ಆಯೋಜಿಸುವ ಮೂಲಕ ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಮಾಹಿತಿ ಪಡೆದು ಕೃಷಿಯನ್ನು ಲಾಭದಾಯಕ ಉದ್ದಿಮೆಯಾಗಿ ಪರಿವರ್ತಿಸಬೇಕಾದ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣಾ ಕಡಾಡಿ ಹೇಳಿದರು,
ಸೋಮವಾರ ಫೆ-14 ರಂದು ಮೂಡಲಗಿ ತಾಲೂಕಾ ರಂಗಾಪೂರದ ಬೀರೇಶ್ವರ ದೇವಸ್ಥಾನದ 10ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಕೃಷಿ ಕುಟುಂಬದಲ್ಲಿ ಪದವಿ ಪಡೆದವರು ಉದ್ಯೋಗಕ್ಕಾಗಿ ಬೇರೆಕಡೆಗೆ ವಲಸೆ ಹೋಗುವುದಕ್ಕಿಂತ ನಮ್ಮ ಹಿರಿಯರು ನಮಗಾಗಿ ಬಿಟ್ಟುಕೊಟ್ಟಿರುವ ಜಮೀನುಗಳಲ್ಲಿ ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾದ ಸವಾಲನ್ನು ಸ್ವೀಕರಿಸಬೇಕಾಗಿದೆ ಎಂದರಲ್ಲದೇ, ಪ್ರಸ್ತುತ ವರ್ಷ ಕೇಂದ್ರ ಸರ್ಕಾರ ರಾಸಾಯನಿಕ ಮುಕ್ತ, ನೈಸರ್ಗಿಕ ಕೃಷಿಗೆ ಆದ್ಯತೆ ನೀಡಿದ್ದು, 2023 ರನ್ನು ಸಿರಿಧಾನ್ಯಗಳ ವರ್ಷವೆಂದು ಘೋಷಿಸಿದೆ. ಹೀಗಾಗಿ ರೈತರು ಇದರ ಲಾಭ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಮಮದಾಪೂರದ ವೇದಮೂರ್ತಿ ಚರಮೂರ್ತಿ ಶ್ರೀಗಳು, ಹೂಲಿಕಟ್ಟಿಯ ಶ್ರೀ ಚಿದಾನಂದ ಹೂಗಾರ ಸಾನ್ನಿಧ್ಯ ವಹಿಸಿದ್ದರು. ಗ್ರಾ.ಪಂ ಸದಸ್ಯ ಬಸಪ್ಪ ಮಾದರ, ಹನುಮಂತ ಬೀರನಗಡ್ಡಿ, ಮಹಾನಿಂಗಪ್ಪ ಕಬ್ಬೂರ, ಸುಭಾಸ ಬೀರಣಗಡ್ಡಿ, ಮಹಾದೇವ ಮುಸರಗುಪ್ಪಿ, ಮಾರುತಿ ಗೌಡರ, ಯಮನಪ್ಪ ಅಕಡಿ, ಭೀಮಶಿ ಹೀರೆಪ್ಪಗೋಳ, ರಮೇಶ ಜಿನಗನ್ನವರ ಇದ್ದರು.