ಗೋಕಾಕ – ಗೋಕಾಕದ ಜಾರಕಿಹೊಳಿ ಕುಟುಂಬ ಎಂದರೆ ಇಂದು ಇಡೀ ದೇಶವೇ ತಿರುಗಿ ನೋಡುವಂತಾಗಿದೆ. ಸಾವಿರಾರು ಗುರುಹಿರಿಯರ ಆಶೀರ್ವಾದ, ಸಹಸ್ರಾರು ಅಭಿಮಾನಿಗಳ ಪ್ರೀತಿ, ಕೋಟ್ಯಂತರ ಕಾರ್ಯಕರ್ತರ ವಿಶ್ವಾಸ ಇವೆಲ್ಲವೂ ನಮ್ಮ ಕುಟುಂಬದ ಬೆಂಬಲವಾಗಿದೆ ಎಂದು ಲಕ್ಷ್ಮೀ ಎಜುಕೇಷನ್ ಟ್ರಸ್ಟ್ ನಿರ್ದೇಶಕ ಹಾಗೂ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಹೇಳಿದರು.
ಗೋಕಾಕದ ಮಹಾಲಕ್ಷ್ಮೀ ದೇವಾಲಯದ ಸಭಾಭವನದಲ್ಲಿ ನಡೆದ ತಮ್ಮ 25ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೊಡ್ಡಪ್ಪ, ಚಿಕ್ಕಪ್ಪ ಹಾಗೂ ತಂದೆಯವರ ಮಾರ್ಗದರ್ಶನದಲ್ಲಿ ನಾವು ಸದಾ ಜನಸೇವೆಯ ಹಾದಿಯಲ್ಲೇ ನಡೆದು ಬಂದಿದ್ದೇವೆ. ನೀವು ಎಲ್ಲರೂ ನೀಡುತ್ತಿರುವ ಬೆಂಬಲವೇ ನಮ್ಮ ಕುಟುಂಬವನ್ನು ಮತ್ತಷ್ಟು ಮೇಲೆತ್ತರಕ್ಕೇರಿಸಿದೆ ಎಂದು ಹೇಳಿದರು.
ಇಂದಿನ ಸನ್ನಿವೇಶಗಳನ್ನು ನಾವೆಲ್ಲರೂ ನೋಡಿದ್ದೇವೆ. ದೇಶದ ಇತಿಹಾಸದಲ್ಲೇ ಒಂದು ಕುಟುಂಬದಿಂದ ನಾಲ್ವರು ಶಾಸಕರು, ಒಬ್ಬರು ಸಂಸದರು, ಜೊತೆಗೆ ಬಿಡಿಸಿಸಿ ಬ್ಯಾಂಕ್‌ಗೆ ಇಬ್ಬರು ನಿರ್ದೇಶಕರಾಗಿರುವುದು ನಮ್ಮ ಅಭಿಮಾನಿಗಳು, ಕಾರ್ಯಕರ್ತರು, ಜನರ ಆರ್ಶೀವಾದದ ಫಲವಾಗಿದೆ. ನಮ್ಮ ಕುಟುಂಬಕ್ಕೆ ತೋರಿದ ಇಷ್ಟೊಂದು ಪ್ರೀತಿಯನ್ನು ಬೇರೆಕಡೆಗೆ ಯಾರೂ ಕೊಟ್ಟಿಲ್ಲ ಎಂದರು.
ಚಿಕ್ಕಪ್ಪರಾದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಸಮಾನತೆ ತತ್ವದಡಿ ಯಾವುದೇ ಜಾತಿ, ಜನಾಂಗಕ್ಕೆ ಅನ್ಯಾಯ ಮಾಡದೇ ನಮ್ಮ ಕಾರ್ಯಪಡೆಯೊಂದಿಗೆ ಮುಂದಿನ ದಿನಗಳಲ್ಲಿ ಉತ್ತಮ ಸಂಘಟನೆಯನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಯುವಕರ ಶಕ್ತಿಯಿಂದ ಜಿಲ್ಲೆ ಮತ್ತು ರಾಜ್ಯದ ಎದುರು ಉತ್ತಮ ಕಾರ್ಯವನ್ನು ತೋರಿಸೋಣ ಎಂದೂ ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿ, ಇದೇ ರೀತಿಯ ಪ್ರೀತಿ ಮತ್ತು ಆಶೀರ್ವಾದ ಮುಂದುವರೆಯಲಿ ಎಂದು ಮನವಿ ಮಾಡಿದರು.
ಲಕ್ಷ್ಮೀ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಗೋಕಾಕ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಅಂಕಲಗಿ- ಕುಂದರಗಿ ಮಠದ ಅಮರೇಶ್ವರ ಸ್ವಾಮೀಜಿ ವಹಿಸಿದ್ದರು.
ಘಟಪ್ರಭಾ ಗುಬ್ಬಲಗುಡ್ಡದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಭಾಗೋಜಿಕೊಪ್ಪ- ರಂಗಾಪೂರದ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ, ಸುಣಧೋಳಿಯ ಶಿವಾನಂದ ಸ್ವಾಮೀಜಿ, ಕಕಮರಿ ಮಠದ ಗುರುಲಿಂಗ ಜಂಗಮ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಿದ್ದರು.
ಗೋಕಾಕ- ಅರಭಾವಿ ಕ್ಷೇತ್ರದ ಮುಖಂಡರು, ಚುನಾಯಿತ ಸದಸ್ಯರು, ಸಹಕಾರಿ ಮುಖಂಡರು, ವಿವಿಧ ಸಮುದಾಯದ ಪ್ರಮುಖರು ಸೇರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

