ಸದೃಢ ರಾಷ್ಟ್ರ ನಮ್ಮದಾಗಬೇಕು –  ಗಜಾನನ ಮನ್ನಿಕೇರಿ

0
82

ಮೂಡಲಗಿ:  ಯುವಕರ ಮೇಲೆ ಈ ಭೂಮಿ, ದೇಶ ನಿಂತಿದೆ. ಯುವಕರು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಶಕ್ತ ನಾಗರಿಕರು ಮಾತ್ರ ಸದೃಡ ರಾಷ್ಟ್ರ ಕಟ್ಟುತ್ತಾರೆ. ಸಾಧನೆಗೆ ಮಿತಿಯಿಲ್ಲ, ಸಾಧನೆಯು ಸಾಧಕನ ಸ್ವತ್ತು.  ‘ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಗಜಾನನ ಬಿ. ಮನ್ನಿಕೇರಿ ಸ್ಮರಿಸಿದರು.

ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ವೇದಿಕೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ಮೂಡಲಗಿ ತಾಲ್ಲೂಕಾ ಮಟ್ಟದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ನೂತನ ರೋವರ್ ಮತ್ತು ರೇಂಜರ್ ಘಟಕ ಮತ್ತು ಬಜಾಜ್ ಫಿನ್‌ಸರ್ವ ಸರ್ಟಿಫಿಕೇಟ್ ಕೋರ್ಸ್” ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನನಗಾಗಿ, ನನ್ನ ಸಮಾಜಕ್ಕಾಗಿ ಹಾಗೂ ದೇವರ ಸೇವೆಗಾಗಿ ಸದಾ ಸಿದ್ದರಾಗಿದ್ದೇವೆ ಎಂಬುದು ಭಾರತ ಸ್ಕೌಟ್ಸ್ ಮತ್ತು ಗೈಡನ ಉದ್ದೇಶವಾಗಿದೆ ಎಂದರು.

ಮೂಡಲಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಬಸಪ್ಪ ಹೆಬ್ಬಾಳ ಮಾಡನಾಡಿ, ಜೀವನದಲ್ಲಿ ಕಷ್ಟಗಳು ಎದುರಾದಾಗ ಯಶಸ್ಸು ದೂರದ ಮಾತು ಎಂದೆನಿಸುವುದು ಸಾಮಾನ್ಯ. ಅಂತಹ ಪರಿಸ್ಥಿತಿಯಲ್ಲಿ, ತಾಳ್ಮೆಯು ಸಹ ನಮ್ಮಿಂದ ದೂರಾಗಲು ಪ್ರಾರಂಭಿಸುತ್ತದೆ. ಆದರೆ ವಿವೇಕಾನಂದರ ಸ್ಪೂರ್ತಿದಾಯಕ ಮಾತುಗಳು ಮತ್ತು ಅಮೂಲ್ಯವಾದ ಆಲೋಚನೆಗಳನ್ನು ಅನುಸರಿಸುವ ಮೂಲಕ ನಾವು, ನಮ್ಮ ಗುರಿ ಮತ್ತು ಯಶಸ್ಸನ್ನು ಸಾಧಿಸಬಹುದು. ಓದಲು ಏಕಾಗ್ರತೆ ಅಗತ್ಯ, ಏಕಾಗ್ರತೆಗೆ ಧ್ಯಾನ ಅಗತ್ಯ, ಧ್ಯಾನದಿಂದ ಮಾತ್ರ ಇಂದ್ರಿಯಗಳ ಮೇಲೆ ಹಿಡಿತ ಇಟ್ಟುಕೊಂಡು ಏಕಾಗ್ರತೆಯನ್ನು ಸಾಧಿಸಬಹುದು. ಹಾಗಾಗಿ ಯುವಕರು ಮೊದಲು ಇಂದ್ರಿಯಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಸಂಯೋಜಕರಾದ ಶ್ರೀ ಡಿ.ಬಿ. ಅತ್ತಾರ ಮಾಡನಾಡಿ, ರಾಷ್ಟ್ರೀಯತೆ, ಸಮಯ ಪರಿಪಾಲನೆ, ಶಿಸ್ತು, ಪ್ರಾಮಾಣಿಕತೆ, ಸ್ವಚ್ಛತೆ, ಸೌಜನ್ಯತೆ, ಸಂಸ್ಕಾರ, ಸಂಸ್ಕೃತಿ ಮುಂತಾದ ಮಾನವೀಯ ವೌಲ್ಯದ ಗುಣಗಳನ್ನು ಅಳವಡಿಸಿಕೊಳ್ಳಲು ಭಾರತದ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಿದೆ ಎಂದರು.

ಬೆಳಗಾವಿಯ ಬಜಾಜ್ ಫಿನ್‌ಸರ್ವ ಲಿಮಿಟೆಡ್ ಸಂಯೋಜಕ ಸಚಿನ ನಾಡಗೌಡರ ಮಾತನಾಡಿ, ಬಜಾಜ್ ಫಿನ್‌ಸರ್ವ ವಿದ್ಯಾರ್ಥಿಗಳಲ್ಲಿ ಧೈರ್ಯ, ಜ್ಞಾನ,  ಸಂಭಾಷಣಾ ವಿಧಾನ, ಸಂದರ್ಶನ ಕಲೆ ಮುಂತಾದ ಅಂಶಗಳನ್ನು ಕಲಿಸಿಕೊಡುತ್ತದೆ ಎಂದರು.

ಎಸ್.ಆರ್.ಇ. ಸಂಸ್ಥೆಯ ಚೇರಮನ್ನರಾದ ಶ್ರೀ ಬಸಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯ ಡಾ. ಸುರೇಶ ಹನಗಂಡಿ‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಬಿ.ಎಸ್.  ಗೋರೋಶಿ, ಸಾತಪ್ಪ ಖಾನಾಪೂರ, ಮಲ್ಲಪ್ಪ ಕುರಬೇಟ, ರೋವರ್ ಲೀಡರ್ ಬಿ.ಕೆ. ಸೊಂಟನವರ, ಬಜಾಜ್ ಫಿನ್ಸರ್ವ್ ಸಂಯೋಜಕ ಆರ್.ಎಸ್. ಪಂಡಿತ ಇನ್ನಿತರರು ಉಪಸ್ಥಿತರಿದ್ದರು.

ಪ್ರೊ. ಶಂಕರ ನಿಂಗನೂರ ನಿರೂಪಿಸಿದರು. ಕು. ಹಸೀನಾಬಾನು ನದಾಫ್ ಪ್ರಾರ್ಥಿಸಿದರು. ಪ್ರೊ. ಡಿ.ಎಸ್. ಹುಗ್ಗಿ ಸ್ವಾಗತಿಸಿದರು. ರೇಂಜರ್ ಲೀಡರ್ ಡಾ. ರಾಜಶ್ರೀ ತೋಟಗಿ ವಂದಿಸಿದರು.