ಕುಂಭಮೇಳದ ಮೋನಾಲಿಸಾಗೆ ಒಂದು ಕಿವಿಮಾತು
ಹು ಷಾರು ಹುಡುಗಿ ನಿನ್ನ ಕಣ್ಣ ನೋಟಕ್ಕೆ ಬೆರಗಾದವರೆಲ್ಲ ಕ್ಲಿಕ್ಕಿಸಿದ ಪೋಟೊಗಳು ಜಗದಗಲಕ್ಕೂ ಹರಿದಾಡುತ್ತಿವೆ. ನಿನ್ನ ಹೆತ್ತವರು ನಮ್ಮ ಮುದ್ದುಮಗಳೆಂದು ಬೀಗಿರಬಹುದಷ್ಟೇ
ಇಷ್ಟು ದಿನ ಸುಮ್ಮನಿದ್ದ ಇನಸ್ಟಾಗ್ರಾಮು, ಫೆಸಬುಕ್ಕು, ಟ್ವೀಟರ್ರುಗಳಲ್ಲೀಯೂ ಈಗ ಬರೀ ನಿನ್ನದೇ ಧ್ಯಾನ… ನಿನ್ನ ಕಣ್ಣುಗಳ ಬಣ್ಣದ ಗುಣಗಾನ
ನೆನಪಿರಲಿ ನೀನು ಬರುವ ಮೊದಲು ಬಹಳಷ್ಟು ಜನ ಬಂದು ಹೋಗಿದ್ದಾರಿಲ್ಲಿ,ಯಾರದ್ದೋ ಹೆಸರಿನಲ್ಲಿ ಮತ್ಯಾರೋ ಸಿರಿವಂತರಾಗಿದ್ದಾರೆ ಇಲ್ಲಿ.
ಗೊತ್ತಿಲ್ಲ ದುರುಳರ ಕೈಗೆ ಸಿಕ್ಕು ದಾಳವಾದವರು ಎಷ್ಟೋ…
ಕಾಲದ ಕವಡೆ ಉರುಳಿ ತೆರೆಯ ಮರೆಗೆ ಜಾರಿದವರೆಷ್ಟೋ
ಎಲ್ಲೋ ಯಾರೋ ಒಬ್ಬ ನಿನ್ನ ಮೇಲೆ ನಿಷ್ಕಲ್ಮಶ ಪ್ರೀತಿಗೆ ಬೀಳಬಹುದು ಮತ್ಯಾರೋ ಅಪಾಪೋಲಿ ತೆವಲಿಗೆ ಬಿದ್ದು ಭೇಟಿಯಾಗದೆಯೂ ಅಧುನಿಕ ದೇವ ದಾಸನಾಗಬಹುದು.
ನಿನ್ನ ಮೊದಲ ಪೋಟೊ ಕ್ಲಿಕ್ಕಿಸಿದವ ಹೆಮ್ಮೆಯಿಂದ ಎಲ್ಲರಿಗೂ ಹೇಳಿರಬಹುದು.
ಮತ್ಯಾರೋ ಪರಿಚಯಿಸಿದ್ದು
ನಾನೇ ಅಂತ ಸುಳ್ಳು ಹೇಳಿರಬಹುದು.
ಒಂದಷ್ಟು ಬಿಡಿಗಾಸು ಕೊಟ್ಟು
ನಾಟಕದ ಕನಿಕರ ತೋರಿಸಿ
ಇನ್ಯಾರೋ ಶಹಬ್ಬಾಶ್ ಗಿರಿಯ ಜೊತೆಗೆ ಒಂದಷ್ಟು ಲೈಕುಗಳ ತನ್ನ ಅಕೌಂಟಿಗೆ
ಒತ್ತಿಸಿಕೊಂಡಿರಬಹುದು
ಅಷ್ಟೆ ಯಾಕೇ??
ಇಷ್ಟು ದಿನ ತನ್ನ ಕನಸಿನ ಹುಡುಗಿ ಎಲ್ಲಿಯೋ ಇರುತ್ತಾಳೆ ಅಂತ ಭ್ರಮಿಸಿದ ಹುಡುಗನೊಬ್ಬ
ನಿನ್ನ ವೈರಲ್ ಆದ ವಿಡಿಯೋ ನೋಡಿ ಸಿಕ್ಕಳು ಮುಮ್ತಾಜ್ ಅಂತ ಒಳಗೊಳಗೆ ಸಂಭ್ರಮಿಸಿರಬಹುದು.
ಜಗದಗಲ ಮುಗಿಲಗಲ
ನಕ್ಕ ನಿನ್ನ ನಗೆ,ಆ ಸಹಜ ಸೌಂದರ್ಯದ ಆರಾಧಕರು ಇಂದಿಗೆ ನೂರು,ಸಾವಿರ,ಲಕ್ಷ,ಕೋಟಿಗಳೂ ಇರಬಹುದು.
ಆದರೆ ತುತ್ತಿನ ಚೀಲ ತುಂಬಿಸಲು ರುದ್ರಾಕ್ಷಿ ಮಾರುತ್ತ ಕುಳಿತವಳೇ
ನಿನ್ನ ಮುಗ್ಧತೆಯ ಬಳಸಿಕೊಳ್ಳುವ
ಛಲಕ್ಕೆ ಬಿದ್ದವರೂ ಈಗಲೂ ನಿನ್ನ ಸುತ್ತ ನೆರೆದಿರಬಹುದು.
ಕುಂಭಮೇಳಕ್ಕೂ ಮೊದಲೇ
ನಿನ್ನ ನೋಡಿದವರಿದ್ದಾರೆ ಬಿಡು,ನಿನ್ನದೇ ಊರು,ಓಣಿ,ಗಲ್ಲಿಗಳ ತುಂಬ ಅವರೆಲ್ಲ
ಗುಲ್ಲುಗಳ ಹರಡುತ್ತ ಎದ್ದು ಕುಂತಿರಬಹುದು. ಅಖಾಡಗಳ ಹೆಸರಲ್ಲಿ ಆಧ್ಯಾತ್ಮ ಅರಸುತ್ತ ದೇವರ ಹುಡುಕುತ್ತ
ಬದುಕಿನ ವೈರಾಗ್ಯ ಹೊತ್ತ ನಿಜ ಅಘೋರಿಗಳ ನಡುವೆ
ಸನ್ಯಾಸಿ ವೇಷ ಧರಿಸಿದ ಫಾಖಂಡಿ ಸ್ವಾಮಿಗಳೂ ಪ್ರಯಾಗರಾಜದಲ್ಲಿ ಬಂದಿರಬಹುದು.
ವೈರಲ್ ಆಗುವದಕ್ಕೆಂದೆ ವೇಷ ಧರಿಸಿದವರಿಂದ ಹಿಡಿದು ಹತ್ಯೆಯಾಗುವ ಭಯಕ್ಕೆ ಬಿದ್ದು ಲಿಂಗದಿಕ್ಷೆ ಪಡೆದವರೂ ಇದ್ದಾರೆ ಇಲ್ಲಿ.
ಸಿನೆಮಾ,ಸೀರಿಯಲ್ಲೂ ಮಾಡೆಲ್ಲಿಂಗ್ ಹೆಸರಲ್ಲಿ ಬಣ್ಣದ ಲೋಕ ಬರಸೆಳೆದರೆ ತಪ್ಪಿಯೂ ಹೂಂ ಗುಟ್ಟಬೇಡ ಹುಡುಗಿ….
ಮಾತಿನಲ್ಲಿ ಮರಳು ಮಾಡುವ,ನಿನ್ನ ನೋಟಕ್ಕೂ ನೋಟಿನ ಮಳೆ ಸುರಿಸುವ ಜನರಿದ್ದಾರೆ ಇಲ್ಲಿ.
ದುಃಖದಲ್ಲಿ ಇರುವವರ ತಬ್ಬಿ ಸಂತೈಸುವದಕ್ಕಿಂತ
ಸುಖದ ಸ್ಪರ್ಷಕ್ಕೆ ಹಾತೊರೆದು ಅಪ್ಪುವ ಜನರಿದ್ದಾರೆ ಇಲ್ಲಿ…
ಸದ್ಯ ತುಂಬು ಯವ್ವನೆ ನೀನು
ಕಬ್ಬಿನ ಜಲ್ಲೆಯಾಗಿದ್ದಿ
ಸಿಪ್ಪೆ ಸುಲಿಯುವ ತನಕ
ಹಿಂಡಿ ಹಿಪ್ಪೆಯ ಮಾಡಿ
ಸವಿ ಉಂಡು ಬೀಸಾಡುತ್ತಾರೆ ಮುತ್ತು,ಹವಳ,ಮಾಣಿಕ್ಯ,ರುದ್ರಾಕ್ಷಿಗಳ ಮಾರುತ್ತ ಊರೂರು ಅಲೆಯುತ್ತಿ ಅನ್ನುವದಾದರೆ ಸಾಧ್ಯವಾದರೆ ಸಿಕ್ಕು ಬಿಡು ಒಮ್ಮೆ ಎದುರಾಗಿ
ಹೇಳಬೇಕಿದೆ ಏನೋ…ಉಸುರಬೇಕಿದೆ ನಿನ್ನ ಕಿವಿಯಲ್ಲಿ…..
ಈಗ ಇನ್ನು ನನ್ನ ಕವಿತೆಯ ಬಗ್ಗೆಯೂ ಆಡಿಕೊಳ್ಳುತ್ತಾರೆ ಜನ
ಹುಷಾರು ಹುಡುಗಿ ನಿನ್ನ ವ್ಯಾಪಾರಕ್ಕೂ ಕೊಳ್ಳಿ ಇಟ್ಟು
ಭಾವಚಿತ್ರಕ್ಕೆ ಮುಗಿಬಿದ್ದವರಲ್ಲಿ
ನನ್ನ ಹುಡುಕುವ ಪ್ರಯತ್ನ ಮಾಡಬೇಡ..
ಮುಂದೊಮ್ಮೆ ಸಹಜ ಸೌಂದರ್ಯ ಮಾಸಿ,ನೀನು ಮೂಳೆ ಮಾಂಸದ ತಡಿಕೆಯಾಗುತ್ತಿ ಆಗ
ಇಲ್ಲವಾಗುತ್ತಾರೆ ನಿನ್ನ ಸುತ್ತ ನೆರೆದು ಮೈಮರೆತು ನಿಂತ ಜನ.
ಹೇಳುವದಿಷ್ಟೇ ಸಾಧ್ಯವಾದರೆ
ಕಾಯ್ದುಕೋ ನೀ ನಿನ್ನ ಒಳಗಿನ ನಿನ್ನತನ ಕಾಯ್ದುಕೋ ನೀ ನಿನ್ನ ಒಳಗಿನ ನಿನ್ನತನ….
ದೀಪಕ ಶಿಂಧೇ
9482766018