ಆಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ – ಆರೋಗ್ಯ – ಅಧ್ಯಾತ್ಮ ಕ್ಷೇತ್ರಗಳಲ್ಲಿ ಕಳೆದ ಹದಿಮೂರು ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನ ತನ್ನ 13ನೇ ವಾರ್ಷಿಕೋತ್ಸವದ ಅಂಗವಾಗಿ, ಆಧ್ಯಾತ್ಮಿಕ ಕ್ಷೇತ್ರದ ಅನನ್ಯ ಸೇವೆಯನ್ನು ಗುರುತಿಸಿ ಈ ಸಾಲಿನ ಪ್ರತಿಷ್ಠಿತ “ಪಾಂಚಜನ್ಯ ಪುರಸ್ಕಾರ – 2025” ಅನ್ನು ಖ್ಯಾತ ವಾಗ್ಮಿ, ಚಿಂತಕ ಹಾಗೂ ಪ್ರವಚನಕಾರರಾದ ದುಷ್ಯಂತ ಶ್ರೀಧರ ಅವರಿಗೆ ಪ್ರದಾನ ಮಾಡುತ್ತಿದೆ.
ಸನಾತನ ಧರ್ಮದ ತಾತ್ವಿಕ ಆಳ, ಭಾಗವತ ಪರಂಪರೆ ಹಾಗೂ ಸಮಕಾಲೀನ ಜೀವನದ ನಡುವೆ ಸೇತುವೆ ನಿರ್ಮಿಸುವ ಅವರ ವಾಗ್ಮಿತ್ವ, ಯುವಪೀಳಿಗೆಗೆ ಆಧ್ಯಾತ್ಮಿಕ ಚೈತನ್ಯ ತುಂಬುವಲ್ಲಿ ವಿಶಿಷ್ಟ ಪಾತ್ರ ವಹಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪಾಂಚಜನ್ಯ ಪ್ರತಿಷ್ಠಾನದ ಗೌರವ ಪುರಸ್ಕಾರದಿಂದ ಸನ್ಮಾನಿಸಲಾಗುತ್ತಿದೆ.
ಕಾರ್ಯಕ್ರಮ ವಿವರ :ದಿನಾಂಕ: ಡಿಸೆಂಬರ್ 27, ಶನಿವಾರ ಸಮಯ: ಬೆಳಿಗ್ಗೆ 9.30 ಸ್ಥಳ: ಯುವಪಥ – ವಿವೇಕ ಆಡಿಟೋರಿಯಂ,ಜಯನಗರ 4ನೇ ಬ್ಲಾಕ್, ಬೆಂಗಳೂರು
ಮುಖ್ಯ ಅತಿಥಿ: ಅಶೋಕ್ ಹಾರನಹಳ್ಳಿ (ಮಾಜಿ ಅಡ್ವೊಕೇಟ್ ಜನರಲ್, ಕರ್ನಾಟಕ)
ಪುರಸ್ಕಾರದ ವಿವರ : ಅಭಿನಂದನಾ ಪತ್ರ • ಸ್ಮರಣಿಕೆ • ಫಲ–ತಾಂಬೂಲ ಮತ್ತು ರೂ. 1,00,000/- ನಗದು ಗೌರವಧನ
ಆಧ್ಯಾತ್ಮಿಕ ಚಿಂತನೆ, ಸಾಂಸ್ಕೃತಿಕ ಸಂವೇದನೆ ಮತ್ತು ಸಮಾಜಮುಖಿ ಸೇವೆಯ ಸಂಗಮವಾಗಿರುವ ಈ ಸಮಾರಂಭದಲ್ಲಿ ಭಾಗವಹಿಸಲು ಭಕ್ತಾದಿಗಳು, ಚಿಂತಕರು ಹಾಗೂ ಆಸಕ್ತ ಸಾರ್ವಜನಿಕರನ್ನು ಪಾಂಚಜನ್ಯ ಪ್ರತಿಷ್ಠಾನ ಸೌಹಾರ್ದದಿಂದ ಆಹ್ವಾನಿಸುತ್ತದೆ.
— ಪಾಂಚಜನ್ಯ ಪ್ರತಿಷ್ಠಾನ, ವಿವರಗಳಿಗೆ: 98450 75250
ಸನಾತನ ಜ್ಞಾನ ಭಂಡಾರಿ – ಅಧ್ಯಾತ್ಮ ಲೋಕದ ಸವ್ಯಸಾಚಿ
ದುಷ್ಯಂತ ಶ್ರೀಧರ ಅವರಿಗೆ ‘ಪಾಂಚಜನ್ಯ ಪುರಸ್ಕಾರ – ೨೦೨೫’ ಪ್ರದಾನ ಸಂಭ್ರಮ
ಸನಾತನ ಧರ್ಮದ ಸಾರಸರ್ವಸ್ವವನ್ನು ತಮ್ಮ ಅಮೋಘ ವಾಗ್ವಿಭವದ ಮೂಲಕ ನಿರಂತರವಾಗಿ ಜನಮಾನಸಕ್ಕೆ ಉಣಬಡಿಸುತ್ತಿರುವ ಖ್ಯಾತ ವಾಗ್ಮಿ ದುಷ್ಯಂತ ಶ್ರೀಧರ ಅವರು ಅಧ್ಯಾತ್ಮ ಕ್ಷೇತ್ರದ ಅಪೂರ್ವ ಸಾಧಕರು. ಮೂಲತಃ ಕುಂಭಕೋಣಂನ ಆರ್ಷ ಸಂಸ್ಕೃತಿಯ ಶ್ರೀವೈಷ್ಣವ ಕುಟುಂಬದಲ್ಲಿ, ಶ್ರೀಮತಿ ಪ್ರಭಾ ಮತ್ತು ಶ್ರೀಧರ ದಂಪತಿಗಳ ಸುಕೃತ ಫಲವಾಗಿ, ೧೯ ಸೆಪ್ಟೆಂಬರ್ ೧೯೮೬ರಂದು (ಭಾದ್ರಪದ ಕೃಷ್ಣ ಪ್ರತಿಪದೆ) ಬೆಂಗಳೂರಿನಲ್ಲಿ ಜನಿಸಿದ ಅವರು, ಬಾಲ್ಯದಲ್ಲಿಯೇ ಅಧ್ಯಾತ್ಮ ಲೋಕದ ಅನರ್ಘ್ಯ ರತ್ನವಾಗಿ ಹೊಳೆಯತೊಡಗಿದರು.
‘ಜನನಿಯೇ ಮೊದಲ ಗುರು’ ಎಂಬ ಮಾತಿಗೆ ಜೀವಂತ ಸಾಕ್ಷಿಯಾಗಿರುವಂತೆ, ಶಾಲಾ ಶಿಕ್ಷಕಿಯಾಗಿದ್ದ ಮಾತೃಶ್ರೀ ಅವರು ಐದು ವರ್ಷಗಳ ವಯಸ್ಸಿನಲ್ಲಿಯೇ ಸಂಸ್ಕೃತ ಅಧ್ಯಯನಕ್ಕೆ ಪ್ರೇರೇಪಿಸಿ ‘ದಯಾಶತಕಮ್’ ಬಾಯಿಪಾಠ ಮಾಡಿಸಿದರು. ಗುರು ಇಂದಿರಾ ರಾಜಗೋಪಾಲನ್ ಅವರಿಂದ ಭಗವದ್ಗೀತೆಯ ಕಂಠಪಾಠ, ಮಾತಾಮಹಿಯ ಪ್ರೇರಣೆಯಿಂದ ಸೆಂಗಲಿಪುರಂ ಅನಂತರಾಮ ದೀಕ್ಷಿತರ್, ಮಕ್ಕೂರ್ ಲಕ್ಷ್ಮಿನರಸಿಂಹಾಚಾರ್ಯ ಮೊದಲಾದ ಮಹಾವಿದ್ವಾಂಸರ ಉಪನ್ಯಾಸಗಳ ಸಾನ್ನಿಧ್ಯ—ಇವೆಲ್ಲವೂ ಅವರ ಬೌದ್ಧಿಕ ಹಾಗೂ ಆಧ್ಯಾತ್ಮಿಕ ಪಾಕ್ವತೆಯನ್ನು ರೂಪಿಸಿದ ಶಕ್ತಿಸ್ರೋತಗಳಾದವು. ಪರಿಣಾಮವಾಗಿ ಬಾಲ್ಯದಲ್ಲಿಯೇ ಪುರಾಣ, ವೇದಮಂತ್ರ, ದಿವ್ಯಪ್ರಬಂಧ ಮತ್ತು ಧರ್ಮಗ್ರಂಥಗಳ ಪರಿಚಯ ಸಾಧ್ಯವಾಯಿತು.
ಚೆನ್ನೈನ ಎನ್.ಎಸ್.ಎನ್. ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಪ್ರತಿಷ್ಠಿತ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಪಿಲಾನಿ)ನಲ್ಲಿ ಸಂಯೋಜಿತ ರಾಸಾಯನಿಕ ಇಂಜಿನಿಯರಿಂಗ್ (ಆನರ್ಸ್) ಹಾಗೂ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸುಮಾರು ಒಂದು ದಶಕ ಕಾಲ ಬಹುರಾಷ್ಟ್ರೀಯ ಕಂಪನಿಗಳಲ್ಲಿ ವೃತ್ತಿಜೀವನ ನಡೆಸಿದ ಅವರು, ಮುಂಬೈನಲ್ಲಿ ನಡೆದ ೩೬ ಗಂಟೆಗಳ ರಾಮಾಯಣ ಉಪನ್ಯಾಸ ಸರಣಿಯಿಂದ ದೇಶವ್ಯಾಪಿ ಖ್ಯಾತಿ ಗಳಿಸಿದರು. ಈ ಘಟನೆಯೇ ಕಾರ್ಪೊರೇಟ್ ವಲಯದ ಬಂಧನವನ್ನು ತ್ಯಜಿಸಿ ಅಧ್ಯಾತ್ಮ ಕ್ಷೇತ್ರವನ್ನು ತಮ್ಮ ಜೀವನದ ದಿಕ್ಕಾಗಿಸಲು ಕಾರಣವಾಯಿತು.
ಶ್ರೀ ಅಹೋಬಿಲ ಮಠದ ಆಚಾರ್ಯರು, ನಾವಲ್ಪಾಕ್ಕಂ ರಾಮಾನುಜ ತಾತಾಚಾರ್ಯ ಸ್ವಾಮಿಗಳು, ಸೆಟ್ಲೂರು ವತ್ಸಂಗಾಚಾರ್ಯ ಸ್ವಾಮಿಗಳು ಮೊದಲಾದ ಯತಿವರ್ಯರ ಸಾನ್ನಿಧ್ಯದಲ್ಲಿ ವೇದಾಂತ ಅಧ್ಯಯನ ನಡೆಸಿ, ಗಹನ ತತ್ವಗಳನ್ನು ಸಮಕಾಲೀನ ಬದುಕಿಗೆ ಅನ್ವಯಿಸುವ ವಿಶಿಷ್ಟ ಶೈಲಿಯಲ್ಲಿ ಅವರು ಪ್ರವಚನ ನೀಡುತ್ತಿದ್ದಾರೆ. ತಮಿಳು ಮಾತೃಭಾಷೆಯೊಂದಿಗೆ ತೆಲುಗು, ಕನ್ನಡ, ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿರುವ ಅವರು, ಮಲಯಾಳಂ ಹಾಗೂ ಪ್ರಾಕೃತಗಳಲ್ಲಿಯೂ ಪಾಂಡಿತ್ಯ ಹೊಂದಿದ ಬಹುಭಾಷಾ ಕೋವಿದರೆನಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಅಮೆರಿಕಾ, ಆಸ್ಟ್ರೇಲಿಯಾ ಹಾಗೂ ಯೂರೋಪ್ ಸೇರಿದಂತೆ ೨೩ ದೇಶಗಳ ೧೨೫ಕ್ಕೂ ಹೆಚ್ಚು ನಗರಗಳಲ್ಲಿ ೩೫೦೦ಕ್ಕೂ ಮೀರಿದ ಪ್ರವಚನಗಳನ್ನು ನೀಡಿ ಭಾರತೀಯ ಧಾರ್ಮಿಕ ಪರಂಪರೆಯ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಪಸರಿಸಿದ್ದಾರೆ. ಬರಹಗಾರರಾಗಿ ‘The Peerless Poet and Preceptor’ ಎಂಬ ವೇದಾಂತ ದೇಶಿಕರ ಬದುಕು–ತತ್ವಗಳನ್ನು ಪರಿಚಯಿಸುವ ಕಾಫಿ-ಟೇಬಲ್ ಕೃತಿ ಹಾಗೂ ವಾಲ್ಮೀಕಿ ರಾಮಾಯಣದ ನವ್ಯ ವಿವರಣೆಗಳಾದ ‘ರಾಮಾಯಣಮ್’ ಸಂಪುಟಗಳು ಮಹತ್ವದ ಸಾಹಿತ್ಯ ಕೊಡುಗೆಗಳಾಗಿವೆ.
ಸಂಸ್ಕೃತ ಭಾಷಾ ಸಂರಕ್ಷಣೆಯ ಉದ್ದೇಶದಿಂದ ‘ಶಾಕುಂತಲಾ’ ಸಂಸ್ಕೃತ ಚಲನಚಿತ್ರದ ನಿರ್ಮಾಣ–ನಿರ್ದೇಶನ, ‘ವೇದಾಂತ ದೇಶಿಕ’ ಚಿತ್ರದಲ್ಲಿ ಅಭಿನಯ, ‘ಪೆರಿಯವರ್’ ವೆಬ್ ಸರಣಿಯಲ್ಲಿ ಪಾಲ್ಗೊಳ್ಳುವಿಕೆ, ‘ಅಗ್ರೇ ಪಶ್ಯಾಮಿ’ ಮತ್ತು ‘ರಾಮಾಯಣ ಸುಧಾ’ ನೃತ್ಯರೂಪಕಗಳ ಮೂಲಕ ಸಂಗೀತ–ನೃತ್ಯ–ವೇದಾಂತಗಳ ಸಮನ್ವಯ—ಎಲ್ಲವು ಅವರ ಬಹುಮುಖ ಪ್ರತಿಭೆಯ ದರ್ಶನ.
ಹಿಂದೂ ದೇವಾಲಯಗಳ ಸ್ವಾತಂತ್ರ್ಯ, ಸಂರಕ್ಷಣೆ ಹಾಗೂ ಜೀರ್ಣೋದ್ಧಾರಕ್ಕಾಗಿ ‘ದೇಶಿಕ ದಯಾ’ ಟ್ರಸ್ಟ್ ಮೂಲಕ ಕೈಗೊಂಡಿರುವ ಸಮಾಜಮುಖಿ ಕಾರ್ಯಗಳು ಸನಾತನ ಧರ್ಮದ ಮೇಲಿನ ಅವರ ಶ್ರದ್ಧೆ ಮತ್ತು ಕಳಕಳಿಯ ಪ್ರತೀಕ. ಅನೇಕ ರಾಷ್ಟ್ರೀಯ ಹಾಗೂ ಪ್ರತಿಷ್ಠಿತ ಪ್ರಶಸ್ತಿಗಳು ಇವರ ಸಾಧನೆಯ ಸನ್ಮಾನದ ಸರಮಾಲೆಯಾಗಿವೆ.
ಈ ಎಲ್ಲ ಸಾಧನೆಗಳ ಹಿಂದಿನ ಚೈತನ್ಯ ಶಕ್ತಿ ಧರ್ಮಪತ್ನಿ, ಸಂಗೀತ ವಿದುಷಿ ಶ್ರೀಮತಿ ಸುಮಿತ್ರಾ ಶ್ರೀಧರನ್ ಹಾಗೂ ಪುತ್ರಿ ಕ್ಷಿತಿಜಾ—ಒಂದು ಸುಸಂಸ್ಕೃತ, ಸಂತೃಪ್ತ ಕುಟುಂಬ.
ಆಧ್ಯಾತ್ಮಿಕ ತಳಹದಿಯ ಮೇಲೆ ಅಕ್ಷರ–ಆರೋಗ್ಯ ಕ್ಷೇತ್ರಗಳ ಸಮೃದ್ಧಿಗಾಗಿ ಶ್ರಮಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನವು, ಬೆಂಗಳೂರಿನ ಜಯನಗರ ೪ನೇ ಬಡಾವಣೆಯ ಯುವಪಥ ಸಭಾಂಗಣದಲ್ಲಿ, ಸನಾತನ ಧರ್ಮ ಪರಂಪರೆಗೆ ಅಮೂಲ್ಯ ಕೊಡುಗೆ ನೀಡುತ್ತಿರುವ ಶ್ರೀ ದುಷ್ಯಂತ್ ಶ್ರೀಧರ್ ಅವರಿಗೆ ‘ಪಾಂಚಜನ್ಯ ಪುರಸ್ಕಾರ ೨೦೨೫’ ಪ್ರದಾನಿಸುವ ಮೂಲಕ ತನ್ನ ಹೆಮ್ಮೆಯನ್ನು ಹೆಚ್ಚಿಸಿಕೊಂಡಿದೆ.
ವಿವರಗಳಿಗೆ ಸಂಪರ್ಕಿಸಿ : ೯೮೪೫೦ ೭೫೨೫೦

