ಸಿಂದಗಿ; ರಾಜಕಾರಣಿಗಳಿಂತ ಹೆಚ್ಚು ಶ್ರೇಷ್ಠ ಆಟಗಾರರ ಮೇಲೆಯೆ ಅಭಿಮಾನವಿದೆ ಸ್ಪರ್ಧಾಳುಗಳು ಸೋಲು ಗೆಲುವುನ್ನು ಲೆಕ್ಕಿಸದೇ ಕ್ರೀಡೆಗಳಲ್ಲಿ ಬಾಗವಹಿಸುವುದು ಬಹುಮುಖ್ಯ ಅಲ್ಲದೆ ಕ್ರೀಡೆಗಳು ನಮ್ಮ ಮಾನಸಿಕ ಮತ್ತು ದೈಹಿಕ ಸ್ಥಿತಿಯನ್ನು ವೃದ್ದಿ ಮಾಡುತ್ತದೆ. ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ(ಪದವಿ ಪೂರ್ವ) ಹಾಗೂ ಎಚ್.ಜಿ.ಪದವಿ ಪೂರ್ವ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜುಗಳ ಸಹಯೋಗದಲ್ಲಿ ೨೦೨೫-೨೬ ನೇ ಸಾಲಿನ ಸಿಂದಗಿ, ಆಲಮೇಲ ಮತ್ತು ದೇವರಹಿಪ್ಪರಗಿ ತಾಲೂಕುಗಳ ಪದವಿ ಪೂರ್ವ ಕಾಲೇಜುಗಳ ತಾಲೂಕಾ ಮಟ್ಟದ ಮೇಲಾಟಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿದೆ. ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು. ನಮ್ಮ ದೇಶದ ಮೂಲ ಕ್ರೀಡೆ ಹಾಕಿ ಮರೆಮಾಚಿ ಹೋಗುತ್ತಿದೆ. ನಶಿಸಿ ಹೋಗುತ್ತಿರುವ ಕ್ರೀಡೆಗಳನ್ನು ದೈಹಿಕ ಶಿಕ್ಷಕರು ಶಾಲಾ ಕಾಲೇಜುಗಳಲ್ಲಿ ಹೆಚ್ಚು ಹೆಚ್ಚಾಗಿ ಮಕ್ಕಳಿಗೆ ಪ್ರೇರೆಪಿಸಿ ಭಾಗವಹಿಸುವಂತೆ ಮಾಡಬೇಕು. ಶಿಕ್ಷಣದಷ್ಟೇ ವಿವಿಧ ಕ್ರೀಡೆಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ವಿಜಯಪುರದ ಉಪನಿರ್ದೇಶಕ ಡಾ ಸಿ.ಕೆ ಹೊಸಮನಿ ಮಾತನಾಡಿ, ಕ್ರೀಡಾಪಟುಗಳು ಪಾರದರ್ಶಕವಾಗಿ, ನ್ಯಾಯೋಚಿತವಾಗಿ ಆಟವಾಡಬೇಕು. ಸೋಲು-ಗೆಲವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಈ ವೇಳೆ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾದ ವಿಜಯಪುರದ ಉಪನಿರ್ದೇಶಕ ಇಲಾಖೆಯ ಶಾಖಾಧಿಕಾರಿ ಪ್ರಕಾಶ ಗೊಂಗಡಿ ಅವರಿಗೆ ಕಾಲೇಜಿನ ಪರವಾಗಿ ಶಾಸಕರು ಗೌರವಿಸಿದರು.
ಈ ವೇಳೆ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಪಾಚಾರ್ಯರ ಮಹಾಮಂಡಳದ ಕಾರ್ಯದರ್ಶಿ ಕೆ.ಎ.ಉಪ್ಪಾರ, ಜಿಲ್ಲಾ ದೈಹಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ಶಾಂತೇಶ ದುರ್ಗಿ, ನಿವೃತ್ತ ದೈಹಿಕ ಉಪನ್ಯಾಸಕರಾದ ಕೆ.ಎಚ್.ಸೋಮಾಪೂರ, ಎಚ್.ಎಮ್.ಉತ್ನಾಳ ಹಾಗೂ ಇತರರು ಇದ್ದರು.
ದೈಹಿಕ ಉಪನ್ಯಾಸಕ ಎಸ್.ಎ.ಬಸರಕೋಡ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು, ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ದೈಹಿಕ ಉಪನ್ಯಾಸಕರು ಮತ್ತು ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.

