Homeಸುದ್ದಿಗಳುಮೂಡಲಗಿಯಲ್ಲಿ ಶಾಂತಿ ಸೌಹಾರ್ದ ಸಭೆ

ಮೂಡಲಗಿಯಲ್ಲಿ ಶಾಂತಿ ಸೌಹಾರ್ದ ಸಭೆ

ಮೂಡಲಗಿ: ಎಲ್ಲ ಧರ್ಮಗಳಲ್ಲಿ ಸೌಹಾರ್ದತೆ ಮೂಡಿಸಿ ಸಮಾಜದಲ್ಲಿ ಶಾಂತಿಯುತವಾಗಿ ಬಾಳುವಂತೆ ಮಾಡಲು ಎಲ್ಲರೂ ಸಹಕರಿಸಬೇಕು. ಅದಕ್ಕಾಗಿ ನಾವು ಮಾನ್ಯ ನ್ಯಾಯಾಲಯದ ಆದೇಶ ಪಾಲಿಸಬೇಕು ಎಂದು ಕಾರ್ಮಿಕ ಇಲಾಖೆಯ ಆಯುಕ್ತ ಹಾಗೂ ಶಾಂತಿಪಾಲನಾ ಸಮಿತಿಯ ನೋಡಲ್ ಅಧಿಕಾರಿ ಸಿಂಧಿಹಟ್ಟಿ ಹೇಳಿದರು.

ರಾಜ್ಯದಲ್ಲಿ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮೂಡಲಗಿಯ ತಹಶೀಲ್ದಾರ ಕಚೇರಿಯಲ್ಲಿ ಕರೆಯಲಾದ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.

ನಾವೆಲ್ಲರೂ ಮೊದಲಿನಂತೆ ಶಾಂತಿಯಿಂದ ಇರಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದರಿಂದ ಎಲ್ಲ ಸಮಾಜದ ಜನರು ಅವರಿಗೆ ಯಾವುದೇ ತೊಂದರೆಯಾಗದಂತೆ ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ತಹಶೀಲ್ದಾರ ಡಿ ಜಿ ಮಹಾತ್ ಮಾತನಾಡಿ, ಯಾರೋ ನಾಲ್ಕು ಜನ ಮಾಡಿದ ತಪ್ಪಿಗೆ ಇಡೀ ರಾಜ್ಯ ಅಥವಾ ಇಡೀ ದೇಶ ಅನುಭವಿಸುವಂತೆ ಆಗಬಾರದು. ವಿದ್ಯಾರ್ಥಿಗಳ ಶಿಕ್ಷಣ ಹಾಳಾಗಬಾರದು. ಅದಕ್ಕಾಗಿ ನಾವು ಶಾಂತಿ ಕಾಪಾಡಬೇಕು ಎಂದರು.

ಬಿಇಓ ಅಜಿತ್ ಮೆನ್ನಿಕೇರಿ ಮಾತನಾಡಿ, 87 ಪ್ರೌಢ ಶಾಲೆಗಳಿಗೆ ಪರೀಕ್ಷೆಗಳು ನಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ಇವೆ ಎಲ್ಲಾ ಪ್ರೌಢ ಶಾಲೆಗಳಲ್ಲಿ ಶಾಂತಿ ಸೌಹಾರ್ದ ಸಭೆ ನಡೆಸುವ ಉದ್ದೇಶವಿದೆ ಎಂದರು.

ಶ್ರೀಧರ ಬೋಧ ಸ್ವಾಮೀಜಿ ಮಾತನಾಡಿ, ಒಂದೇ ಮನೆಯಲ್ಲಿ ಸಹೋದರರಲ್ಲಿ ಜಗಳ ಬಂದಂತೆ ಈಗ ವಿವಾದ ಉಂಟಾಗಿದೆ ಅದನ್ನು ನಾವು ಪರಸ್ಪರರಲ್ಲಿಯೆ ಬಗೆಹರಿಸಿಕೊಳ್ಳೋಣ. ಎಲ್ಲಾ ಧರ್ಮದ ಬಾಂಧವರು ತಂತಮ್ಮ ಮಕ್ಕಳಿಗೆ ಹೇಳುವಂಥ ಪ್ರಬುದ್ಧತೆ ಹೊಂದಿದ್ದಾರೆ, ಹೇಳೋಣ. ಸಮಾಜದಲ್ಲಿ ಶಾಂತಿ ನೆಲೆಸಲು ಎಲ್ಲರೂ ಸೇರಿ ಶ್ರಮಿಸೋಣ ಎಂದರು.

ಸಿಪಿಐ ವೆಂಕಟೇಶ ಮುರನಾಳ ಮಾತನಾಡಿ, ಮೂಡಲಗಿಯಲ್ಲಿ ಪೊಲೀಸರು ನೆಮ್ಮದಿಯಿಂದ ಇದ್ದಾರೆ ಎಂದರೆ ಅದಕ್ಕೆ ಎಲ್ಲ ಸಮಾಜದ ಜನರ ಸಹಕಾರ ಕಾರಣ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳು ಹರಿದಾಡುತ್ತಿದ್ದರೆ ನಮಗೆ ಸಾರ್ವಜನಿಕರು ಸೂಕ್ಷ್ಮವಾಗಿ ತಿಳಿಸಿದರೆ ನಾವು ಯಾವುದೇ ಅಹಿತಕರ ಘಟನೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಅಮೃತ ಬೋಧ ಸ್ವಾಮೀಜಿ ಮಾತನಾಡಿದರು.

ಪುರಸಭಾ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಭೆಯಲ್ಲಿ ಪುರಸಭೆಯ ಎಲ್ಲ ಸದಸ್ಯರು ನಾಗರಿಕರು ಪಾಲ್ಗೊಂಡಿದ್ದರು.
ವಿವಿಧ ಸಮಾಜದ ಹಿರಿಯರು ಮಾತನಾಡಿ ಪರಸ್ಪರ ಸೌಹಾರ್ದದಿಂದ ಇರುವುದಾಗಿ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮೆನ್ನಿಕೇರಿ ನಿರೂಪಿಸಿ, ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group