ಬಸವ ಬಳ್ಳಿ ಹಬ್ಬಿಸಿ, ಪ್ರವಚನ ಪಿತಾಮಹರಾದ ಮಣಿಗವಳ್ಳಿಯ ಮಾಣಿಕ್ಯ

Must Read

“ಆನೆಯು ಆ ದಾರಿಯಲ್ಲಿ ಹೋಯೆತ್ತೆಂದಡೆ
ಆಡೂ ಆ ದಾರಿಯಲ್ಲಿ ಹೋಯಿತ್ತೆನ್ನಬಹುದೆ?
ಸಂಗನ ಶರಣರಿಗೆ ಆನು ಸರಿಯೆಂದುಗಳಹಲುಬಹುದೆ?
ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೆ?
ಹೇಳಾ ಕೂಡಲಸಂಗಮದೇವಾ”/

ಲಿಂಗಾಯತ ಧರ್ಮ ಮತ್ತು ಬಸವ ತತ್ವ ಬೆಳೆಸಲು ಆನೆಯಾಗಿ ಶರಣರ ಚಳವಳಿಯ ಮಾರ್ಗ ಹಿಡಿದು ಸಾದನೆಯ ಶಿಖರಕ್ಕೇರಿದ ಲಿಂಗಾನಂದ ಸ್ವಾಮೀಜಿ,ತಮ್ಮ ಪ್ರಖರ ಪ್ರವಚನದ ಮೂಲಕ ಶರಣರ ಬದುಕನ್ನು ಜೀವಂತವಾಗಿ ಸಾಕ್ಷಿಕರಿಸಿದರು. ವಚನ ಸಾಹಿತ್ಯಕ್ಕೆ ಮರು ಜನ್ಮ ನೀಡುವಲ್ಲಿ ಹಾಗೂ ಲಿಂಗಾಯತ ಧರ್ಮಕ್ಕೆ ಹೊಸ ಪಥ ಸೃಷ್ಠಿಸುವಲ್ಲಿ ಅವರು ಅನುಭವಿಸಿದ ನೋವು, ಅವಮಾನ, ಕಿರುಕುಳ ಹೇಳಲು ಅಸಾಧ್ಯ. ಅವರ ಬಸವ ತತ್ವದ ಕಾರ್ಯದಲ್ಲಿ ನಿತ್ಯ ಹೊಟ್ಟೆ ತುಂಬ ಪ್ರಸಾದ ಸ್ವೀಕರಿಸುತ್ತಿರಲಿಲ್ಲ. ಅಷ್ಟೊಂದು ಕಷ್ಟ, ಕಾರ್ಪಣ್ಯ ಹಾಗೂ ಪರಿಶ್ರಮದ ಮೂಲಕ ಲಿಂಗಾಯತ ಧರ್ಮಕ್ಕೆ ಸ್ಫೂರ್ತಿ ನೀಡಿದ್ದು ನಿಜಕ್ಕೂ ಅವಿಸ್ಮರಣೀಯ!

ಮೂಲತಃ ವಿಜಯಪುರ ಜಿಲ್ಲೆಯ ಅಂದಿನ ಮಣಿಗವಳ್ಳಿಯ ಇಂದಿನ ಮನುಗೂಳಿ ಗ್ರಾಮದಲ್ಲಿ ಲಿಂಗಾಯತ ಪಂಚಮಸಾಲಿ ಕುಟುಂಬದ ಮಲ್ಲಪ್ಪ ಮತ್ತು ಕಲ್ಲಮ್ಮ ಕಪ್ಪರದ ದಂಪತಿಗಳ ಪುತ್ರನಾಗಿ ಸಪ್ಟಂಬರ್ ೧೫,೧೯೩೧ ರಂದು ಗಣೇಶ ಚತುರ್ಥಿಯ ದಿನ ಜನಿಸಿದರು. ಹುಟ್ಟೂರಲ್ಲಿ ಪ್ರಾಥಮಿಕ ಹಾಗೂ ವಿಜಯಪುರದ ಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದರು. ಆಗ ರಾಜ್ಯದಲ್ಲಿ ಸ್ವಾತಂತ್ರ್ಯ ಚಳವಳಿ ಕಾವೇರಿತ್ತು. ಭೂಗತರಾದ ಸ್ಥಳೀಯ ಸ್ವಾತಂತ್ರö್ಯ ಹೋರಾಟಗಾರರಿಗೆ ಸಹಾಯಕನಾಗಿದ್ದ ಸಂಗಮೇಶ ಕಪ್ಪರದ, ಕ್ರಮೇಣ ಸ್ವಾತಂತ್ರö್ಯ ಯೋಧರ ಒಟನಾಟದಿಂದ ಬೆಳಗಾವಿ ಲಿಂಗರಾಜ ಕಾಲೇಜು ಪ್ರವೇಶಿಸಿ ತನ್ನ ಬಿಎ ಪದವಿ ವ್ಯಾಸಂಗಕ್ಕೆ ತೊಡಗಿದನು. ಪ್ರಾಯದ ಸಂಗಮೇಶ ಬೆಳಗಾವಿಯಲ್ಲಿ ಕಾರ್ಲಮಾರ್ಕ್ಸನ ಕಮ್ಯೂನಿಸಂ ಸಿದ್ಧಾಂತಕ್ಕೆ ದಾಸನಾದ. ಆ ತತ್ವದಿಂದ ನಾಸ್ತಿಕನಾಗಿ ಸಾಮಾಜಿಕ ಅಂಧ ಶ್ರದ್ಧೆಗಳ ಬಗ್ಗೆ ತೀವ್ರ ಬೇಸರಗೊಂಡ. ಭೂಮಿಯ ಮೇಲೆ ದೇವರಿಲ್ಲ. ತನ್ನ ಸ್ವಾರ್ಥ ಸುಖದ ಬದುಕಿಗಾಗಿ ಮಾನವರು ಸೃಷ್ಠಿಸಿಕೊಂಡಿದ್ದೆಲ್ಲವೂ ಶಾಶ್ವತವಲ್ಲ ಎಂದು ತಿಳಿದು ವಾದಿಸ ತೊಡಗಿದ. ವಾರಕ್ಕೊಮ್ಮೆ ಸ್ನಾನ ಗೈಯ್ಯುತ್ತಿದ್ದ. ನಿತ್ಯ ಶುಭ್ರ ಬಟ್ಟೆ ಧರಿಸುತ್ತಿರಲಿಲ್ಲ. ಭಸ್ಮ ಮತ್ತು ರುದ್ರಾಕ್ಷಿ ಧಾರಣೆ ತಿಳಿದಿರಲಿಲ್ಲ. ಆಸ್ತಿಕರ ಆರಾಧನೆ ಮತ್ತು ಪ್ರಾರ್ಥನೆಗಳನ್ನು ವಿರೋಧಿಸಿ, ಅವರಿಂದ ದೂರ ಉಳಿಯುತ್ತಿದ್ದ.

ಅದೇ ಕಾಲೇಜಿನ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಪ್ರೊ.ರಾಜಗೋಪಾಲ ಎಂಬಾತ, ಒಂದಿನ ಸಂಗಮೇಶನನ್ನು ತಮ್ಮ ಬಳಿ ಕರೆದು ಮಾರ್ಮಿಕ ಉಪದೇಶ ನೀಡಿದ್ದರು. ಅದರ ಪರಿಣಾಮವಾಗಿ ನಾಸ್ತಿಕನಾಗಿದ್ದ ಸಂಗಮೇಶ ಆಸ್ತಿಕನಾಗಿ ಪರಿವರ್ತನೆಗೊಂಡ. ಪದವಿ ಪೂರೈಸಿದ ಬಳಿಕ ವಿಜಯಪುರದಲ್ಲಿ ಮನೆ ಪಾಠ (ಟ್ಯೂಷನ್) ಹೇಳಿ ಉಪಜೀವನ ಮಾಡುತ್ತಿದ್ದ. ಕ್ರಮೇಣ ವಿಜಯಪುರದ ಪ್ರೌಢ ಶಾಲೆಯೊಂದರಲ್ಲಿ ಅರೆಕಾಲಿಕ ಶಿಕ್ಷಕನಾಗಿ ನೇಮಕವಾಗಿದ್ದ. ತಮ್ಮ ಬಿಡುವಿನ ವೇಳೆಯಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಅಂದಿನ ವೇದಾಂತ ಕೇಸರಿ ಶ್ರೀಮಲ್ಲಿಕಾರ್ಜುನ ಸ್ವಾಮಿಗಳವರ ಪ್ರವಚನ ಕೇಳಲು ತೊಡಗಿದ. ಅವರ ಸ್ನೇಹಿತನೋರ್ವ ಸ್ವಾಮೀಜಿ ದರ್ಶನಕ್ಕೆ ಬಂದು, ಸಂಗಮೇಶ ಕಪ್ಪರದ ಬಸವ ತತ್ವ ಅನುಸರಿಸುತ್ತಿಲ್ಲ, ಲಿಂಗಾರ್ಚನೆ ಮಾಡುತ್ತಿಲ್ಲವೆಂದು ಚಾಡಿ ಹೇಳಿದ್ದಕ್ಕೆ, ಸ್ವಾಮೀಜಿ ಸಂಗಮೇಶನಿಗೆ ತಮ್ಮ ಆಶ್ರಮದಲ್ಲೇ ಸ್ನಾನ ಗೈಯ್ಯಲು, ತಮ್ಮ ಎದುರಲ್ಲೇ ಇಷ್ಟಲಿಂಗ ಪೂಜಿಸಲು ತೊಡಗಿಸಿದ್ದರು. ಕೆಲವು ದಿನಗಳಾದ ನಿತ್ಯ ಇಷ್ಟಲಿಂಗ ಪೂಜೆಯಿಂದ ಏನಾಗುತ್ತಿದೆ ಎಂದು ಕೇಳಿದಾಗ, “ಆನಂದ” ಆಗುತ್ತಿದೆ ಎಂದು ಉತ್ತರಿಸಿದನು. ಅಂದಿನಿಂದ ಸಂಗಮೇಶ ಬದಲಾಗಿ ನೀ “ಲಿಂಗಾನಂದ” ಆಗು ಎಂದು ಹೆಸರನ್ನು ಬದಲಿಸಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ತತ್ವಶಾಸ್ತ್ರ ಅಧ್ಯಯನಕ್ಕಾಗಿ ಶಿಫಾರಸುಗೊಳಿಸಿದರಂತೆ.

ಧಾರವಾಡದಲ್ಲಿದ್ದಾಗ ನವಕಲ್ಯಾಣ ಮಠದ ಶ್ರೀಕುಮಾರ ಸ್ವಾಮಿಗಳ ಪ್ರಭಾವ ಬೆಳೆದು, ಲಿಂಗಾನಂದ(ಸಂಗಮೇಶ) ಕ್ರಮೇಣ ಖಾವಿ ಧರಿಸಿ, ತನ್ನ ಸ್ನೇಹಿತರಿಗೆ ಹಾಗೂ ಮಠದ ಭಕ್ತರಿಗೆ ಮುಜುಗರಗೊಳಿಸುತ್ತಿದ್ದನಂತೆ. ಕುಮಾರಸ್ವಾಮಿಗಳ ಪ್ರವಚನ ಆಲಿಸುತ್ತ ಸಂತನಾಗಿ ವಿವಿಧಡೆ ಸಂಚರಿಸಿದರು. ೧೯೫೫ ಏಪ್ರೀಲ್ ೨೫ರ ಬಸವ ಜಯಂತಿ ದಿನದಂದು ಆಧಾತ್ಮಿಕ ಮಾನಸ ಸಂತರಾದರು. ೧೯೫೬ ನವೆಂಬರ ೧೯ ರಿಂದ ನಿರಂತರ ಪ್ರವಚನ ಕಾರ್ಯದಲ್ಲಿ ತೊಡಗಿದರು. ಸ್ವಪ್ರೇರೆಣೆಯಿಂದ ಸಂಸಾರಿಕ ಜೀವನ ತೊರೆದು “ಲಿಂಗಾನಂದ ಸ್ವಾಮಿ”ಗಳಾದರು. ೧೯೬೧ ಆಗಷ್ಟ ೭ರಂದು ಮೈಸೂರು ಪ್ರಾಂತ್ಯದ ಸುತ್ತೂರು ಮಠದ ಅಂದಿನ ಜಗದ್ಗುರುಗಳಾದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮಿಗಳಿಂದ “ಜಂಗಮ (ಸನ್ಯಾಸ) ಧೀಕ್ಷೆ ” ಪಡೆದರು.

ಅದು ೧೯೬೨ನೆ ವರ್ಷ ಇರಬಹುದು. ದಾವಣೆಗೆರೆಯ ಚನ್ನಗಿರಿ ರಂಗಪ್ಪ ಕಲ್ಯಾಣ ಮಂಟಪದಲ್ಲಿ ಲಿಂಗಾನಂದ ಸ್ವಾಮೀಜಿಯವರು ಪ್ರಭುಲಿಂಗ ಲೀಲೆ ಕುರಿತು ಪ್ರವಚನ ಮಾಡುತ್ತಿದ್ದರು. ಅಪಾರ ಲಿಂಗಾಯತ ಭಕ್ತ ಸಮೂಹ ನೆರೆದಿತ್ತು. “ಜಂಗಮ” ವಿಷಯ ಕುರಿತು ಹೇಳುತ್ತಿದ್ದಾಗ ಅನಾಮಿಕ ಕುಹಕಿಯೋರ್ವ ಕಲ್ಲು ತೂರಿದ. ಆ ಕಲ್ಲು ಪ್ರವಚನ ನಿರತ ಲಿಂಗಾನಂದ ಸ್ವಾಮೀಜಿಯ ಹಣೆಗೆ ತಟ್ಟಿ, ತೀವ್ರ ರಕ್ತ ಸ್ರಾವವಾಗಿಸಿತು. ತಮ್ಮ ಕೈವಸ್ತ್ರದಿಂದ ಹಾಗೆ ಹಿಡಿದು ಹೇಳಬೇಕಾದ ಜಂಗಮ ಮೂಲದ ಕುರಿತಾದ ಪ್ರವಚನ ಪೂರ್ಣಗೊಳಿಸಿದ್ದರು.

“ಎತ್ತೆತ್ತ ನೋಡಿದರತ್ತ ಬಸವವೆಂಬ ಬಳ್ಳಿ
ಎತ್ತಿ ನೋಡಿದರೆ ಲಿಂಗವೆಂಬ ಗೊಂಚಲು
ಒತ್ತಿ ಹಿಂಡಿದರೆ ಭಕ್ತಿ ಎಂಬ ರಸ”/

ಹೀಗೆ ನಿರಂತರ ಪ್ರವಚನ ಕಾರ್ಯದಲ್ಲಿ ತೊಡಗಿ ಪ್ರವಚನ ಪಿತಾಮಹರಾದರು. ಅಪೂರ್ವ ವಾಗ್ಮಿಯಾಗಿ ಅಭಿನವ ವಿವೇಕಾನಂದ ಎನಿಸಿದರು. ೧೯೭೦ ಏಪ್ರೀಲ್ ೨೧ರಂದು ಜಗತ್ತಿನ ಪ್ರಥಮ ಮಹಿಳಾ ಜಗದ್ಗುರು ಪೀಠವನ್ನು ಸ್ಥಾಪಿಸಿ, ಮಾತೆ ಮಹಾದೇವಿಯವರನ್ನು ನೇಮಿಸಿದರು. ೧೯೮೮ ರಿಂದ ಕೂಡಲಸಂಗಮದಲ್ಲಿ ಶರಣ ಮೇಳ ಆಯೋಜಿಸುತ್ತ, ೧೯೯೨ ಜನವರಿ ೧೩ ರಂದು ಬಸವ ಧರ್ಮ ಪೀಠ ಸ್ಥಾಪಿಸಿದರು. ೧೯೬೦ರಲ್ಲಿ ಧಾರವಾಡದಿಂದ ಸುಯಿದಾನ ಸುಗ್ರಂಥ ಎಂಬ ಶರಣ ಸಾಹಿತ್ಯದ ಪ್ರಕಾಶನ ಆರಂಭಿಸಿ, ೨೫೦ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದರು. ಅವರ ಹಲವು ಕೃತಿಗಳು ಈಗ ೧೦ ಬಾರಿ ಮರು ಮುದ್ರಣಗೊಂಡಿದ್ದು ಗಮನಿಸಿದರೆ, ಅವರ ಸಾಹಿತ್ಯದ ಪ್ರಖರಕ್ಕೆ ಕೈಗನ್ನಡಿಯಾಗಿದೆ. ಬೆಂಗಳೂರಿನ ರಾಜಾಜಿ ನಗರದಲ್ಲಿ ಬಸವ ಮಂಟಪ, ಕುಂಬಳಗೋಡದಲ್ಲಿ ಬಸವ ಗಂಗೋತ್ರಿ, ಅಖಿಲ ಭಾರತ ಲಿಂಗಾಯತ ಮಹಾ ಸಭಾ, ರಾಷ್ಟ್ರೀಯ ಬಸವ ದಳ, ಧಾರವಾಡದಲ್ಲಿ ಅಕ್ಕ ಮಹಾದೇವಿ ಆಶ್ರಮ ಸ್ಥಾಪಿಸಿದರು. ವಿಶ್ವ ಕಲ್ಯಾಣ ಮಿಷನ್ ಸಂಸ್ಥೆಯ ಮೂಲಕ ಅವರ ಪ್ರವಚನಗಳ ಧ್ವನಿ, ದೃಶ್ಯ, ಶ್ರಾವ್ಯ ಸುರುಳಿಗಳು ಪ್ರಕಟವಾಗುತ್ತಿವೆ.

ಹೀಗೆ ಲಿಂಗಾಯತ ಧರ್ಮ, ಬಸವ ತತ್ವ ಹಾಗೂ ಶರಣ ಸಾಹಿತ್ಯವನ್ನು ಉಚ್ರಾಯಗೊಳಿಸುತ್ತ, ಹಿರಿಯೂರಿನಲ್ಲಿ ಪ್ರವಚನ ನಿರತರಾದ ಸಂದರ್ಭದಲ್ಲಿ ೧೯೯೫ ಜೂನ್ ೩೧ ರಂದು ಉರಿಯುಂಡ ಕರ್ಪೂರದಂತೆ ಪ್ರಾಣ ತ್ಯಾಗ ಗೈದು, ಬಸವೈಕ್ಯವಾದರು. ಪ್ರತಿ ಗಣೇಶ ಚತುರ್ಥಿಯ ದಿನ ತಮ್ಮ ಜನ್ಮ ದಿನವಾಗಿದ್ದು ಅಂದು ರಾಷ್ಟ್ರೀಯ ಬಸವ ದಳದ ಸಂಸ್ಥಾಪನಾ ದಿನವನ್ನಾಗಿ ಆಚರಿಸಲು ಅವರೆ ಆರಂಭಿಸಿದರು.


– ಡಾ. ಸತೀಶ ಕೆ. ಇಟಗಿ
ಪತ್ರಿಕೋದ್ಯಮ ಉಪನ್ಯಾಸಕ
ಅಂಚೆ: ಕೋಳೂರ-೫೮೬೧೨೯, ತಾ: ಮುದ್ದೇಬಿಹಾಳ,
ಜಿ: ವಿಜಯಪುರ (ಕರ್ನಾಟಕ ರಾಜ್ಯ)
ಮೊ: ೯೨೪೧೨೮೬೪೨೨
Email – satishitagi10@gmail.com

LEAVE A REPLY

Please enter your comment!
Please enter your name here

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group