ಬೀದರ – ಮಕರ ಸಂಕ್ರಾಂತಿ ನಿಮಿತ್ತ ಗಾಳಿಪಟ ಹಾರಿಸುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಯುವಕ ಸಂಜಿಕುಮಾರ ಎಂಬುವವರ ಕುತ್ತಿಗೆಗೆ ಗಾಳಿ ಪಟದ ಮಾಂಜಾ(ಚೀನಿ ಮಾಂಜಾ) ದಾರ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದ ಸಂಜಕುಮಾರ ಗುಂಡಪ್ಪ (48) ಮೃತರು ಎಂದು ತಿಳಿದು ಬಂದಿದೆ. ಮೃತರಿಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.
ಸಂಜಿವಕುಮಾರ್ ಬೈಕ್ ಮೇಲೆ ಹೋಗುವಾಗ ಗಾಳಿ ಪಟದ ಮಾಂಜಾ ದಾರ ಕಾಣಿಸದೆ ನೇರವಾಗಿ ಅವರ ಕುತ್ತಿಗೆ ಸಿಲುಕಿದೆ. ಮಾಂಜಾ ಸಿಲುಕಿದ ರಭಸಕ್ಕೆ ಬೈಕ್ ಮೇಲಿಂದ ಬಿದ್ದ ಯುವಕ ಸಂಕ್ರಾಂತಿ ಯಂದೆ ಸಾವಿನ ಮನೆಯ ಕದ ತಟ್ಟಿದ್ದಾರೆ.
ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರೆಯಲು ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಮಾಂಜಾ ದಾರ ಕುತ್ತಿಗೆಗೆ ತಗುಲಿ ಕುತ್ತಿಗೆ ಕೊಯ್ದುಕೊಂಡಿದೆ. ಬೈಕ್ ಮೇಲಿಂದ ಕೆಳಗೆ ಬಿದ್ದು ಕೆಲಹೊತ್ತು ರಕ್ತದ ಮಡವಿನಲ್ಲಿ ಹೊರಳಾಡಿ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಂಕ್ರಾಂತಿ ಆಚರಣೆ ವೇಳೆ ಚಿಟಗುಪ್ಪ ತಾಲೂಕಿನಲ್ಲಿ ಗಾಳಿಪಟಗಳನ್ನು ಹಾರಿಸುವ ಸಂಪ್ರದಾಯ ಇದೆ. ಈ ಸಂಬಂಧ ಎರಡು ದಿನಗಳ ಹಿಂದೆ ಓರ್ವ ಬಾಲಕನ ಕೈಗೆ ಗಾಳಿಪಟದ ದಾರ ಸಿಲುಕಿ ಗಂಭೀರ ಗಾಯಗೊಂಡಿದ್ದ ಘಟನೆ ನಡೆದಿತ್ತು. ಅದನ್ನು ಮನಗಂಡು ತಹಸೀಲ್ದಾರ್ ಮಂಜುನಾಥ ಪಾಂಚಾಳ ಅವರು ತಾಲೂಕಿನಾದ್ಯಂತ ಗಾಳಿಪಟ ಹಾರಿಸುವ ವೈರ್ ಮಾಂಜ ದಾರ ಮಾರಾಟ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು.ಆದರೂ ಈಗ ಮಾಂಜಾ ದಾರವನ್ನು ಉಪಯೋಗಿಸಿದ್ದರಿಂದ ವ್ಯಕ್ತಿಯೊಬ್ಬರು ಜೀವ ತೆತ್ತಿದ್ದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಾಣ ಘಾತುಕವಾಗಿರುವ ಮಾಂಜಾ ದಾರವನ್ನು ಸಂಪೂರ್ಣ ನಿಷೇಧ ಮಾಡಬೇಕು ಎಂದು ಸಾರ್ವಜನಿಕರಿಂದ ಒತ್ತಡ ಹೆಚ್ಚಾಗಿದೆ.
ಈ ಮಧ್ಯೆ ಮಾಂಜಾ ದಾರವನ್ನು ಗಾಳಿಪಟಕ್ಕೆ ಬಳಸುವುದನ್ನು ನಿಷೇಧಿಸಲಾಗಿದ್ದು ಯಾರಾದರೂ ಮಾರಾಟ ಮಾಡಿದರೆ, ಬಳಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹೇಳಿದರು.
ಘಟನೆಯ ಕುರಿತು ಮನ್ನಾಏಖ್ಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ

