ಏನೆಂದು ಹೇಳಲಿ….
ಬಹಳಷ್ಟು ಸಲ ಎದುರಾದವರೆಲ್ಲ ಕೇಳುತ್ತಾರೆ ಯಾಕೆ ಬರೆಯುತ್ತಿಲ್ಲ ಈಗೀಗ
ಅವರ ಪ್ರಶ್ನೆಗಳಿಗೆಲ್ಲ ಉತರಿಸಲು ಉತ್ತರಗಳಿಲ್ಲ ನನ್ನಲ್ಲಿ
ಬರೆಯಲು ಭಾವನೆಗಳು ತುಂಬಿ ಬರಬೇಕು
ಖಾಲಿ ಹಾಳೆಯ ಜೊತೆಗೆ ಪೆನ್ನು ಪೇಪರುಗಳಿರಬೇಕು.
ಕೇಳಿದವರಿಗೆಲ್ಲ ಹೇಳುವದೇನು?? ನಿರ್ಭಾವುಕನಾಗುತ್ತಿದ್ದೇನೆ ನಾನು
ಬರೆಯಲು ಪ್ರೇರೇಪಿಸಿದ್ದು ಹತ್ತು ಹಲವು ಸಂಗತಿಗಳಿರಬಹುದು
ಬರೆಯದೆಯೆ ಉಳಿಯಲು ನೂರಾರು ಕಾರಣಗಳು….
ವಿಫಲವಾದ ಪ್ರೇಮ, ಆದ ಅವಮಾನ
ಹತಾಶೆಗಳನ್ನೆಲ್ಲ ಚುಕ್ಕು ತಟ್ಟಿ ಮಲಗಿಸುವ ಜೋಗುಳವದು ನನ್ನ ಬರವಣಿಗೆ
ನೊಂದವರಿಗೆ,ಸೋತವರಿಗೆ ಧೈರ್ಯ ತುಂಬಿದ ಲೇಖನಿ.
ಎದುರಾದಾಗ ಹೊಗಳಿ ಹೊನ್ನ ಶೂಲಕೇರಿಸಿದವರೆಷ್ಟೋ….?
ಬೆನ್ನ ಹಿಂದೆ ತೆಗಳಿಯೇ ನನ್ನ ಬರವಣಿಗೆಯ ಹಂಗಿಸಿದವರಷ್ಟೋ?
ಬರೆಯಲಾಗುವದಿಲ್ಲ ಒಮ್ಮೊಮ್ಮೆ
ಕೈಗಳು ಕಂಪಿಸುತ್ತವೆ
ಆಗಾಗ ಕಣ್ಣುಗಳು ತುಂಬಿ ಬಂದು ಮಾತುಗಳು ಮೌನವಾಗುತ್ತವೆ
ಕಲ್ಪನೆಗಳ ಲೋಕದಲ್ಲಿ ಬರೆಯುವುದು ಬಿಟ್ಟವರಿಗೆ ನಿಜವಾದ ಬದುಕಿನಲ್ಲಿ ಬೆರೆಯುವದು ಬಿಟ್ಟವರಿಗೆ ಭಾವನೆಗಳ ಸಂಕೋಲೆಗಳು ಬಾಧಿಸುತ್ತವೆ ಆಗಾಗ
ದೂರುವದು ಯಾರನ್ನು??
ನಾವು ನಂಬಿದವರೆ ನಮ್ಮ ಕತ್ತು ಜೀರುತ್ತಾ ಇರುವಾಗ ಕಾಯುವ ದೇವರು ಕೂಡ ಕೊಡಲಿ ಮಸಿಯುತ್ತಾನೆ
ಒಮ್ಮೊಮ್ಮೆ
ನಾವು ಸರಿ ಇದ್ದರೆ ನಮ್ಮನ್ನು ಕಾಯುತ್ತಾನೆ
ಇಲ್ಲವಾದರೆ ಇಲ್ಲಿ ನಮ್ಮನ್ನೇ ಮುಗಿಸುತ್ತಾನೆ
ನಂಬಿಕೆ ಇದೆ ನನಗೆ ಅಂವ ತಕ್ಕಡಿಯ ಸಮಯಕ್ಕೆ ಸರಿಯಾಗಿ ತೂಗುತ್ತಾನೆ.
ಎದುರಾದಾಗೆಲ್ಲ ಕೇಳುತ್ತಾರೆ ಬಹಳ ಜನ
ಬರೆಯುತ್ತಿಲ್ಲ ಏಕೆ ನೀವು ಈಗೀಗ.
ಬೆರೆಯುತ್ತಿಲ್ಲ ಮೊದಲಿನಂತೆ ಯಾರೊಂದಿಗೂ ಈಗ?
ಅರ್ಥವಾಗಿದೆ ನನಗೆ
ಭಾವನೆಗಳು ಸ್ಪುರಿಸದ ಹೊರತು
ಬರವಣಿಗೆ ಹುಟ್ಟುವುದಿಲ್ಲ……
ಮನಸುಗಳು ಬೆಸೆಯದ ಹೊರತು ಪ್ರೀತಿ ಉಳಿಯುವದಿಲ್ಲ
ಪ್ರತಿ ಹಾರುವ ಹಕ್ಕಿಯೊಳಗೂ ಮೊಟ್ಟೆಗಳು ಚಿಗಿತಾಗಲೇ ಗೂಡು ಕಟ್ಟುತ್ತವೆ ಹಕ್ಕಿ
ಸೋಜಿಗವೆಲ್ಲ ಬರಿ ಕೆಲವು ದಿನಗಳಿಗಷ್ಟೇ
ರೆಕ್ಕೆ ಬಲಿತ ಮೇಲೆ ಮತ್ತೆ ಗೂಡ ಬಿಟ್ಟು ಹಾರುತ್ತವೆ ಅದೇ ಮರಿ ಹಕ್ಕಿ.
ಏನಾಗುವದಿದೆ ಬಾರದ ಸಮಯ ಅದೃಷ್ಟಕ್ಕೆ
ಕಾಯುತ್ತ ಬಿಟ್ಟು ಹೋದವರಿಗಾಗಿ ಕಾಯುತ್ತ ಬಿಕ್ಕಿ…
ಬದುಕ ಸತ್ಯವನ್ನು ಅರಿತು ಬಿಡಿ ಒಮ್ಮೆ
ನಿಮ್ಮ ನೋವುಗಳ ತಣಿಸಲು
ನಿರೀಕ್ಷೆಗಳನ್ನೆ ಇಟ್ಟುಕೊಳ್ಳಬೇಡಿ
ಈ ಭರವಸೆಯಿಲ್ಲದ ಸಂಭಂಧಗಳಲ್ಲಿ.
ನಿಮ್ಮ ನೆರಳೂ ಕೂಡ ಕೈ ಬಿಡುತ್ತದೆ ಆಗಾಗ
ಈ ಕಗ್ಗತ್ತಲ ಬದುಕಿನಲ್ಲಿ.
ಈ ಕಗ್ಗತ್ತಲ ಬದುಕಿನಲ್ಲಿ
ದೀಪಕ ಶಿಂಧೆ
9482766018