ಅವ್ವ
ಕರುಳ ಬಳ್ಳಿ ಹೊತ್ತು ನೀನು
ತುತ್ತು ಉಣಿಸಿ ಬೆಳೆಸಿದೆ
ಜಗಕೆ ಜೀವ ಸೆಲೆಯನಿತ್ತು
ಜಗವ ಬೆಳಗಿ ನಡೆಸಿದೆ
ಕಣ್ಣು ರೆಪ್ಪೆಯಲೂ ನೀನೇ
ಹೃದಯ ಕವಾಟದಲೂ ನೀನೇ
ರಕ್ತದ ಕಣಕಣದಲೂ ನೀನೇ
ನನ್ನ ಉಸಿರಲೂ ನೀನೇ
ಅವ್ವ ನೀನು ಪ್ರೀತಿ ಸೆಲೆ
ಧೈರ್ಯ ತುಂಬಿದ ದೇವತೆ
ಅಡಿಗಡಿಗೆ ರೂಪ ಕೊಟ್ಟು
ದಿಟ್ಟ ಹೆಜ್ಜೆ ಇಡಿಸಿದೆ
ಪದಗಳು ಸಾಲುತ್ತಿಲ್ಲ
ಸ್ವರಗಳು ಸಿಗುತ್ತಿಲ್ಲ
ಕಥೆಕವನಗಳಲಿ ಹಿಡಿಯದಾದೆ
ನಿನ್ನ ಮಹಿಮೆ ಅನಂತಾನಂತ
ನಿನ್ನ ಹೋಲುವ ಮನುಜರಿಲ್ಲ
ದೇವಕಣದ ಜೀವನೀನು
ಚೈತನ್ಯದ ಚಿಲುಮೆ ನೀನು
ನನ್ನ ಲೋಕದ ದೇವತೆ
ಡಾ.ದಾನಮ್ಮ ಚ ಝಳಕಿ