ಕರುನಾಡ ಒಡೆಯರು
ಕರುನಾಡ ಒಡೆಯರು
ಕನ್ನೆಲದ ಧೀರರು
ಕನ್ನಡವ ಕಟ್ಟಿದರು
ಕಲ್ಯಾಣ ಶರಣರು
ದೇವ ಭಾಷೆಯ ತೊರೆದು
ಜನ ಭಾಷೆ ಮೆರೆದು
ಸತ್ಯದ ಕೂರಲಗದೀ
ಕನ್ನಡ ನುಡಿ ಕಟ್ಟಿದರು
ಚಂಪೂ ಮೋಹವ ಬಿಟ್ಟು
ದೇಸಿ ಪ್ರಜ್ಞೆಯ ಕಟ್ಟು
ಕಾಯಕದ ಧರ್ಮವನು
ಕಟ್ಟಿದರು ಶರಣರು
ಹಾಸಿ ದುಡಿದರು ಜನ
ಹಂಚಿ ತಿನ್ನುವ ಮನ
ದಾಸೋಹದ ಮಂತ್ರವ
ಜಪಿಸಿದರು ಶರಣರು
ಅಗ್ರ ಅಂತ್ಯಜರ ಸಂಭ್ರಮದ
ಮದುವೆಯಲಿ
ಶರಣ ಸಮ್ಮತ ಕಾಲ
ಸಮ ಬಾಳು ಸಮ ಪಾಲು
ಬಸವ ಕೋಟೆಗೆ ಮತ್ತೆ
ಲಗ್ಗೆ ಹಾಕುವ ಜನರು
ವಿಷಮತೆಯ ಬೀಜ
ಬಿತ್ತ ಬಹುದು
ಹಸನಾಗಲಿ ಕರುನಾಡು
ಉಸಿರು ಬಸವನ ಬೀಡು
ವಚನಗಳ ಅಸ್ತ್ರಗಳು
ಭುಗಿಲು ನೆಲ ಮುಗಿಲು
ಜಯವಾಗಲಿ ಕರ್ನಾಟಕ
ಜಯ ಜಯತು ಕರುನಾಡು
ಬಸವ ಶರಣರ ನಾಡು
ಶಾಂತಿ ಸಮತೆಯ ನೆಲೆವೀಡು
_________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ

