ಪ್ರಕೃತಿಗೆ ವಿನಮ್ರ ಬೇಡಿಕೆ
ಬಿಸಿಲಿನಿಂದ ಬಸವಳಿದ
ಭೂರಮೆಯ ತಣಿಸಲು
ಬಂದ ಮಾಯಾವಿ ಮಳೆಯೇ
ಏಕಿಷ್ಟು ಕ್ರೂರ ವರ್ತನೆ ?
ಧರೆಯ ಮೇಲಿನ ಸ್ವರ್ಗವೆನಿಸಿದ
ವಯನಾಡನ್ನು
ನರಕಕ್ಕೆ ಸಮ ಮಾಡಿಬಿಟ್ಟು
ಬದುಕನ್ನು ನಾಶ ಮಾಡಿದ
ಪಾಶಾವಿಯೇ
ಏಕೀ ಮುನಿಸು ಹೇಳು ?
ನೀನಿರುವುದೇ ನಮಗಾಗಿ
ಎಂಬ ಮಾನವನ ಅಟ್ಟಹಾಸಕ್ಕೆ
ಪಾಠ ಕಲಿಸಲು
ಸುಖಪಡುತ್ತಿದ್ದ ನಮ್ಮವರ
ಬದುಕು ಬರ್ಬರವಾಗಿಸಿ
ಯಾವ ಸುಖ ಕಂಡೆ
ಹೇಳು ಮೇಘ ಮಂದಾರವೇ?
ಹಸುಗೂಸು, ಹೆತ್ತ ತಾಯಿ, ಹಿರಿಯರು ಕಿರಿಯರೆನ್ನದೇ
ಆಸ್ತಿ ಪಾಸ್ತಿ ಎಲ್ಲಾ ನುಂಗಿ
ನೀರು ಕುಡಿದೆ
ನಾವು ಬದುಕುವುದು ಇಷ್ಟವಿಲ್ಲವೇ
ಹೇಳು ಪ್ರಕೃತಿ ಮಾತೆಯೇ ?
ಬಾಳಿನಲಿ ನೂರಾರು ಕನಸುಗಳನ್ನು ಕಟ್ಟಿಕೊಂಡು
ನಿನ್ನ ನೆರಳಿನಲ್ಲಿ ಬದುಕು
ಅರಸುತ್ತಿರುವೆ
ದಯವಿಟ್ಟು ನಿನ್ನ ರುದ್ರನರ್ತನ ನಿಲ್ಲಿಸುವೆಯಾ ಓ ನಿಸರ್ಗ ದೇವತೆ ?
ನೀನು ನಮ್ಮ ಬದುಕಿನ
ಭರವಸೆಯ ಹೊಂಗಿರಣ
ಬೆಂಕಿಯಾಗಿ ಕಾಡದಿರು
ಮಾನವ ಕುಲದ
ವಿನಮ್ರ ಬೇಡಿಕೆ ಇಷ್ಟೇ
ಸಂತಸದಿ ಬಾಳುವ ವರವೆಮಗೆ ನೀಡು ತಾಯಿ ಪ್ರಕೃತಿ ಮಾತೆ
ಶಿವಕುಮಾರ ಕೋಡಿಹಾಳ. ಮೂಡಲಗಿ