ತಪ್ಪಿಸಿಕೊಂಡಿದೆ
ತಪ್ಪಿಸಿಕೊಂಡಿದೆ ಸ್ವಾಮಿ
ತಪ್ಪಿಸಿಕೊಂಡಿದೆ
ಬಹಳ ದಿನಗಳಾದವು
ಇದು ದೂರ ಹಾರಿ.
ಅಂದು ನಮ್ಮೊಡನೆ
ಬಾಳಿತ್ತು,ಕುಣಿದಿತ್ತು
ಕುಣಿಸಿತ್ತು,
ನಮ್ಮನ್ನು ನೂರು
ಕನಸುಗಳಾಗಿ ಕಾಡಿತ್ತು,
ಲಕ್ಷ ಲಕ್ಷ ಜನರ
ಮನದ ಉಸಿರಾಗಿ
ಹಗಲಿರುಳೂ ಹಾಡಿತ್ತು,
ಜಾತಿ ಭೇದಗಳ ಕಿತ್ತು
ವಂದೇ ಮಾತರಂ
ಹಾಡಿಸಿತ್ತು..
ಎಲ್ಲಿ ಹೋಯಿತೋ
ನಮ್ಮೆಲ್ಲರ ಎದೆಗೆ ಕೊಳ್ಳಿಯಿಟ್ಟು..
ನಮ್ಮನ್ನು ಒಂದುಗೂಡಿಸಿದ
ನಮ್ಮ ರಾಷ್ಟ್ರಪ್ರೇಮ
ಎಲ್ಲೋ ತಪ್ಪಿಸಿಕೊಂಡಿದೆ ,
ನಿಮಗೇನಾದರೂ ಸಿಕ್ಕರೆ
ಮರೆಯದೇ ತಿಳಿಸಿ..
ಸ್ವಾಮಿ,,
ಪುಣ್ಯ ಕಟ್ಟಿಕೊಳ್ಳಿ..
ಡಿಕ್ಕಿ..
ಅದೊಂದು ದಿನ
ಆ ಊರಿನ ರಾಜಕೀಯ
ಸಮುದ್ರದ ಹಡಗಿನಂತೆ
ತೇಲುತ್ತಾ ಹೋಗಿ,
ಬ್ರಷ್ಟಾಚಾರವೆಂಬ
ಬೃಹತ್ ಬಂಡೆಗೆ
ಡಿಕ್ಕಿ ಹೊಡೆದಾಗ
ಊರಿನ ನೂರಾರು
ಅಭಿವೃದ್ಧಿ ಕಾರ್ಯಗಳು
ಒಡೆದು, ಸಿಡಿದು
ನುಚ್ಚು
ನೂರಾದವು..
ಇದೂ ಎಲೆಕ್ಷನ್..
ನೋಡಿ ಗುರು,
ನಮಗೇ ನಿಮ್ಮ ಮತ ನೀಡಿ
ನಿಮ್ಮ ಮತ ಸಮಾಜಕ್ಕೆ ಹಿತ
ಪ್ರತಿ ದಿನವೂ ಬರುವೆ
ನಾ ನಿಮ್ಮ ಸೇವೆಗೆ,
ಪ್ರತಿ ಕ್ಷಣವೂ ಬದುಕುವೆ
ನಿಮ್ಮ ಅಭಿವೃದ್ದಿಗಾಗಿ
ಹಾಗೆ,ಹೀಗೆ,ಹೇಗೇಗೋ
ನೂರಾರು ಆಶ್ವಾಸನೆಗಳ ನೀಡಿ
ಜನರ ಕನಸುಗಳ ಗರಿ ಬಿಚ್ಚಿಸಿ,
ಜನರ ಕಣ್ಣಿಗೆ ಮಣ್ಣೆರಚಿ
ಬೆಂಗಳೂರು ಸೇರುವ
ನಮ್ಮ ದೊಡ್ಡವರು,
ಅಲ್ಲಿ ಹೋಗಿ ಕಳೆದೇ ಹೋಗುವರು..
ಗೆಳೆಯರೊಡನೆ ಮೋಜು ಮಾಡಿ,
ಸೌಧದಲಿ ನಿದ್ದೆ ಮಾಡಿ,
ಆಸ್ತಿ ಗೀಸ್ತಿ ಬಹಳ ಮಾಡಿ,
ಜನರುಗಳ ಕನಸುಗಳ ಮಣ್ಣು ಮಾಡಿ,
ತನಗೊಂದು,ಮಗನಿಗೊಂದು
ಮೊಮ್ಮಗನಿಗೊಂದು,
ಹುಟ್ಟದೇ ಇರುವ
ಮರಿಮಗನಿಗೊಂದು
ಮನೆ, ಸೈಟುಗಳ ಮಾಡಿ
ಐದು ವರ್ಷಕ್ಕೊಮ್ಮೆ
ಮತ್ತೆ ಮತ್ತೆ ಬರುವರು
ಜನರುಗಳ ಮುಂದೆ
ನಕಲಿ ಕನಸುಗಳ ಬಿತ್ತುತ್ತಾ..
(ಇದು 1985 ರಲ್ಲಿ ಬರೆದ ಕವನಗಳು.ಆಗ ನನಗೆ ಇಪ್ಪತ್ತರ ಹರೆಯ)
-ಡಾ.ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು
ಕೆ. ಆರ್.ನಗರ,
ಮೈಸೂರು ಜಿಲ್ಲೆ
ಮೊಬೈಲ್-6363172368